ಉಳ್ಳಾಲ: ಬೆಂಗಳೂರಿನಲ್ಲಿ ಚಿತ್ರದ ಮುಹೂರ್ತಕ್ಕೆ ದಿನ ನಿಗದಿಯಾದ್ದರೂ, ಚಿತ್ರತಂಡದ (Ragini Dwivedi) ಪ್ರಮುಖರಿಗೆ ಅನಾರೋಗ್ಯ ಕಾಡಿದ ಬೆನ್ನಲ್ಲೇ ಚಿತ್ರತಂಡ ಈ ಮೊದಲು ಹರಕೆ ಹೊತ್ತಿದ್ದ ಕುತ್ತಾರು ಆದಿಸ್ಥಳ ಶ್ರೀರಕ್ತೇಶ್ವರಿ ಬೆರ್ಮೆರ್, ಎಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರದಲ್ಲಿಯೇ ಮುಹೂರ್ತವನ್ನು ಜೂನ್ 10ರಂದು ನೆರವೇರಿಸಿತು.
ಹಾರಿಝಾನ್ ಸ್ಟುಡಿಯೊ ಸಂಸ್ಥೆ ನಿರ್ಮಾಣ ಹಾಗೂ ಇನ್ನೂ ಹೆಸರಿಡದ ಪ್ರೊಡಕ್ಷನ್ ನಂ-2 ಚಿತ್ರದ ಮುಹೂರ್ತ ಜೂನ್ 10ರಂದು ಕುತ್ತಾರಿನಲ್ಲಿ ನಡೆಯಿತು. ಚಿತ್ರದ ನಿರ್ದೇಶಕರು ಹಾಗೂ ತಾಂತ್ರಿಕ ತಂಡ ಸ್ವಾಮಿ ಕೊರಗಜ್ಜ ಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೆಲ ದಿನಗಳ ಹಿಂದೆ ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸೇರಿದಂತೆ, ನಿರ್ದೇಶಕರು ಹಾಗೂ ನಿರ್ಮಾಪಕರು ಇದೇ ಕ್ಷೇತ್ರದ ಸಂದರ್ಶನಕ್ಕೆ ಬಂದಿದ್ದಾಗ ಮುಹೂರ್ತವನ್ನು ಕೊರಗಜ್ಜನ ಬಳಿಯೇ ನಡೆಸುವುದಾಗಿ ಹರಕೆ ಹೊತ್ತಿದ್ದರು. ಆದರೆ ಚಿತ್ರತಂಡದವರಿಗೆ ಮಂಗಳೂರಿಗೆ ಬರುವುದು ಕಷ್ಟ ಅಂದನಿಸಿದಾಗ, ಬೆಂಗಳೂರಿನಲ್ಲಿಯೇ ಚಿತ್ರದ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿ , ದಿನವನ್ನು ನಿಗದಿಪಡಿಸಿತ್ತು. ಆದರೆ ಅದೇ ದಿನ ತಂಡದಲ್ಲಿರುವ ಪ್ರಮುಖರಿಗೆ ಅನಾರೋಗ್ಯ ಉಂಟಾಗಿ ಮುಹೂರ್ತ ನಡೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ತಂಡ ಈ ಹಿಂದೆ ಹೊತ್ತ ಹರಕೆಯಂತೆ ಕುತ್ತಾರು ಕೊರಗಜ್ಜನ ಸಮ್ಮುಖದಲ್ಲೇ ಮುಹೂರ್ತ ನಡೆಸುವುದಾಗಿ ತೀರ್ಮಾನಿಸಿದೆ. ನಿರ್ದೇಶಕರು ಹಾಗು ತಾಂತ್ರಿಕ ತಂಡ ಸಾಂಕೇತಿಕವಾಗಿ ಮುಹೂರ್ತವನ್ನು ನಡೆಸಿತು.
ಇದನ್ನೂ ಓದಿ: Ragini Dwivedi: ಇಲ್ಲಿವೆ ವಿಭಿನ್ನ ದಿರಸಿನೊಂದಿಗೆ ಮಿಂಚುತ್ತಿರುವ ರಾಗಿಣಿ ದ್ವಿವೇದಿ ಫೋಟೊಗಳು
ದೈವಲೀಲೆಯಂತೆ ಮುಹೂರ್ತ ನೆರವೇರಿಸಿದ್ದೇವೆ : ನಿರ್ದೇಶಕ ಆರ್ಯನ್
ʻʻಹಿಂದೆಯೇ ಮುಹೂರ್ತದ ದಿನ ನಿಗದಿ ಮಾಡಲಾಗಿತ್ತು. ಆದರೆ ದೈವಲೀಲೆ, ಕೆಲವು ಅಡೆತಡೆಗಳಿಂದ ಅಂದು ನೆರವೇರಿಸಲು ಸಾಧ್ಯವಾಗಲಿಲ್ಲ. ತಂಡದ ಪ್ರಮುಖರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ಇಂದು ಕೂಡ ಪ್ರಯಾಣ ಅಸಾಧ್ಯವಾಗಿದೆ. ನಟಿ ರಾಗಿಣಿ ದ್ವಿವೇದಿ ಶೂಟಿಂಗ್ ಇರುವುದರಿಂದ ಬರಲು ಆಗಲಿಲ್ಲ. ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಮೂಡಿಬರಲಿದೆ. ಮೂರು ತಿಂಗಳ ಹಿಂದೆ ಕುತ್ತಾರು ಕ್ಷೇತ್ರದಲ್ಲಿ ಹರಕೆ ಹೊತ್ತ ಪ್ರಕಾರ ಮೊದಲನೇ ಮುಹೂರ್ತ ಕೊರಗಜ್ಜನ ಕ್ಷೇತ್ರದಲ್ಲಿ ನಡೆದಿದೆ. 15 ದಿನಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಚಿತ್ರದ ಟೈಟಲ್ ಲಾಂಚಿಂಗ್ ನಡೆಯಲಿದೆ. ಕ್ರೈಂ ಥಿಲ್ಲರ್ ಸಿನೆಮಾ ಇದುʼʼ ಎಂದು ನಿರ್ದೇಶಕ ಆರ್ಯನ್ ಮಾಧ್ಯಮಗಳಿಗೆ ತಿಳಿಸಿದರು.
ಈ ಚಿತ್ರದಲ್ಲಿ ಬಾಲಿವುಡ್ ನಟ ಶೇಖರ್ ಸುಮನ್ ಅವರ ಪುತ್ರ ಆಧ್ಯಾನ್ ಸುಮನ್ ನಾಯಕನಾಗಿ ಮಿಂಚಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಲಿದ್ದಾರೆ. ನಟಿ ರಾಗಿಣಿ ದ್ವಿವೇದಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕಾಶಿನಾಥ್ ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ. ಮಹಾಂತೇಶ್ ಹಿರೇಮಠ್, ವಿಜಯ್ ಚಂದು, ಸಾಯಿಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಂದ್ರಶೇಖರ್ ಕೆ.ಎಸ್ ಕ್ಯಾಮರಾಮೆನ್ ಆಗಿದ್ದಾರೆ. ಸಂಗೀತ ನಿರ್ದೇಶಕರಾಗಿ ಶ್ರೀಧರ್ ಕಶ್ಯಪ್ ,ಟೋನಿ ಎ ರಾಜ್ ಸಂಸ್ಥೆಯ ನಿರ್ಮಾಪಕರಾಗಿದ್ದಾರೆ.
ನಿರ್ದೇಶಕ ಆರ್ಯನ್, ನಿರ್ಮಾಪಕ ಟೋನಿ ಎ ರಾಜ್, ಕ್ಯಾಮರಾಮೆನ್ ಚಂದ್ರಶೇಖರ್ ಕೆ.ಎಸ್, ಶ್ರೀಧರ್ ಕಶ್ಯಪ್, ಅರವಿಂದ್ ದತ್ತಾ ಮುಂತಾದವರು ಉಪಸ್ಥಿತರಿದ್ದರು.