Site icon Vistara News

Raghavendra Stores: ನಕ್ಕು ನಕ್ಕು ಸಾಕಾಯ್ತು ಅಂದ್ರು ಸಿನಿಪ್ರಿಯರು; ಜಗ್ಗಣ್ಣನ ಹಾಸ್ಯದೂಟಕ್ಕೆ ಫ್ಯಾನ್ಸ್‌ ಫಿದಾ!

Raghavendra storesrelease comedy fans are excited!

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅಭಿನಯದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ (Raghavendra Stores) ಏಪ್ರಿಲ್‌ 28ರಂದು ಬಿಡುಗಡೆಗೊಂಡಿದೆ. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದು, ನೋಡುಗರು ಸೋಷಿಯಲ್‌ ಮೀಡಿಯಾದಲ್ಲಿ ಸಿನಿಮಾ ಹಾಗೂ ಜಗ್ಗೇಶ್‌ ಅವರ ಕಾಮಿಡಿ ಪಂಚ್‌ ಕುರಿತು ಹೊಗಳಿದ್ದಾರೆ. ʻʻರಾಘವೇಂದ್ರ ಸ್ಟೋರ್ಸ್‌ನಲ್ಲಿ ರುಚಿಯಾದ ಊಟದ ಜತೆಗೆ ಮನಸ್ಸಿಗೆ ಹತ್ತಿರವಾಗುವ ಪಾತ್ರವರ್ಗವೂ ಇರಲಿದೆ ಎಂದುʼʼ ಟ್ವೀಟ್‌ ಮಾಡಿದ್ದಾರೆ ನೆಟ್ಟಿಗರು.

ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್‌ ಆನಂದ್‌ ರಾಮ್‌ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಾಸ್ಯಭರಿತವಾಗಿರುವ ಈ ಸಿನಿಮಾದಲ್ಲಿ ಜಗ್ಗೇಶ್‌ ಅವರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಗೇಶ್ ಜತೆಗೆ ವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸಿದ್ದಾರೆ. ನೋಡುಗರೊಬ್ಬರು ʻʻಬೊಂಬಾಟ್ ಭೋಜನ ಬಡಿಸಿದ ರಾಘವೇಂದ್ರ ಸ್ಟೋರ್ಸ್‌, 4 ದಶಕ ನಮ್ಮನ್ನು ನಗಿಸಿದ, ನಗಿಸುತ್ತಿರುವ ಜಗ್ಗೇಶ್‌ ಅವರಿಗೆ ನನ್ನದೊಂದು ನಮನʼʼಎಂದು ಮೆಚ್ಚುಗೆ ಸೂಚಿಸಿದ್ದಾರೆ.

ರಿಷಬ್‌ ಶೆಟ್ಟಿ ಟ್ವೀಟ್‌ನಲ್ಲಿ ʻʻರಾಘವೇಂದ್ರ ಸ್ಟೋರ್ಸ್‌ ಒಳ್ಳೆಯ ಕಟೆಂಟ್‌ ಸಿನಿಮಾ. ಈ ತರಹ ಚಿತ್ರಗಳು ಚಿತ್ರಮಂದಿರದಲ್ಲಿ ನೋಡಿ ನಕ್ಕು ಎಷ್ಟು ದಿನ ಆಗಿತ್ತೋ. ಒಂದೂವರೆ ಗಂಟೆ ತುಂಬಾ ನಿಮ್ಮನ್ನು ನಗಿಸುತ್ತೆ ಕೊನೆಯ 20 ನಿಮಿಷ ಅಳಿಸುತ್ತದೆ. ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ನೋಡಿ. ಕುಟುಂಬದ ಜತೆ ಎಂಜಾಯ್‌ ಮಾಡಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Hombale Films: ಸಿಂಗಲ್ ಸುಂದರನ ಮದುವೆ ಆಮಂತ್ರಣ ಬಂದಾಯ್ತು: ರಾಘವೇಂದ್ರ ಸ್ಟೋರ್ಸ್‌ ಟ್ರೈಲರ್‌ ಔಟ್‌!

ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಸಿನಿಮಾ ಬಗ್ಗೆ ಮಾತನಾಡಿ ʻʻರಾಘವೇಂದ್ರ ಸ್ಟೋರ್ಸ್ ನನ್ನ ಮೆಚ್ಚಿನ ಸಿನಿಮಾ. ಪುನೀತ್‌ ರಾಜ್‌ಕುಮಾರ್‌ ಅವರು ಇದ್ದಿದ್ದರೆ ನಗುತ್ತಲೇ ಸಿನಿಮಾವನ್ನು ವೀಕ್ಷಿಸುತ್ತಿದ್ದರು. ಪುನೀತ್ ಅವರು ಮಾಡಿರುವ ಸಾಧನೆಗೆ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಅರ್ಪಣೆ ಮಾಡಿದ್ದೇನೆʼʼಎಂದರು. ಕೆಜಿಎಫ್, ಕಾಂತಾರದಂತಹ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹೊಂಬಾಳೆ ಬ್ಯಾನರ್ ಮತ್ತೊಂದು ಸುಂದರ ಕತೆಯ ಮೂಲಕ ಸಮಾಜಕ್ಕೆ ಹತ್ತಿರವಾಗಿದೆ.

Exit mobile version