ನವದೆಹಲಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಛಡ್ಡಾ (Raghav Chadha) ಅವರು ನಿಶ್ಚಿತಾರ್ಥ ಮಾಡಿಕೊಂಡು ವಾರ ಕಳೆದಿದೆ. ರಾಜಕಾರಣಿಯಾಗಿರುವ ರಾಘವ್ ಅವರು ಇದೀಗ ಬಾಲಿವುಡ್‌ಗೂ ಕಾಲಿರಿಸುತ್ತಾರಾ ಎನ್ನುವ ವಿಚಾರವೊಂದು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಅದಕ್ಕೆ ಕಾರಣ ವೈರಲ್ ಆಗಿರುವ ಅದೊಂದು ಫೋಟೋ.
ರಾಘವ್ ಛಡ್ಡಾ ಅವರು ಹಿಂದೊಮ್ಮೆ ಫ್ಯಾಷನ್ ಮಾಡೆಲ್ ಆಗಿ ರ‍್ಯಾಂಪ್ ವಾಕ್ ಮಾಡಿದ್ದರು. ಅದರ ಫೋಟೋ ಕೆಲವೆಡೆ ಹರಿದಾಡಿದ್ದವು ಕೂಡ. ಇದೀಗ ಅದೇ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಕಪ್ಪು ಬಣ್ಣದ ಬಟ್ಟೆ ತೊಟ್ಟಿರುವ ರಾಘವ್ ಅವರು ಹೀರೋ ರೀತಿಯಲ್ಲಿಯೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Parineeti And Raghav : ಪರಿಣಿತಿ ಚೋಪ್ರಾ ನಿಶ್ಚಿತಾರ್ಥದ ಮನಮುಟ್ಟುವ ಪೋಸ್ಟ್ ಹಾಕಿದ ತಾಯಿ ರೀನಾ
ಫೋಟೋ ನೋಡಿರುವ ಪರಿಣಿತಿ, ರಾಘವ್ ಅಭಿಮಾನಿಗಳು ಫೋಟೋಗೆ ವಿವಿಧ ರೀತಿಯಲ್ಲಿ ಕಮೆಂಟ್ ಮಾಡಲಾರಂಭಿಸಿದ್ದಾರೆ. “ನಮ್ಮ ಜೀಜಾಜಿ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಿದ್ಧ” ಎಂದು ಪರಿಣಿತಿ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದಾರೆ. ಹಾಗೆಯೇ “ನೀವು ಹೀರೋ ಆಗಬಹುದು”, “ರಾಜಕಾರಣದ ಬದಲು ಇದೇ ಮಾಡಿ, ನಿಮಗೆ ಹೆಚ್ಚು ಸೂಕ್ತವಾಗುತ್ತದೆ”, “ನಾನು ರಾಘವ್ ಅವರ ಫೋಟೋ ನೋಡಿದಾಗ ಅದು ರಾಘವ್ ಜೂಯಲ್ ಎಂದುಕೊಂದೆ. ಆದರೆ ಅದು ರಾಘವ್ ಛಡ್ಡಾ. ನಂಬುವುದಕ್ಕೇ ಆಗುತ್ತಿಲ್ಲ” ಎನ್ನುವಂತಹ ಹಲವಾರು ಕಮೆಂಟ್‌ಗಳು ಫೋಟೋಗೆ ಬಂದಿವೆ.
ರಾಘವ್ ಮತ್ತು ಪರಿಣಿತಿ ಮೇ 13ರಂದು ನವದೆಹಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೆಂಟ್ರಲ್ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪರಿಣಿತಿ ಅವರ ಸೋದರ ಸಂಬಂಧಿ, ಚಲನಚಿತ್ರ ತಾರೆ ಪ್ರಿಯಾಂಕಾ ಚೋಪ್ರಾ ಜೋನಾಸ್ ಸೇರಿದಂತೆ ಸುಮಾರು 150 ಅತಿಥಿಗಳು ಭಾಗವಹಿಸಿದ್ದರು. ನಿಶ್ಚಿತಾರ್ಥದ ಸುದ್ದಿಯ ನಂತರ, ಪರಿಣಿತಿ ಮತ್ತು ರಾಘವ್ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು.