Site icon Vistara News

Pushpa 2: ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಬಹು ನಿರೀಕ್ಷಿತ ʼಪುಷ್ಪ 2ʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

Pushpa 2

Pushpa 2

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಟಾಲಿವುಡ್‌ನ ʼಪುಷ್ಪ 2ʼ (Pushpa 2) ಕೂಡ ಒಂದು. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ ಈ ಅಲ್ಲು ಅರ್ಜುನ್‌ (Allu Arjun) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ (Rashmik Mandanna) ಅಭಿನಯದ ಚಿತ್ರ ಈಗಾಗಲೇ ದೇಶಾದ್ಯಂತ ನಿರೀಕ್ಷೆ ಹುಟ್ಟು ಹಾಕಿದೆ. ಕಮರ್ಷಿಯಲ್‌ ಚಿತ್ರಗಳ ಮಾಂತ್ರಿಕ ಸುಕುಮಾರ್‌ (Sukumar) ಈ ‘ಪುಷ್ಪ 2: ದಿ ರೂಲ್’ (Pushpa 2: The Rule) ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಪೋಸ್ಟರ್‌ನಿಂದಲೇ ಗಮನ ಸೆಳೆದಿರುವ ಈ ಸಿನಿಮಾ ತಂಡ ಇದೀಗ ಬಹು ಮುಖ್ಯ ಅಪ್‌ಡೇಟ್‌ ತಿಳಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಪೋಸ್ಟರ್‌ ಹಂಚಿಕೊಂಡು ಟೀಸರ್‌ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

ಟೀಸರ್‌ ಯಾವಾಗ?

ಚಿತ್ರದ ನಾಯಕ ಅಲ್ಲು ಅರ್ಜುನ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 8ರಂದು ʼಪುಷ್ಪ 2ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. ಆ ಮೂಲಕ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ʼʼಪುಷ್ಪ ಮಾಸ್‌ ಜಾತ್ರೆ ಆರಂಭವಾಗಲು ದಿನಾಂಕ ನಿಗದಿಯಾಗಿದೆ. ʼಪುಷ್ಪ 2: ದಿ ರೂಲ್‌ʼ ಚಿತ್ರದ ಟೀಸರ್‌ ಏಪ್ರಿಲ್‌ 8ರಂದು ಹೊರ ಬರಲಿದೆ. ಈತ (ಪುಷ್ಪ) ಇನ್ನಷ್ಟು ಶಕ್ತಿಯೊಂದಿಗೆ (Double the fire) ನಿಮ್ಮ ಮುಂದೆ ಬರಲಿದ್ದಾನೆ. ʼಪುಷ್ಪ 2ʼ ಸಿನಿಮಾ ವಿಶ್ವಾದ್ಯಂತ 2024ರ ಆಗಸ್ಟ್‌ 15ರಂದು ತೆರೆಗೆ ಬರಲಿದೆʼʼ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಕೆಂಪು ಬಣ್ಣದ ಹಿನ್ನೆಲೆಯೊಂದಿಗೆ ಗೆಜ್ಜೆ ಕಟ್ಟಿರುವ ಕಾಲಿನ ಫೋಟೊ ಪೋಸ್ಟರ್‌ನಲ್ಲಿ ಕಂಡು ಬಂದಿದ್ದು, ಅಭಿನಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಹಿಂದೆ ರಿಲೀಸ್‌ ಆದ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್‌ ಸೀರೆ ಸುತ್ತಿ, ಮೂಗುತಿ, ಜುಮ್ಕಾ, ಆಭರಣ ತೊಟ್ಟು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಕಥೆಯ ಬಗ್ಗೆಯೂ ಕುತೂಹಲ ಮೂಡಿದೆ. ನಿರ್ದೇಶಕರು ಇದುವರೆಗೆ ಕಥೆಯ ಎಳೆಯನ್ನು ಬಿಟ್ಟು ಕೊಟ್ಟಿಲ್ಲ.

ಸೀಕ್ವೆಲ್‌

ಅಂದಹಾಗೆ ʼಪುಷ್ಪ 2: ದಿ ರೂಲ್‌ʼ ಚಿತ್ರ 2021ರಲ್ಲಿ ತೆರೆಕಂಡ ʼಪುಷ್ಪ: ದಿ ರೈಸ್‌ʼ ಸಿನಿಮಾದ ಎರಡನೇ ಭಾಗ. ಅದನ್ನೂ ಸುಕುಮಾರ್‌ ನಿರ್ದೇಶಿಸಿದ್ದರು. ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಬಂದಿದ್ದ ಅದು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿತ್ತು. 370 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು. ಅಲ್ಲದೆ ಅಲ್ಲು ಅರ್ಜುನ್‌ ಮೊದಲ ಬಾರಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಮೊದಲ ಭಾಗದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ಕಲಾವಿದರು ಇಲ್ಲೂ ಮುಂದುವರಿದಿದ್ದಾರೆ. ಸದ್ಯ ಚಿತ್ರತಂಡ ವಿಶಾಖಪಟ್ಟಣದಲ್ಲಿ ಬೀಡು ಬಿಟ್ಟಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ತೊಡಗಿದೆ.

ಇದನ್ನೂ ಓದಿ: Pushpa 2: ಲೀಕ್‌ ಆಯ್ತು ‘ಪುಷ್ಪ 2’ ಶ್ರೀವಲ್ಲಿಯ ಹೊಸ ಅವತಾರ!

ಗಮನ ಸೆಳೆದ ರಶ್ಮಿಕಾ

ʼಪುಷ್ಪʼ ಚಿತ್ರದ ಮೊದಲ ಭಾಗದಲ್ಲಿ ಅಲ್ಲು ಅರ್ಜುನ್‌ ಜತೆಗೆ ರಶ್ಮಿಕಾ ಮಂದಣ್ಣ ಕೂಡ ಅಭಿಮಾನಿಗಳ ಗಮನ ಸೆಳೆದಿದ್ದರು. ನಾಯಕ ಪುಷ್ಪ ರಾಜ್‌ನ ಮನದನ್ನೆ ಶ್ರೀವಲ್ಲಿಯಾಗಿ ಮೋಡಿ ಮಾಡಿದ್ದರು. ಇತ್ತೀಚೆಗೆ ‘ಪುಷ್ಪ 2’ ಸೆಟ್‌ನಲ್ಲಿ ಹಣೆಯ ಮೇಲೆ ಸಿಂಧೂರವಿಟ್ಟು ಕೆಂಪು ಸೀರೆಯನ್ನು ಧರಿಸಿ ರಶ್ಮಿಕಾ ನಟಿಸುತ್ತಿರುವ ಫೋಟೊ ಮತ್ತು ವಿಡಿಯೊ ಲೀಕ್‌ ಆಗಿತ್ತು. ಸದ್ಯ ಅವರ ಪಾತ್ರದ ಬಗ್ಗೆಯೂ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇನ್ನು ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್‌ ಫಾಸಿಲ್‌, ಪ್ರಕಾಶ್‌ ರೈ, ರಾವ್‌ ರಮೇಶ್‌, ಡಾಲಿ ಧನಂಜಯ್‌, ಜಗಪತಿ ಬಾಬು, ಅನಸೂಯಾ ಭಾರದ್ವಾಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version