63 ವರ್ಷಗಳ ಬಳಿಕ ಹಾಲಿವುಡ್ ಮೊದಲ ಬೃಹತ್ ಪ್ರತಿಭಟನೆ, ಮುಷ್ಕರವನ್ನು (Hollywood Strike) ಕಾಣುತ್ತಿದೆ. ಚಲನಚಿತ್ರ ಬರಹಗಾರರು, ನಟ-ನಟಿಯರು ದೊಡ್ಡ ಸಂಖ್ಯೆಯಲ್ಲಿ ಸೇರಿ ಮುಷ್ಕರ ನಡೆಸುತ್ತಿದ್ದಾರೆ. AMPTP ಅಥವಾ ಅಲೈಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಎಂಬ ಸಂಘಟನೆಯು ಹಾಲಿವುಡ್‌ನಲ್ಲಿದ್ದು, ಇದು ಪ್ರಮುಖ ಹಾಲಿವುಡ್ ಸ್ಟುಡಿಯೋಗಳನ್ನು ಒಳಗೊಂಡಿದೆ. ಇದರ ವಿರುದ್ಧ ನಟ ಮತ್ತು ಬರಹಗಾರರ ಗಿಲ್ಡ್‌ಗಳು ಮುಷ್ಕರಕ್ಕೆ ನಿಂತಿವೆ. ಹಲವು ತಿಂಗಳುಗಳಿಂದ ಇವರ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಫಲಪ್ರದವಾಗಿಲ್ಲ.ನಟರ ಮುಷ್ಕರಕ್ಕೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಬೆಂಬಲಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ʻʻನಾನು ನನ್ನ ಒಕ್ಕೂಟ ಮತ್ತು ಸಹೋದ್ಯೋಗಿಗಳೊಂದಿಗೆ ನಿಲ್ಲುತ್ತೇನೆ. AMPTP ಅಥವಾ ಅಲೈಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಹಲವು ಪ್ರದರ್ಶನಗಳು ಮತ್ತು ಚಲನಚಿತ್ರಗಳ ಚಿತ್ರೀಕರಣದ ಮೇಲೆ ಪರಿಣಾಮ ಬೀರಿದೆ”ಎಂದು ಬರೆದುಕೊಂಡಿದ್ದಾರೆ. ಹಾಲಿವುಡ್‌ನಲ್ಲಿ ಮುಷ್ಕರದಿಂದಾಗಿ ಪ್ರಿಯಾಂಕಾ ಚೋಪ್ರಾ ಮತ್ತು ಜಾನ್ ಸೆನಾ ಅವರ ‘ಹೆಡ್ಸ್ ಆಫ್ ಸ್ಟೇಟ್’ ಶೂಟಿಂಗ್ ಕೂಡ ಸ್ಥಗಿತಗೊಂಡಿತು.
ಕೃತಕ ಬುದ್ಧಿಮತ್ತೆಯಿಂದಾಗಿ (artificial intelligence) ತಮ್ಮ ಕೆಲಸಗಳಿಗೆ ಸಂಚಕಾರ ಬಂದಿದೆ; ವೇತನ ಕಡಿಮೆಯಾಗಿದೆ ಎಂದು ಆಕ್ಷೇಪಿಸಿ 11 ವಾರಗಳ ಹಿಂದೆ ಸಾವಿರಾರು ಸ್ಕ್ರೀನ್ ರೈಟರ್‌ಗಳು (screen writer) ಕೆಲಸದಿಂದ ಹೊರನಡೆದಿದ್ದರು. ಇವರನ್ನು ʼಸ್ಕ್ರೀನ್ ಆಕ್ಟರ್ಸ್ ಗಿಲ್ಡ್ʼ ಎಂಬ ಸಂಸ್ಥೆ ಬೆಂಬಲಿಸಿದೆ. ಇದು ಅಮೆರಿಕದ ಪ್ರಮುಖ ನಟನಟಿಯರು (hollywood actors) ಇರುವ ಸಂಸ್ಥೆ.
ಗಿಲ್ಡ್ ಹಾಗೂ ಚಲನಚಿತ್ರ ತಯಾರಕರನ್ನು ಪ್ರತಿನಿಧಿಸುವ ʼಅಲಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಪ್ರೊಡ್ಯೂಸರ್ಸ್ʼ ಸಂಸ್ಥೆಯ (ಇದರಲ್ಲಿ ವಾಲ್ಟ್ ಡಿಸ್ನಿ, ನೆಟ್‌ಫ್ಲಿಕ್ಸ್ ಮುಂತಾದ ಸಂಸ್ಥೆಗಳಿವೆ) ಜತೆಗೆ ಈ ಕುರಿತು ಸುದೀರ್ಘ ಕಾಲದ ಮಾತುಕತೆ ನಡೆದಿತ್ತು. ಈ ಮಾತುಕತೆ ಮುರಿದು ಬಿದ್ದ ಪರಿಣಾಮ ಮುಷ್ಕರ ಹಾಗೂ ಕೆಲಸದ ನಿಲುಗಡೆ ಘೋಷಿಸಲಾಗಿದೆ. ಇವರೊಂದಿಗೆ ಸಾವಿರಾರು ಚಲನಚಿತ್ರ ಮತ್ತು ದೂರದರ್ಶನ ನಟರೂ ಸೇರಿಕೊಂಡಿದ್ದಾರೆ. ಹೀಗಾಗಿ ಪ್ರತಿಭಟನೆ ದೊಡ್ಡ ಸ್ವರೂಪ ತಾಳಿದೆ.
1960ರಲ್ಲಿ ಇಂಥದೊಂದು ಬೃಹತ್ ಮುಷ್ಕರ ನಡೆದಿತ್ತು. ನಂತರ ಅಮೆರಿಕದ ಅಧ್ಯಕ್ಷರಾದ ರೊನಾಲ್ಡ್ ರೇಗನ್ ಅವರು ಆಗ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು. ಅದರ ಬಳಿಕ ಇದೇ ಈ ಪರಿಯ ವ್ಯಾಪಕತೆ ಹೊಂದಿದ ಪ್ರತಿಭಟನೆಯಾಗಿದೆ.
ಮುಷ್ಕರ ಮುಂದುವರಿದರೆ ಹಲವಾರು ಪ್ರಮುಖ ವೆಬ್ ಸೀರೀಸ್‌ಗಳು, ಟಿವಿ ಶೋಗಳು, ಹಾಗೂ ಸಿನಿಮಾಗಳ ತಯಾರಿ ಅರ್ಧಕ್ಕೇ ನಿಲ್ಲಲಿವೆ. ಯಾಕೆಂದರೆ ಹಾಲಿವುಡ್‌ನ ಹೆಚ್ಚಿನ ಬರಹಗಾರರು ಹಾಗೂ ನಟ- ನಟಿಯರು ಈ ಮುಷ್ಕರ ನಡೆಸುತ್ತಿರುವ ಸಂಘಟನೆಗಳಲ್ಲಿ ಇದ್ದಾರೆ. ಈಗಾಗಲೇ ಬಿಡುಗಡೆ ಘೋಷಣೆಯಾಗಿರುವ ಸಿನಿಮಾ ಹಾಗೂ ಸರಣಿಗಳು ಉತ್ಪಾದನಾ ನಂತರದ ಕೆಲಸಗಳನ್ನು ಮುಗಿಸಿರುವುದರಿಂದ ಅವುಗಳ ಬಿಡುಗಡೆಗೆ ಯಾವುದೇ ತೊಂದರೆಯಾಗಲಾರದು.
ಯಾರ ವಿರುದ್ಧ ಮುಷ್ಕರ?
AMPTP ಅಥವಾ ಅಲೈಯನ್ಸ್ ಆಫ್ ಮೋಷನ್ ಪಿಕ್ಚರ್ ಮತ್ತು ಟೆಲಿವಿಷನ್ ಎಂಬ ಸಂಘಟನೆಯು ಹಾಲಿವುಡ್‌ನಲ್ಲಿದ್ದು, ಇದು ಪ್ರಮುಖ ಹಾಲಿವುಡ್ ಸ್ಟುಡಿಯೋಗಳನ್ನು ಒಳಗೊಂಡಿದೆ. ಇದರ ವಿರುದ್ಧ ನಟ ಮತ್ತು ಬರಹಗಾರರ ಗಿಲ್ಡ್‌ಗಳು ಮುಷ್ಕರಕ್ಕೆ ನಿಂತಿವೆ. ಹಲವು ತಿಂಗಳುಗಳಿಂದ ಇವರ ನಡುವೆ ಮಾತುಕತೆಗಳು ನಡೆಯುತ್ತಿದ್ದು, ಫಲಪ್ರದವಾಗಿಲ್ಲ.
ಇದನ್ನೂ ಓದಿ: Hollywood : 29 ವರ್ಷದ ಗರ್ಲ್ ಫ್ರೆಂಡ್ ಮಗುವಿಗೆ ತಂದೆ ತಾನಲ್ಲ ಎಂದ 83 ವರ್ಷದ ಹಾಲಿವುಡ್ ನಟ!
ಬೇಡಿಕೆ ಏನು?
ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮತ್ತು ರೈಟರ್ಸ್ ಗಿಲ್ಡ್ ಎರಡೂ ತಮ್ಮ ಕೆಲಸಗಳಿಗೆ ಉತ್ತಮ ವೇತನ, ಲಾಭದಲ್ಲಿ ನ್ಯಾಯೋಚಿತ ಪಾಲು, ಕೆಲಸದ ಪರಿಸ್ಥಿತಿಯಲ್ಲಿ ಸುಧಾರಣೆ, ಕೃತಕ ಬುದ್ಧಿಮತ್ತೆಯ ಬಳಕೆಯ ಇಳಿಕೆ ಅಥವಾ ಅದರಿಂದ ತಮ್ಮ ಉದ್ಯೋಗಗಳಿಗೆ ರಕ್ಷಣೆಯನ್ನು ಅಪೇಕ್ಷಿಸಿವೆ. ಹೊಸ ಕಾಲದಲ್ಲಿ ಆಧುನಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಅವುಗಳನ್ನು ಪರಿಹರಿಸಲು ಆಧುನಿಕ ಒಪ್ಪಂದಗಳು ಆಗಬೇಕಿವೆ ಎಂದಿವೆ.