Site icon Vistara News

Priyanka Chopra: ಕೇಸ್ ದಾಖಲಿಸಿ ʻಲಾಸ್ ಏಂಜಲೀಸ್ʼ ಮನೆ ಖಾಲಿ ಮಾಡಿದ ಪ್ರಿಯಾಂಕಾ-ನಿಕ್‌; ಏನಿದಕ್ಕೆ ಕಾರಣ?

Priyanka Chopra Nick Jonas move out Los Angeles mansion

ಬೆಂಗಳೂರು: ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ ತಮ್ಮ ʻಲಾಸ್ ಏಂಜಲೀಸ್ʼ ಮನೆಯನ್ನು ಖಾಲಿ ಮಾಡಿ ಬೇರೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ . ಮಾತ್ರವಲ್ಲ ʻಲಾಸ್ ಏಂಜಲೀಸ್ʼ ಮನೆಯ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ʻಲಾಸ್ ಏಂಜಲೀಸ್ʼ ಮನೆಯಲ್ಲಿ ಸಾಕಷ್ಟು ಹಾನಿಯಾಗಿದ್ದಲ್ಲದೆ ಆರೋಗ್ಯದ ದೃಷ್ಟಿಕೋನದಿಂದಾಗಿ ಬಹಳ ಅಪಾಯಕಾರಿಯಾಗಿತ್ತು ಎಂದು ವರದಿಯಾಗಿದೆ. ಏಳು ಮಲಗುವ ಕೋಣೆಗಳು, ಒಂಬತ್ತು ಸ್ನಾನಗೃಹಗಳು, ವೈನ್ ಸೆಲ್ಲಾರ್, ಅಡುಗೆಮನೆ, ಹೋಮ್ ಥಿಯೇಟರ್, ಸ್ಪಾ ಮತ್ತು ಸ್ಟೀಮ್ ಶವರ್, ಜಿಮ್ ಮತ್ತು ಬಿಲಿಯರ್ಡ್ಸ್ ಕೋಣೆಯನ್ನು ಹೊಂದಿರುವ ಐಷಾರಾಮಿ ಆಸ್ತಿಯನ್ನು ದಂಪತಿ 2019ರಲ್ಲಿ 20 ಕೋಟಿ ರೂ.ಗೆ ಖರೀದಿಸಿದ್ದರು.

ಮೇ 2023ರಲ್ಲಿ ಸಲ್ಲಿಸಲಾದ ಮೊಕದ್ದಮೆಯ ಪ್ರಕಾರ, ಖರೀದಿಯ ನಂತರ ಪೂಲ್ ಮತ್ತು ಸ್ಪಾ ಸಮಸ್ಯೆಗಳು ಕಂಡು ಬಂದವು. ಅದೇ ಸಮಯದಲ್ಲಿ, ಡೆಕ್‌ನಲ್ಲಿರುವ ಬಾರ್ಬೆಕ್ಯೂ ಪ್ರದೇಶದಲ್ಲಿ ನೀರು ಸೋರಿಕೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ ಉಂಟಾದ ಇತರ ಹಾನಿಗಳಿಗೆ ಪರಿಹಾರವನ್ನು ನೀಡಬೇಕು ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Priyanka Chopra: 5ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪ್ರಿಯಾಂಕಾ-ನಿಕ್ ದಂಪತಿ!

ಪ್ರಿಯಾಂಕಾ, ನಿಕ್ ಮತ್ತು ಅವರ ಮಗಳು ಮಾಲತಿ ಮೇರಿ ಈ ಮನೆ ಸರಿಹೋಗುವವರೆಗೂ ಬೇರೆ ಮನೆಯಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಮತ್ತು ನಿಕ್ ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಲಾಸ್ ಏಂಜಲೀಸ್‌ನಿಂದ ಹೊರಗಿದ್ದಾರೆ ಎನ್ನಲಾಗಿದೆ. ನಿಕ್ ಅವರು ಇತ್ತೀಚೆಗೆ ಭಾರತದಲ್ಲಿ ತಮ್ಮ ಬ್ಯಾಂಡ್ ಜೋನಾಸ್ ಬ್ರದರ್ಸ್ ಅವರೊಂದಿಗೆ ಮೊದಲ ಬಾರಿಗೆ ಪ್ರದರ್ಶನ ನೀಡಿದರು. ನಿಕ್, ಕೆವಿನ್ ಮತ್ತು ಜೋ ಲೊಲ್ಲಾಪಲೂಜಾ ಇಂಡಿಯಾದಲ್ಲಿ ಪ್ರದರ್ಶನ ನೀಡಿದರು.

2019ರ ಬಳಿಕ ಪ್ರಿಯಾಂಕಾ ಯಾವುದೇ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ʻಜೀ ಲೆ ಜರಾʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್‌ನಲ್ಲಿ ಪ್ರಿಯಾಂಕಾ ಮುಂದೆ ಇದ್ರಿಸ್ ಎಲ್ಬಾ ಮತ್ತು ಜಾನ್ ಸೆನಾ ಅವರೊಂದಿಗೆ ʻಹೆಡ್ಸ್ ಆಫ್ ಸ್ಟೇಟ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version