Site icon Vistara News

Actress Priyamani: ಕೇರಳದ ದೇವಾಲಯವೊಂದಕ್ಕೆ `ಯಾಂತ್ರಿಕ ಆನೆ’ ಉಡುಗೊರೆ ಕೊಟ್ಟ ಪ್ರಿಯಾಮಣಿ!

Priyamani donate mechanical elephant

ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ( Thrikkayil Mahadeva Temple ) ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಬಹುಭಾಷಾ ನಟಿ ಪ್ರಿಯಾಮಣಿ. ಆದರೆ ಇದು ಜೀವಂತ ಆನೆಯಲ್ಲ. ಯಾಂತ್ರಿಕ ಆನೆ. ಈ ಯಾಂತ್ರಿಕ ಆನೆಯ ಹೆಸರು ಮಹದೇವನ್‌. ಈ ಯಾಂತ್ರಿಕ ಆನೆಯನ್ನು ದೇವಸ್ಥಾನದಲ್ಲಿ ಸುರಕ್ಷಿತ ರೀತಿಯಲ್ಲಿ ಬಳಸಲಾಗುವುದು ಎಂದು ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (People for Ethical Treatment of Animals India) ಎಂಬ ಸಂಸ್ಥೆ ಮಾಧ್ಯಮಕ್ಕೆ ತಿಳಿಸಿದೆ. ಕೇರಳದಲ್ಲಿ ಪರಿಚಯಿಸಲಾಗುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ.

ಭಾನುವಾರ (ಮಾ.18) ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಹದೇವನ್ ಆನೆಯನ್ನು ಅಧಿಕೃತವಾಗಿ ದೇವಾಲಯಕ್ಕೆ ಸೇರ್ಪಡೆಗೊಳಿಸಲಾಯಿತು. ಕೇರಳದಲ್ಲಿ ಪರಿಚಯಿಸಲಾಗುತ್ತಿರುವ ಎರಡನೇ ಯಾಂತ್ರಿಕ ಆನೆ ಇದಾಗಿದೆ ಎಂದು ವರದಿಯಾಗಿದೆ. ಉದ್ಘಾಟನಾ ಸಮಾರಂಭದ ನಂತರ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ಅವರ ತಂಡದಿಂದ ಚೆಂಡೆ ಮೇಳದ ಪ್ರದರ್ಶನ, ವೇಣು ಮಾರಾರ್ ಮತ್ತು ಅವರ ತಂಡದಿಂದ ಪಂಚವಾದ್ಯ ಪ್ರದರ್ಶನ ನಡೆಯಿತು.

“ತಂತ್ರಜ್ಞಾನದ ಬೆಳವಣಿಗೆಯಿಂದ ನಾವು ನಮ್ಮ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿಕೊಳ್ಳಬಹುದು. ಮತ್ತು ಪ್ರಾಣಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಪರಂಪರೆ ಇದಾಗಲಿದೆ” ಎಂದು ಪ್ರಿಯಾಮಣಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Actress Priyamani:  ಐಷಾರಾಮಿ ಕಾರು ಖರೀದಿಸಿದ ನಟಿ ಪ್ರಿಯಾಮಣಿ; ಬೆಲೆ ಎಷ್ಟು?

ದೇವಸ್ಥಾನದ ಮುಖ್ಯಸ್ಥ ತೆಕ್ಕಿಣಿಯೇದತ್ ವಲ್ಲಭನ್ ನಂಬೂತಿರಿ ಮಾತನಾಡಿ, “ತಮ್ಮ ಕುಟುಂಬಗಳೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುವ ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳಿಗೆ ಗೌರವಾರ್ಥವಾಗಿ ನಾವು ಪ್ರಿಯಾಮಣಿ ನೀಡಿರುವ ಕೃತಕ ಆನೆಯನ್ನು ಸ್ವೀಕರಿಸಿದ್ದೇವೆ. ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲʼʼ ಎಂದು ಹೇಳಿದರು. ಕಳೆದ ವರ್ಷ ಕೇರಳದ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದಲ್ಲಿ ರೋಬೋಟಿಕ್ ಆನೆಯನ್ನು ಪರಿಚಯಿಸಲಾಗಿತ್ತು.

ಕರ್ನಾಟಕ ಮೂಲದ ನಟಿ ಪ್ರಿಯಾಮಣಿ ಪ್ರಾಣಿ ಪ್ರೇಮಿ. ಕೆಲವು ಪ್ರಾಣಿ ದಯಾ ಸಂಘದ ಕಾರ್ಯಗಳಲ್ಲಿ ಪ್ರಿಯಾಮಣಿ ತೊಡಗಿಕೊಂಡಿದ್ದಾರೆ. 2023ರ ಜನಗಣತಿಯ ಪ್ರಕಾರ, ಕೇರಳದಲ್ಲಿ 2,386 ಕಾಡಾನೆಗಳಿವೆ. ದೇವಾಲಯಗಳು, ಅರಣ್ಯ ಇಲಾಖೆ ಮತ್ತು ಖಾಸಗಿ ಮಾಲೀಕರ ಮಾಲೀಕತ್ವದ ಸುಮಾರು 412 ಸೇರಿದಂತೆ 700ಕ್ಕೂ ಹೆಚ್ಚು ಆನೆಗಳು ಜನರ ಸೆರೆಯಲ್ಲಿ ಉಳಿದಿವೆ.

Exit mobile version