Site icon Vistara News

Puttanna Kanagal | ಇನ್ನು ಮುಂದೆ ಪುಟ್ಟಣ್ಣ ಕಣಗಾಲ್ ಜಯಂತಿ ನಿರ್ದೇಶಕರ ದಿನವಾಗಿ ಆಚರಣೆ: ಭಾ.ಮ.ಹರೀಶ್ ಘೋಷಣೆ

Puttanna Kanagal

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಪುಟ್ಟಣ್ಣ ಕಣಗಾಲ್ (Puttanna Kanagal) ಜನ್ಮದಿನದ ಅಂಗವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಪುಟ್ಟಣ್ಣ ಕಣಗಲ್ ಜಯಂತಿಯನ್ನು ಗುರುವಾರ ಆಚರಿಸಿತು. ಇದೇ ವೇಳೆ, ಪುಟ್ಟಣ್ಣ ಕಣಗಲ್ ಜನ್ಮದಿನವನ್ನು ‘ನಿರ್ದೇಶಕರ ದಿನ’ ಎಂದು ಆಚರಿಸಲು ನಿರ್ಧರಿಸಿರುವುದಾಗಿ ವಾಣಿಜ್ಯ ಮಂಡಳಿ ಘೋಷಿಸಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಮಾತನಾಡಿ ʻʻತೆಲುಗು ಚಿತ್ರರಂಗದಲ್ಲೂ ‘ನಿರ್ದೇಶಕರ ದಿನ’ ಎಂದಿದೆ. ನಮ್ಮಲ್ಲೂ ಪ್ರತಿ ವರ್ಷ ಡಿಸೆಂಬರ್ 1ರ ಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು ‘ನಿರ್ದೇಶಕರ ದಿನ’ವನ್ನಾಗಿ ಆಚರಣೆ ಮಾಡೋಣ ಎಂದು ಪದಾಧಿಕಾರಿಗಳೆಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡಿಕೊಂಡಿದ್ದೇವೆ. ಈಗಿನವರ ಜತೆಗೆ ಮುಂದಿನ ಪೀಳಿಗೆಗೂ ಅವರ ಸಿನಿಮಾಗಳ ಬಗ್ಗೆ, ನಿರ್ದೇಶನದ ಬಗ್ಗೆ ತಿಳಿಸಿಕೊಡುವಂತಹ ಕೆಲಸ ಇದರಿಂದಾಗಬೇಕು. ಆ ದೃಷ್ಟಿಯಿಂದ ಅವರ ಜನ್ಮದಿನವಾದ ಡಿಸೆಂಬರ್ 1ನ್ನು ‘ನಿರ್ದೇಶಕರ ದಿನ’ವನ್ನಾಗಿ ಆಚರಣೆ ಮಾಡಲು ನಿರ್ಧಾರ ಮಾಡಿದ್ದೇವೆʼʼ ಎಂದು ತಿಳಿಸಿದರು.

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ ಮಾತನಾಡಿ ʻʻಇತ್ತೀಚೆಗೆ ವಾಣಿಜ್ಯ ಮಂಡಳಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಈ ತರಹದ ಬೆಳವಣಿಗೆ ಆಗಬೇಕು. ಪುಟ್ಟಣ್ಣ ಕಣಗಾಲ್ ಜಯಂತಿಯನ್ನು ನಿರ್ದೇಶಕರ ದಿನ ಎಂದು ಆಚರಣೆ ಮಾಡಲು ನಿರ್ಧಾರ ಮಾಡಿದ್ದು ಸ್ವಾಗತಾರ್ಹʼʼ ಎಂದರು.

ಇದನ್ನೂ ಓದಿ | ಕನ್ನಡ ಚಿತ್ರರಂಗಕ್ಕೆ ಒಂದೇ ಫಿಲಂ ಚೇಂಬರ್‌ ಇರಬೇಕು: ಭಾ. ಮಾ. ಹರೀಶ್‌ ಪ್ರತಿಪಾದನೆ

Puttanna Kanagal

ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಆರ್. ನಂಜುಂಡೇಗೌಡ ಮಾತನಾಡಿ ʻʻಪುಟ್ಟಣ್ಣ ಕಣಗಾಲ್ ಜನ್ಮದಿನವನ್ನು ನಿರ್ದೇಶಕರ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಘೋಷಣೆ ಆಗಿದ್ದು ಖುಷಿಯ ಸಂಗತಿ. ನಾವು ಮಾಡಬೇಕಾದ ಕೆಲಸ ತುಂಬಾ ಇದೆ. ಮುಂದಿನ ದಿನಗಳಲ್ಲಿ ನಿರ್ದೇಶಕರಿಗೆ ಗೌರವ ತಂದು ಕೊಡುವ ಕೆಲಸವನ್ನು ನಮ್ಮ ಸಂಘ ಮಾಡಲಿದೆʼʼ ಎಂದು ತಿಳಿಸಿದರು.

ಇದೇ ವೇಳೆ ನೂತನವಾಗಿ ಆಯ್ಕೆಯಾದ ನಿರ್ದೇಶಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆ.ಸಿ. ಎನ್ ಕುಮಾರ್, ಕಾರ್ಯದರ್ಶಿ ಎಲ್‌. ಸಿ. ಕುಶಾಲ್, ಖಜಾಂಚಿ ಟಿ.ಪಿ.ಸಿದ್ದರಾಜು,ಉಪಾಧ್ಯಕ್ಷರಾದ ಶಿಲ್ಪಾ ಶ್ರೀನಿವಾಸ್ ಭಾಗಿಯಾಗಿ ಪುಟ್ಟಣ್ಣ ಕಣಗಾಲ್ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು.

ಇದನ್ನೂ ಓದಿ | ಭವಿಷ್ಯದ ಭಾಷಾ ವಿವಾದಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ: ಮಂಥನ ಬೆಂಗಳೂರು ಕಾರ್ಯಕ್ರಮದಲ್ಲಿ ಡಾ. ಜಿ.ಬಿ. ಹರೀಶ್‌ ಮಾತು

Exit mobile version