ಬೆಂಗಳೂರು: ʼದಿಯಾʼ (Dia) ಸಿನಿಮಾ ಮೂಲಕ ಕನ್ನಡಿಗರ ಹೃದಯ ಕದ್ದ ಕರಾವಳಿ ಕುವರ ಪೃಥ್ವಿ ಅಂಬಾರ್ (Pruthvi Ambaar) ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜತೆಗೆ ತಮಿಳಿಗೂ ಪಾದರ್ಪಣೆ ಮಾಡಿರುವ ಪೃಥ್ವಿ, ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಯುವ ಪ್ರತಿಭೆ ವೈಭವ್ ಮಹಾದೇವ್ ಸಾರಥ್ಯ ‘ಜೂನಿ’ ಸಿನಿಮಾದಲ್ಲಿ ಪೃಥ್ವಿ ನಾಯಕನಾಗಿ ನಟಿಸುತ್ತಿದ್ದಾರೆ.
‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ʼಜೂನಿʼ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಪ್ರಾಗ್ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶನದ ಕೋರ್ಸ್ ಮುಗಿಸಿರುವ ಅವರೀಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಭಿನ್ನ ಟೈಟಲ್‌ನ ʼಜೂನಿʼ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಪೃಥ್ವಿ ಅಂಬಾರ್ ಜತೆಗೆ ನಾಯಕಿ ರಿಷಿಕಾ ನಾಯಕ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಜೂನಿ’ ರೋಮ್ಯಾಂಟಿಕ್ ಕಥಾ ಹಂದರದ ಸಿನಿಮಾ ಎಂದು ಚಿತ್ರ ತಂಡ ಹೇಳಿಕೊಂಡಿದೆ. ʼದಿಯಾʼ ಬಳಿಕ ಪೃಥ್ವಿ ಮತ್ತೊಮ್ಮೆ ಪ್ರೇಮಕಥೆಗೆ ಬಣ್ಣ ಹಚ್ಚಿದ್ದಾರೆ. ಯಾರ ಮೇಲೆ ಪ್ರೀತಿ ಹುಟ್ಟುತ್ತೋ ಅವರ ಮೇಲೆ ಪ್ರೀತಿ ಆಗುತ್ತಾ? ಎಂಬ ಕಥೆಯ ಎಳೆ ಇಟ್ಕೊಂಡು ಚಿತ್ರ ಹೆಣೆಯಲಾಗಿದೆ. ತ್ರಿಶೂಲ ಕ್ರಿಯೇಷನ್‌ನಡಿ ಮೋಹನ್ ಕುಮಾರ್ ಎಸ್. ಹಣ ಹೂಡಿದ್ದು, ಶ್ರೇಯಸ್ ವೈ.ಎಸ್. ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ.
ಸದ್ದಿಲ್ಲದೇ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮುಗಿಸಿರುವ ʼಜೂನಿʼ ಚಿತ್ರತಂಡ ಮುಂದಿನ ವರ್ಷ ಜನವರಿಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ನಕುಲ್ ಅಭ್ಯಂಕರ್ ಸಂಗೀತ, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ., ಜಿತಿನ್ ದಾಸ್ ಛಾಯಾಗ್ರಹಣ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಫಸ್ಟ್ ಲುಕ್ ರಿಲೀಸ್ ಮಾಡಿರುವ ʼಜೂನಿʼ ಬಳಗ ಟೀಸರ್, ಟ್ರೇಲರ್ ಹಾಡುಗಳು ಹೀಗೆ ಒಂದೊಂದಾಗಿ ರಿಲೀಸ್ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ: Milana Nagaraj: ಮಿಲನಾ ನಾಗರಾಜ್-ಪೃಥ್ವಿ ಅಂಬಾರ್ ಸಿನಿಮಾದಿಂದ ಬಿಗ್ ಅಪ್‌ಡೇಟ್!ʻನಿಧಿಮಾʼ ಫ್ಯಾನ್ಸ್ ಫುಲ್ ಖುಷ್!
2014ರಲ್ಲಿ ತೆರೆಕಂಡ ʼಬರ್ಕೆʼ ತುಳು ಚಿತ್ರದ ಮೂಲಕ ಪೃಥ್ವಿ ಅಂಬಾರ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ 2016ರಲ್ಲಿ ʼಕರ್ವʼ ಚಿತ್ರದ ನಟನೆ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದರ್ಪಣೆ ಮಾಡಿದರು. ಒಂದಷ್ಟು ಕನ್ನಡ, ತುಳು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ 2020ರಲ್ಲಿ ತೆರೆಕಂಡ ʼದಿಯಾʼ. ಅಶೋಕ್ ನಿರ್ದೇಶನನದ ಈ ಚಿತ್ರದ ಆದಿ ಪಾತ್ರದ ಮೂಲಕ ಅವರು ಜನಪ್ರಿಯರಾದರು. ಇದೇ ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಕಳೆದ ವರ್ಷ ಡಾ.ಶಿವರಾಜ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದ ʼಭೈರಾಗಿʼ ಚಿತ್ರ ತೆರೆ ಕಂಡಿತ್ತು. ಪೃಥ್ವಿ ಅಂಬಾರ್ ಈ ವರ್ಷ ಮರಾಠಿ ಮತ್ತು ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ʼಜೂನಿʼ ಸಿನಿಮಾ ಮೂಲಕ ಮತ್ತೊಮ್ಮೆ ಲವರ್ ಬಾಯ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ