ಚಾಮರಾಜನಗರ: ಪವಾಡ ಪ್ರಸಿದ್ಧ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar) ಕುಟುಂಬ ಸಮೇತ ಅ.2ರಂದು ಭೇಟಿ ನೀಡಿದ್ದಾರೆ. ಪುತ್ರ ಯುವ ರಾಜಕುಮಾರ್, ಪತ್ನಿ ಮಂಗಳಾ ಅವರೊಂದಿಗೆ ದೇವರ ದರ್ಶನ ಪಡೆದರು. ಚಾಮರಾಜನಗರ ಡಾ. ರಾಜ್‌ಕುಮಾರ್ ಅವರ ತವರು ಜಿಲ್ಲೆ. ಮಾದಪ್ಪನ ದರ್ಶನ ಪಡೆದು, ದಾಸೋಹ ಭವನದಲ್ಲಿ ಕುಟುಂಬಸ್ಥರು ಪ್ರಸಾದ ಸೇವಿಸಿದರು.
ನಟ ರಾಘವೇಂದ್ರ ರಾಜಕುಮಾರ್ ಮಾತನಾಡಿ ʻʻನಮ್ಮ ತಂದೆ ರಾಜ್‌ಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ಬಂದಿರಲಿಲ್ಲ. ಪುತ್ರ ಯುವ ರಾಜ್‌ಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ. ಈ ಜಾಗ ತುಂಬಾ ಚೆನ್ನಾಗಿದೆ. ಮಲೆ ಮಹದೇಶ್ವರ ತಾಣ. ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ. ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರುತ್ತೇನೆʼʼಎಂದರು.
ಇದನ್ನೂ ಓದಿ: Puneeth Rajkumar: ಎದೆಯ ಮೇಲೆ ಅಪ್ಪು ಹೆಸರು ಹಚ್ಚೆ ಹಾಕಿಸಿಕೊಂಡ ರಾಘವೇಂದ್ರ ರಾಜ್‌ಕುಮಾರ್; ಟೊಟೊ, ನುಕ್ಕಿ ಅಂದ್ರೆ ಯಾರು?
ಸೆಟ್‌ಗೆ ನುಗ್ಗಿದ್ದ ಹೋರಾಟಗಾರರು
ಈ ಹಿಂದೆ ಬೆಂಗಳೂರಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಕಾವೇರಿ ನೀರಿಗಾಗಿ ಹೋರಾಟಕ್ಕೆ ಇಳಿದರೆ ಇತ್ತ ಬಂದ್ ನಡುವೆ ನಟ ಯುವ ರಾಜ್‌ಕುಮಾರ್ ಸಿನಿಮಾ ಶೂಟಿಂಗ್ ಸೆಟ್‌ಗೆ ಹೋರಾಟಗಾರರು ನುಗ್ಗಿದ್ದರು. ಮೈಸೂರು ಕನ್ನಡ ವೇದಿಕೆ ಸದಸ್ಯರು ಸಿನಿಮಾ ಶೂಟಿಂಗ್ ಸೆಟ್‌ಗೆ ನುಗ್ಗಿ ಚಿತ್ರೀಕರಣ ತಡೆದು ಪ್ರತಿಭಟನೆಯನ್ನು ನಡೆಸಿದ್ದರು. ಡಾ. ರಾಜ್‌ಕುಮಾರ್ ಕುಟುಂಬದ ಯುವ ರಾಜ್‌ಕುಮಾರ್ ಅಭಿನಯದ ಯುವ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಹೀಗಾಗಿ ಸೆಟ್ ಮುಂದೆ ನಿಂತು ಡಾ.ರಾಜ್‌ಕುಮಾರ್ ಹಾಗೂ ಡಾ.ಶಿವರಾಜ್‌ಕುಮಾರ್‌ಗೆ ಜೈಕಾರ ಕೂಗಿ, ಸರ್ಕಾರಕ್ಕೆ ಧಿಕ್ಕಾರ ಎಂದಿದ್ದರು.. ನಟ ಯುವರಾಜ್‌ಕುಮಾರ್ ಇದ್ದ ಕ್ಯಾರವನ್ ಮುಂದೆ ನಿಂತು ಘೋಷಣೆಗಳನ್ನು ಕೂಗಿದ್ದರು. ಬಳಿಕ ಕ್ಯಾರವನ್‌ನಿಂದ ಹೊರ ಬಂದ ಯುವರಾಜ್‌ಕುಮಾರ್, ಇಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರಾಘವೇದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ʻಯುವʼ ಟೀಸರ್ ಕೂಡ ಈಗಾಗಲೇ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್ ರಾಮ್ ಈ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ‘ಯುವ’ ಚಿತ್ರಕ್ಕಿದೆ. ಈ ವರ್ಷದ ಡಿಸೆಂಬರ್ 22ಕ್ಕೆ ʻಯುವʼ ಚಿತ್ರ ತೆರೆಗೆ ಅಬ್ಬರಿಸಲಿದೆ.