ಬೆಂಗಳೂರು: ಭಾರತದ ಹೆಮ್ಮೆಯ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನಾಧಾರಿತ ‘ರಾಕೆಟ್ರಿ’ ಸಿನಿಮಾ ಬಳಿಕ ನಟ ಆರ್ ಮಾಧವನ್ (R Madhavan) ಅವರು ಭಾರತೀಯ ಸಂಶೋಧಕ ಮತ್ತು ಇಂಜಿನಿಯರ್ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಬಯೋಪಿಕ್ ಸಿನಿಮಾ ಮಾಡಲಿದ್ದಾರೆ. ‘ಎಡಿಸನ್ ಆಫ್ ಇಂಡಿಯಾ’ ಎಂದು ಕರೆಯಲ್ಪಡುವ ನಾಯ್ಡು ಅವರು ಭಾರತದಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರು ತಯಾರಿಕೆ ಮಾಡಿದವರು. ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಜೀವನಚರಿತ್ರೆಯನ್ನು ಮಿತ್ರನ್ ಆರ್. ಜವಾಹರ್ ನಿರ್ದೇಶಿಸಲಿದ್ದಾರೆ.
ವದಂತಿಗಳ ಪ್ರಕಾರ, ನಿರ್ದೇಶಕರು ಸೇರಿದಂತೆ ಸಿನಿಮಾದ ತಾರಾಗಣ ಮತ್ತು ಸಿಬ್ಬಂದಿಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮಾಧವನ್ ಇದೀಗ ಸಿನಿಮಾದ ಮೊದಲ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಜಿಡಿ ನಾಯ್ಡು ಅವರಂತೆ ಹೋಲುವ ಹಿಂಬದಿಯಲ್ಲಿ ನಿಂತಿರುವ ವ್ಯಕ್ತಿಯ ಫೋಟೊ ಪೋಸ್ಟ್ ಮಾಡಿದೆ ಚಿತ್ರತಂಡ.
ಈ ಯೋಜನೆಯನ್ನು ಪ್ರೊಡಕ್ಷನ್ ಬ್ಯಾನರ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಘೋಷಿಸಿದೆ. ʻʻಪವಾಡ ಪುರುಷ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು (ಜಿಡಿ ನಾಯ್ಡು) ಅವರ ಜೀವನ ಮತ್ತು ಸಾಧನೆಗಳ ಆಧಾರಿತ ಸಿನಿಮಾದಲ್ಲಿ ಆರ್ ಮಾಧವನ್ ನಾಯಕರಾಗಿ ಮಾಡುತ್ತಿದ್ದಾರೆ,” ಎಂದು ತಯಾರಕರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಪೋಸ್ಟ್
ಮಾಧವನ್ ಅವರು ಕೊನೆಯದಾಗಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರ ಬಯೋಪಿಕ್ “ರಾಕೆಟ್ರಿ: ದಿ ನಂಬಿ ಎಫೆಕ್ಟ್” ನಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಅವರೇ ನಿರ್ದೇಶಿಸಿದ್ದರು. ವಿಕ್ರಮ್ ವೇದಾ, 3 ಈಡಿಯಟ್ಸ್ ಮತ್ತು ಇರುಧಿ ಸುಟ್ರು ಸೇರಿದಂತೆ ಹಲವಾರು ಹಿಟ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ʻʻಗುರು, ರಂಗ್ ದೇ ಬಸಂತಿ, ಇವನೋ ಒರುವನ್, ನಾನ್ ಅವಳ ಅಧು, ಓಂ ಶಾಂತಿ, ವಾಜ್ತುಗಳು, ರಾಕೆಟ್ರಿ: ದಿ ನಂಬಿ ಎಫೆಕ್ಟ್,ʼʼ ಮತ್ತು ಇನ್ನೂ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕೂಕಿ ಗುಲಾಟಿಯವರ ಜೀವನಚರಿತ್ರೆ ಧೋಖಾ: ರೌಂಡ್ ದಿ ಕಾರ್ನರ್‌ನಲ್ಲಿ (Dhokha: Round D Corner) ನಟ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಮುಂಬರುವ ಯೋಜನೆಗಳಾದ ಅಲಿಬಾಗ್, ದಿ ರೈಲ್ವೇ ಮೆನ್, ಮತ್ತು ಕ್ರಿಶ್ 4 ಹೀಗೆ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.