ಬೆಂಗಳೂರು : ದಿಯಾ ಸಿನಿಮಾದ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬಾರ್ (Pruthvi Ambaar) ಈಗ ‘ದೂರದರ್ಶನ’ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ. ವಿಭಿನ್ನ ಕಥಾಹಂದರದ ಈ ಸಿನಿಮಾದ ಶೀರ್ಷಿಕೆಯ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದ್ದು, ಸಾಕಷ್ಟು ಸದ್ದು ಮಾಡಿತ್ತು.
ಇದೀಗ ದೂರದರ್ಶನ ಚಿತ್ರತಂಡ ನಾಯಕಿಯನ್ನು ಚಿತ್ರರಸಿಕರಿಗೆ ಪರಿಚಯಿಸಿದೆ. ಈ ಹಿಂದೆ ʻಇಲ್ಲಿರಲಾರೆ ಅಲ್ಲಿಗೆ ಹೋಗಲಾರೆʼ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿ ಇಟ್ಟಿದ್ದ ಅಯನಾ ನಟ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ನಟಿಸಲಿದ್ದಾರೆ.
ದೂರದರ್ಶನ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್ ಕರೆಯಲಾಗಿತ್ತು. 30ರಿಂದ 40 ಮಂದಿ ಆಡಿಷನ್‌ನಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಅಯನಾ ಫೈನಲ್ ಆಗಿ ಆಯ್ಕೆಯಾದರು ಎಂದು ನಿರ್ದೇಶಕ ಸುಕೇಶ್ ಶೆಟ್ಟಿ ಹೇಳಿದ್ದಾರೆ. ನಟಿ ಅಯನಾ ಅವರು ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಇದನ್ನೂ ಓದಿ | ದೂರದರ್ಶನ ಸಿನಿಮಾದ ಟೈಟಲ್ ಟೀಸರ್| ಇದು 70-80ರ ದಶಕದ ನೆನಪಿನ ಯಾನ
ಆಟೋ ಡ್ರೈವರ್ ಮಗಳಾಗಿ ಅಪ್ಪನ ಆಸರೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತದೆ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಉಗ್ರಂ ಮಂಜು, ಸುಂದರ್ ವೀಣಾ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಸಿನಿಮಾದಲ್ಲಿದೆ.
ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ನಡುವಿನ ಒಂದು ಚಿಕ್ಕ ಊರೊಳಗೆ ಟಿವಿ ಬಂದ ಮೇಲೆ ಹೇಗೆಲ್ಲಾ ಪ್ರಭಾವ ಬೀರುತ್ತದೆ, ಅಂದಿನ ಕಾಲಘಟ್ಟದ ಹಲವಾರು ವಿದ್ಯಮಾನಗಳನ್ನು ನೋಡುಗರು ಮೆಲುಕು ಹಾಕುವಂತೆ ನಿರ್ದೇಶಕ ಸುಕೇಶ್ ಶೆಟ್ಟಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸುಕೇಶ್ ಅವರಿಗೆ ಇದು ಚೊಚ್ಚಲ ಸಿನಿಮಾ ಆಗಿದ್ದು, ಈ ಹಿಂದೆ ಅವರು ಸಂಭಾಷಣೆಕಾರರಾಗಿ, ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ನೈಜ ಘಟನೆ ಹಾಗೂ ಕಾಲ್ಪನಿಕತೆ ಬೆರೆತ ಸಿನಿಮಾವಾಗಿರುವ ದೂರದರ್ಶನ ಚಿತ್ರೀಕರಣ ಮಂಗಳೂರು ಪುತ್ತೂರು ಮಧ್ಯದ ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ. ವಿಎಸ್ ಮೀಡಿಯಾ ಎಂಟರ್ ಪ್ರೈಸಸ್ ಬ್ಯಾನರ್‌ನಡಿ ರಾಜೇಶ್ ಭಟ್ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಕ್ಯಾಮೆರಾ ವರ್ಕ್, ನಂದೀಶ್ ಟಿಜಿ ಸಂಭಾಷಣೆ, ಪ್ರದೀಪ್ ಆರ್ ರಾವ್ ಸಂಕಲನ ಸಿನಿಮಾಕ್ಕಿದೆ.
ಪೃಥ್ವಿ ಅವರು ಲವ್ ಮಾಕ್ಟೇಲ್ ಖ್ಯಾತಿಯ ಮಿಲನಾ ನಾಗರಾಜ್ ಅವರೊಂದಿಗೆ ನಟಿಸಿರುವ ಫಾರ್ ರೆಜಿಸ್ಟ್ರೇಷನ್ (FOR REGN) ಸಿನಿಮಾ ಇನ್ನೇನು ಚಿತ್ರೀಕರಣ ಪೂರ್ಣಗೊಳ್ಳುವ ಹಂತದಲ್ಲಿದೆ. ಶುಗರ್ ಲೆಸ್ ಸಿನಿಮಾ ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿ ಸೌಂಡಾಗಿದೆ. ಪೃಥ್ವಿ ಅಂಬಾರ್ ಹಾಗೂ ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸುತ್ತಿರುವ ಸಿನಿಮಾಗೆ ಭುವನಂ ಗಗನಂ ಎಂಬ ಟೈಟಲ್ ಇಡಲಾಗಿದ್ದು, ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.
ಇದನ್ನೂ ಓದಿ | ದೂರದರ್ಶನ: ಇದು ಟಿವಿಯೊಂದಿಗೆ ಬದಲಾದ 80ರ ದಶಕದ ಚಿತ್ರಣ