Site icon Vistara News

Puneeth Parva | ನನಗೆ ಡಾನ್ಸ್‌ ಕಲಿಸಿದ್ದೇ ಅಪ್ಪು, ಅವರು ಎಂದಿಗೂ ಜೀವಂತ: ಒಡನಾಟ ನೆನೆದ ರಮ್ಯಾ

Ramya

ಬೆಂಗಳೂರು: ಪುನೀತ್‌ ಪರ್ವ (Puneeth Parva) ಕಾರ್ಯಕ್ರಮದಲ್ಲಿ ಪುನೀತ್‌ ರಾಜಕುಮಾರ್‌ ಅವರು ನಟಿಸಿದ ಹಾಡಿಗೆ ನಟಿ ರಮ್ಯಾ ಹೆಜ್ಜೆ ಹಾಕಿದರು. ಇದಾದ ಬಳಿಕ ಮಾತನಾಡಿದ ಅವರು “ನನಗೆ ಚೆನ್ನಾಗಿ ಡಾನ್ಸ್‌ ಮಾಡಲು ಬರುತ್ತಿರಲಿಲ್ಲ. ಆದರೆ, ಪುನೀತ್‌ ರಾಜಕುಮಾರ್‌ ಅವರು ನನಗೆ ಡಾನ್ಸ್‌ ಮಾಡುವುದನ್ನು ಕಲಿಸಿದರು” ಎಂದು ಹೇಳಿದರು.

“ರಮ್ಯಾ ಅವರೆ, ಹೀಗೆ ಡಾನ್ಸ್‌ ಮಾಡಿ ಎಂದು ಹೇಳುತ್ತಿದ್ದರು. ಡಾನ್ಸ್‌ ಮಾಸ್ಟರ್‌ ಹತ್ತಿರ ಹೋಗಿ ರಮ್ಯಾ ಅವರಿಗೆ ಡಾನ್ಸ್‌ ಕಷ್ಟ ಆಗ್ತಿದೆ. ಡಾನ್ಸ್‌ ಚೇಂಜ್‌ ಮಾಡೋಣ ಎಂದು ಹೇಳುತ್ತಿದ್ದರು. ಇಂದು ಜನ ಇಷ್ಟೊಂದು ಪ್ರೀತಿ ತೋರಿಸುತ್ತಿದ್ದಾರೆ ಎಂದರೆ ಅದಕ್ಕೆ ರಾಜಕುಮಾರ್‌ ಅವರ ಕುಟುಂಬವೇ ಕಾರಣ. ನಾನು ಅಪ್ಪು ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರ ಕುಟುಂಬ ಹಾಗೂ ಅಭಿಮಾನಿಗಳ ಮೂಲಕ ಅವರು ಈಗಲೂ ನಮ್ಮೊಂದಿಗೆ ಇದ್ದಾರೆ” ಎಂದು ನನಪು ಮಾಡಿಕೊಂಡರು.

ಅವರ ಜತೆಗಿದ್ದಿದ್ದೇ ಭಾಗ್ಯ ಎಂದ ಶ್ರುತಿ
“ಜನ ಅವರನ್ನು ತುಂಬ ಪ್ರೀತಿಸುತ್ತಿದ್ದರು. ಅಂತಹ ಒಬ್ಬ ಕಲಾವಿದ ನಮ್ಮ ಮಧ್ಯೆ ಇದ್ದರಲ್ಲ, ಅವರ ಜತೆ ನಾವು ಇದ್ದೆವೆಲ್ಲ ಎಂಬುದೇ ಪುನೀತ. ಗಂಧದ ಗುಡಿ ಸಿನಿಮಾ ಯಶಸ್ವಿಯಾಗಲಿ. ಒಬ್ಬ ವ್ಯಕ್ತಿಯಾಗಿ ಪುನೀತ್‌ ಅವರು ಹೇಗಿದ್ದರು ಎಂಬುದು ಗಂಧದ ಗುಡಿ ಮೂಲಕ ನೋಡಬಹುದು. ಇಂತಹ ಸುಂದರ ಕಾರ್ಯಕ್ರಮ ಆಯೋಜಿಸಿದ ಪುನೀತ್‌ ಅವರ ಕುಟುಂಬಸ್ಥರಿಗೆ ಧನ್ಯವಾದ” ಎಂದು ನಟಿ ಶ್ರುತಿ ಹೇಳಿದರು.

ವೇದಿಕೆ ಮೇಲೆ ನಟಿಯರಾದ ಶ್ರುತಿ, ರಮ್ಯಾ, ಸುಧಾರಾಣಿ, ಪ್ರಿಯಾ ಆನಂದ್‌ ಹಾಗೂ ಅನು ಪ್ರಭಾಕರ್.

ಪುನೀತ್‌ ಜತೆ ನಟಿಸಿದ ಹೆಮ್ಮೆ ಇದೆ: ಅನು ಪ್ರಭಾಕರ್
ನಟಿ ಅನು ಪ್ರಭಾಕರ್‌ ಮಾತನಾಡಿ, “ಅನ್ನಪೂರ್ಣ ಆಗಿ ನನಗೆ ನನ್ನ ತಾಯಿ ಜನ್ಮ ನೀಡಿದರೆ, ಅನು ಪ್ರಭಾಕರ್‌ ಆಗಿ ಜನ್ಮ ನೀಡಿದ್ದು ಪಾರ್ವತಮ್ಮ ರಾಜಕುಮಾರ್‌ ಅವರು. ಅಪ್ಪು ಅವರ ಜತೆ ಜೇಮ್ಸ್‌ ಸಿನಿಮಾದಲ್ಲಿ ನಟಿಸಿದೆ. ಇದೇ ಕೊನೆಯ ಸಿನಿಮಾ ಆಯಿತಲ್ಲ ಎಂಬ ಬೇಸರ ಇದೆ. ಆದರೆ, ಮುಂದೆ ನನ್ನ ಮಗಳು ಜೇಮ್ಸ್‌ ಸಿನಿಮಾ ನೋಡಿದರೆ ಆಗ ನಾನು ಹೆಮ್ಮೆಯಿಂದ ಪುನೀತ್‌ ರಾಜಕುಮಾರ್‌ ಅವರ ಜತೆ ನಟಿಸಿದ್ದೇನೆ ಎಂದು ಹೇಳುತ್ತೇನೆ. ಜೇಮ್ಸ್‌ ಸಿನಿಮಾದಲ್ಲಿ ನಟಿಸುವಾಗ ಧರಿಸಿದ ಸೀರೆಯನ್ನೇ ಧರಿಸಿ ಇಲ್ಲಿಗೆ ಬಂದಿದ್ದೇನೆ” ಎಂದರು.

ಕನ್ನಡಕ್ಕೆ ಪರಿಚಯಿಸಿದ್ದೇ ಅಪ್ಪು
“ಕನ್ನಡ ಸಿನಿಮಾ, ಕನ್ನಡ ಭಾಷೆ, ಕನ್ನಡ ಊಟಕ್ಕೆ ನನ್ನನ್ನು ಪರಿಚಯಿಸಿದ್ದೇ ಪುನೀತ್‌ ರಾಜಕುಮಾರ್‌ ಅವರು. ಅವರ ಜತೆ ನಟಿಸಿದ್ದೇ ನನಗೆ ಭಾಗ್ಯ” ಎಂದು ರಾಜಕುಮಾರ ಹಾಗೂ ಜೇಮ್ಸ್‌ ಚಿತ್ರಗಳಲ್ಲಿ ಪುನೀತ್‌ ಜತೆ ನಟಿಸಿದ ಪ್ರಿಯಾ ಆನಂದ್‌ ಹೇಳಿದರು. “ನಾನು ಖಂಡಿತವಾಗಿಯೂ ಗಂಧದ ಗುಡಿ ಸಿನಿಮಾ ನೋಡುತ್ತೇನೆ. ಅಪ್ಪು ಯಾವಾಗಲೂ ಸ್ಫೂರ್ತಿ” ಎಂದು ಸುಧಾರಾಣಿ ತಿಳಿಸಿದರು.

ಇದನ್ನೂ ಓದಿ | Puneeth Parva | ನಾನು ಇರುವವರೆಗೂ ಅಪ್ಪು ಹಾಡಿದ ಹಾಡು ಹೃದಯದಲ್ಲಿರುತ್ತೆ, ರಾಘಣ್ಣ ಭಾವುಕ ನುಡಿ

Exit mobile version