Site icon Vistara News

Puneeth Rajkumar: ಪುನೀತ್‌ ಅಭಿನಯದ ಟಾಪ್ 10 ಚಿತ್ರಗಳಿವು

#image_title

ಬೆಂಗಳೂರು: ನಮ್ಮನ್ನಗಲಿರುವ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಅವರ ಜನ್ಮದಿನಕ್ಕೆ ಇನ್ನು ಕೆಲವೇ ದಿನಗಳು (ಮಾ.17) ಉಳಿದಿವೆ. ಪುನೀತ್‌ ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಸಿನಿಮಾಗಳ ಮೂಲಕ ಚಿರಕಾಲ ಉಳಿದುಕೊಳ್ಳುತ್ತಾರೆ. ಬಾಲ್ಯದಿಂದಲೇ ತಂದೆಯೊಂದಿಗೆ ಸಿನಿಮಾಗಳಲ್ಲಿ ನಟಿಸಿ, ನಾಯಕ ನಟನಾಗಿಯೂ ಮಿಂಚಿ ಮರೆಯಾದವರು ಅವರು. ಕರ್ನಾಟಕದ ಪ್ರೀತಿಯ ಅಪ್ಪು ಆಗಿದ್ದ ಪುನೀತ್‌ ಅವರ ಟಾಪ್‌ 10 ಸಿನಿಮಾಗಳ ಹಿನ್ನೋಟ ಇಲ್ಲಿದೆ.

ಚಲಿಸುವ ಮೋಡಗಳು

ಡಾ. ರಾಜ್‌ಕುಮಾರ್‌ ಮತ್ತು ಅಂಬಿಕಾ ಅಭಿನಯದ ಈ ಸಿನಿಮಾ 1982ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಪುನೀತ್‌ ಆಗ ಮಾಸ್ಟರ್‌ ಲೋಹಿತ್‌ ಆಗಿದ್ದರು. ಇಂದಿಗೂ ಕನ್ನಡಿಗರ ಫೇವರಿಟ್‌ ಆಗಿರುವ ʼಕಾಣದಂತೆ ಮಾಯವಾದನೋʼ ಹಾಡು ಇದೇ ಸಿನಿಮಾದ್ದು. ವಿಶೇಷವೆಂದರೆ ಈ ಗೀತೆಗೆ ಧ್ವನಿಯಾದವರೂ ಪುನೀತ್‌ ಅವರೇ. ಈ ಸಿನಿಮಾದಲ್ಲಿನ ನಟನೆಗೆ ಪುನೀತ್‌ ಅವರಿಗೆ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಬಾಲನಟ ಪ್ರಶಸ್ತಿಯೂ ದೊರಕಿತ್ತು. ಈ ಸಿನಿಮಾ ಸಿಂಗೀತಂ ಶ್ರೀನಿವಾಸ ನಿರ್ದೇಶನದಲ್ಲಿ ಮೂಡಿಬಂದಿದೆ.

ಬೆಟ್ಟದ ಹೂ


ಖ್ಯಾತ ಇಂಗ್ಲಿಷ್‌ ಕಾದಂಬರಿಯೊಂದನ್ನು ಆಧರಿಸಿ ಮಾಡಲಾಗಿದ್ದ ಸಿನಿಮಾವಿದು. 1985ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಪದ್ಮಾ ವಸಂತಿ ನಟಿಸಿದ್ದರು. ಚಿ. ಉದಯ್‌ಶಂಕರ್‌ ಬರೆದ ಚಿತ್ರಕಥೆಗೆ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಬಂಡವಾಳ ಹೂಡಿದ್ದರು. ಈ ಚಿತ್ರದ ನಟನೆಗಾಗಿ ಪುನೀತ್ ಅತ್ತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.

ಅಪ್ಪು

ಪುನೀತ್‌ ರಾಜ್‌ಕುಮಾರ್‌ ಅವರು ಚಂದನವನದ ನಾಯಕ ನಟನಾಗಿ ಕಾಣಿಸಿಕೊಂಡ ಮೊದಲನೇ ಸಿನಿಮಾ ʼಅಪ್ಪುʼ. ಪುರಿ ಜಗನ್ನಾಥ್‌ ನಿರ್ದೇಶನದ ಈ ಸಿನಿಮಾ 2002ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ರಕ್ಷಿತಾ ಪ್ರೇಮ್‌ ನಟಿಸಿದ್ದಾರೆ.

ಆಕಾಶ್

ಮೋಹಕ ತಾರೆ ರಮ್ಯಾ ಮತ್ತು ಪವರ್‌ ಸ್ಟಾರ್‌ ಪುನೀತ್‌ ಒಟ್ಟಾಗಿ ನಟಿಸಿದ ಎರಡನೇ ಸಿನಿಮಾ ʼಆಕಾಶ್‌ʼ. ಈ ಸಿನಿಮಾವನ್ನು ಮಹೇಶ್‌ ಬಾಬು ಅವರು ನಿರ್ದೇಶಿಸಿದರು. ಅವರಿಗೆ ಇದು ಮೊದಲನೇ ಸಿನಿಮಾವಾಗಿತ್ತು. 2005 ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಸಿನಿಮಾ ಇನ್ನೂರಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆಯಿತು.


ಅರಸು


ಆಕಾಶ್‌ ಸಿನಿಮಾ ಪುನೀತ್‌ ಮತ್ತು ರಮ್ಯಾ ಜತೆಯಾಗಿ ನಟಿಸಿದ ಮೂರನೇ ಸಿನಿಮಾ. ಇದೊಂದು ತ್ರಿಕೋನ ಪ್ರೇಮಕಥೆಯಾಗಿದ್ದು, ಇದರಲ್ಲಿ ಮೀರಾ ಜಾಸ್ಮಿನ್‌ ಕೂಡ ನಾಯಕಿಯಾಗಿ ನಟಿಸಿದ್ದಾರೆ. ಇದರಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆದಿತ್ಯ ಮತ್ತು ಶ್ರೀಯಾ ಶರಣ್‌ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದಾಗಿ ಪುನೀತ್ ಅವರಿಗೆ ಫಿಲ್ಮ್‌ ಫೇರ್ ಪ್ರಶಸ್ತಿ ಬಂದಿತ್ತು.

ಮಿಲನ

2007ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ಪಾರ್ವತಿ ಮೆನನ್‌ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ನಿರ್ದೇಶನವಿರುವ ಸಿನಿಮಾದಲ್ಲಿ ನಟಿ ಪೂಜಾ ಗಾಂಧಿ ಅತಿಥಿ ಪಾತ್ರದಲ್ಲಿದ್ದಾರೆ. ಈ ಚಿತ್ರಕ್ಕೆ ಪುನೀತ್‌ಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿದೆ.


ಜಾಕಿ

ದುನಿಯಾ ಖ್ಯಾತಿಯ ನಿರ್ದೇಶಕ ಸೂರಿ ಅವರ ನಿರ್ದೇಶನದಲ್ಲಿ ಜಾಕಿ ಸಿನಿಮಾ ಬಂದಿದೆ. ಈ ಸಿನಿಮಾದಲ್ಲಿ ಪುನೀತ್‌ ಮತ್ತು ಭಾವನಾ ಜೋಡಿಯನ್ನು ಕಾಣಬಹುದು. ಈ ಚಿತ್ರ ಕೂಡ ಪುನೀತ್‌ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ತಂದುಕೊಟ್ಟಿತು. ಈ ಸಿನಿಮಾ 2010ರಲ್ಲಿ ಬಿಡುಗಡೆಯಾಗಿದೆ.


ಪರಮಾತ್ಮ

ಯೋಗರಾಜ್‌ ಭಟ್‌ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್‌, ದೀಪಾ ಸನ್ನಿಧಿ ಹಾಗೂ ಐಂದ್ರಿತಾ ರೈ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳು ಸುಪ್ರಸಿದ್ಧವಾಗಿವೆ. ಇಂದಿಗೂ ಅನೇಕರ ಫೇವರಿಟ್‌ ಲಿಸ್ಟ್‌ನಲ್ಲಿವೆ. 2011ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಆಡಿಯೋ ರಿಲೀಸ್‌ ಆಗಿ ಮೂರೇ ದಿನಗಳಲ್ಲಿ ಒಂದೂವರೆ ಲಕ್ಷ ಸಿಡಿ ಕ್ಯಾಸೆಟ್‌ ಮಾರಾಟವಾಗಿ, ದಾಖಲೆ ಬರೆದಿತ್ತು.

ದೊಡ್ಮನೆ ಹುಡುಗ

ದುನಿಯಾ ಸೂರಿ ನಿರ್ದೇಶನದಲ್ಲಿ ಬಂದ ಮತ್ತೊಂದು ಸಿನಿಮಾವಿದು. ಇದರಲ್ಲಿ ಪುನೀತ್‌ಗೆ ಜೋಡಿಯಾಗಿ ರಾಧಿಕಾ ಪಂಡಿತ್‌ ನಟಿಸಿದ್ದಾರೆ. ಇದು ಪುನೀತ್‌ ನಾಯಕ ನಟನಾಗಿ ನಟಿಸಿದ 25ನೇ ಚಿತ್ರವೂ ಹೌದು. ಈ ಸಿನಿಮಾ 2016ರಲ್ಲಿ ಬಿಡುಗಡೆಯಾಯಿತು.

ರಾಜಕುಮಾರ

ಪುನೀತ್‌ ರಾಜ್‌ಕುಮಾರ್‌ ಜತೆ ತಮಿಳಿನ ನಟಿ ಪ್ರಿಯಾ ಆನಂದ್‌ ಜೋಡಿಯಾಗಿ ಕಾಣಿಸಿಕೊಂಡ ಚಿತ್ರವಿದು. ಈ ಚಿತ್ರದ ಬೊಂಬೆ ಹೇಳುತೈತೆ ಹಾಡು ಅಪ್ಪು ಅಭಿಮಾನಿಗಳ ಅಚ್ಚುಮೆಚ್ಚಿನ ಹಾಡಾಗಿದೆ. ಈ ಸಿನಿಮಾ ಅತ್ಯದ್ಭುತ ಪ್ರದರ್ಶನ ಕಂಡು, ಪುನೀತ್‌ ಅವರ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. 2017ರಲ್ಲಿ ತೆರೆ ಕಂಡ ಈ ಸಿನಿಮಾಕ್ಕೆ ಸಂತೋಷ್‌ ಆನಂದರಾಮ್‌ ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ.

Exit mobile version