ಬೆಂಗಳೂರು: ಅಕ್ಟೋಬರ್ 3ರಂದು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರ ಜನುಮದಿನ. ಆದರೆ ಈ ಬಾರಿ ನಟಿ ಫ್ಯಾನ್ಸ್‌ಗೆ ಬೇಸರದ ಸಂಗತಿಯೊಂದನ್ನು ಹೇಳಿದ್ದಾರೆ. ಈ ಬಾರಿ ರಚಿತಾ ರಾಮ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಆಚರಿಸಿಕೊಳ್ಳದೆ ಇರಲು ಸೂಕ್ತ ಕಾರಣವನ್ನೂ ತಿಳಿಸಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಕಾವೇರಿ ವಿವಾದದ ವಿಚಾರವಾಗಿ ಹೋರಾಟಗಳು ನಡೆಯುತ್ತಿವೆ. ಮೊನ್ನೆಯಷ್ಟೇ ಚಿತ್ರರಂಗವೂ ಈ ಹೋರಾಟದಲ್ಲಿ ಭಾಗಿಯಾಗಿತ್ತು. ʻʻಎಲ್ಲರಿಗೂ ನಮಸ್ಕಾರ, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸುವುದು ಸೂಕ್ತವಲ್ಲ ಎನಿಸುತ್ತಿದೆ. ನಾನು ಮನೆಯಲ್ಲಿ ಇರುವುದಿಲ್ಲವಾದ್ದರಿಂದ ನನ್ನ ಅಭಿಮಾನಿಗಳು ನನ್ನ ಮನೆಯ ಹತ್ತಿರ ಬರಬೇಡಿ ಎಂದು ದಯೆಯಿಂದ ವಿನಂತಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಅಭಿಮಾನ ನನ್ನೊಂದಿಗೆ ಸದಾ ಇರಲಿʼʼ ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ನಟನೆಯ ‘ಬ್ಯಾಡ್ ಮ್ಯಾನರ್ಸ್’ ಮತ್ತು ಸತೀಶ್ ನೀನಾಸಂ ಜತೆ `ಮ್ಯಾಟ್ನಿ’ , ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ‘ಸಂಜು ವೆಡ್ಸ್ ಗೀತಾ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿಗೆ ಜತೆಯಾಗಿ ರಚಿತಾ ರಾಮ್ (Rachita Ram) ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Rachita Ram: ಲಾಲ್‌ಬಾಗ್ ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು; ಕ್ಷಮೆ ಕೇಳದ ನಟಿ ವಿರುದ್ಧ ಜನರ ಆಕ್ರೋಶ
ಈ ಸಿನಿಮಾಗೆ ನಾಗಶೇಖರ್ ಅವರ ನಿರ್ದೇಶನವಿದೆ. ರಚಿತಾ ರಾಮ್ ಅವರು ರಮ್ಯಾ ಅವರ ಪಾತ್ರವನ್ನು ತುಂಬುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ದುನಿಯಾ ವಿಜಯ್ ನಟನೆಯ ‘ಜಾನಿ’ (Johnny) ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸಿದ್ದರು. ‘ಊರಿಗೊಬ್ಬಳೇ ಪದ್ಮಾವತಿ’ ಹಾಡಿನ ಮೂಲಕ ಪಡ್ಡೆಗಳ ನಿದ್ದೆ ಕದ್ದಿದ್ದರು. ಈ ಸಿನಿಮಾ ‘ಜಾನಿ ಜಾನಿ ಯೆಸ್ ಪಪ್ಪಾ’ ಹೆಸರಿನಲ್ಲಿ ಪಾರ್ಟ್ 2 ಬಂತು. ಆದರೆ, ಈ ಸಿನಿಮಾದಲ್ಲಿ ನಟಿಸಲು ರಮ್ಯಾ ನಿರಾಕರಿಸಿದ್ದರು. ಹಾಗಾಗಿ ರಚಿತಾ ರಾಮ್ ಅವರಿಗೆ ಅವಕಾಶ ಒದಗಿ ಬಂತು.