ಬೆಂಗಳೂರು: ಮೂರು ದಿನಗಳಿಂದ ಸ್ಯಾಂಡಲ್ವುಡ್ ನಿರ್ಮಾಪಕ ಎನ್. ಕುಮಾರ್ ಹಾಗೂ ನಟ ಕಿಚ್ಚ ಸುದೀಪ್ (Kichcha Sudeep) ನಡುವೆ ವಾಕ್ಸಮರ ನಡೆಯುತ್ತಿದೆ. ಅದು ಕಾನೂನು ಸಮರದ ಮಟ್ಟಕ್ಕೆ ಹೋಗಿದೆ. ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇದೆ. ಈ ಪ್ರಕರಣಕ್ಕೆ ತೆರೆ ಬೀಳುತ್ತೆ ಎಂದು ಚಲನಚಿತ್ರ ಪ್ರೇಕ್ಷಕರು ಅಂದುಕೊಳ್ಳುತ್ತಿರುವ ನಡುವೆಯೇ ಮತ್ತೊಬ್ಬರು ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ. ಹುಚ್ಚ ಸಿನಿಮಾ ಸಮಯದಲ್ಲಿ ನೀಡಿದ ಮುಂಗಡ ಹಣವನ್ನು ಸುದೀಪ್ ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕ ರೆಹಮಾನ್ ಆರೋಪಿಸಿದ್ದಾರೆ.
ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಸುದೀಪ್ ಕಾನೂನು ಸಮರ ಆರಂಭಿಸಿದ್ದು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಏತನ್ಮಧ್ಯೆ ಈಗ ಕುಮಾರ್ ಪರ ಹುಚ್ಚ ಸಿನಿಮಾದ ನಿರ್ಮಾಪಕ ರೆಹಮಾನ್ ನಿಂತಿರುವುದು ಮತ್ತೊಮ್ಮೆ ನೂರು ಅನುಮಾನಗಳಿಗೆ ಕಾರಣವಾಗಿದೆ.
ಹುಚ್ಚ ಸಿನಿಮಾ ಮಾಡಿದ್ದು ನಾನು, ಆ ಸಿನಿಮಾದಿಂದಲೇ ಕಿಚ್ಚ ಅನ್ನೋ ಬಿರುದು ಬಂದಿದ್ದು. ಹಾಗಂತ ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದೊಮ್ಮೆ ಹಾಕಲು ಸಾಧ್ಯವೇ ಎಂದು ಹೇಳುವ ಮುಖೇನ ಸುದೀಪ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನಿರ್ಮಾಪಕ ಎಂ.ಎನ್ ಕುಮಾರ್, ನಟ ಸುದೀಪ್ ವಿರುದ್ಧ ಬರೋಬ್ಬರಿ 10 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಸಿನಿಮಾ ಮಾಡುವುದಾಗಿ ಹೇಳಿ, ಹಣ ಪಡೆದು ತಮ್ಮ ಆಪ್ತರಿಗೆ ಕೊಡಿಸಿದ್ದಾರೆ. ಈಗ ಸಿನಿಮಾ ಮಾಡಿಕೊಡಿ ಅಂತಾ ಕೇಳಿದ್ರೆ, ಪ್ರತಿಕ್ರಿಯೆ ನೀಡಿಲ್ಲ ಅಂತಾ ಕಳೆದ ವಾರ ಆರೋಪವನ್ನು ಮಾಡಿದ್ದರು. ತಮ್ಮ ಮೇಲೆ ಸರಣಿ ಆರೋಪಗಳೂ ಕೇಳಿಬಂದ ಬೆನ್ನಲ್ಲೇ ಕಿಚ್ಚ ಸುದೀಪ್ ಅವರು ಕುಮಾರ್ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದೊಮ್ಮೆ ಹೂಡಿದ್ದಾರೆ.
ಕಿಚ್ಚ ಸುದೀಪ್ ಕೂಡ ಮಾಧ್ಯಮಗಳಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸಿದ್ದು, ತಮ್ಮ ಆಪ್ತ ಹಾಗೂ ನಿರ್ಮಾಪಕ ಜಾಕ್ ಮಂಜು ಮತ್ತು ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಾಚೂಡ್ ದಾಖಲೆಗಳ ಸಮೇತ ಮಾಧ್ಯಮಗಳ ಮುಂದೆ ಬಂದು ಕುಮಾರ್ ಮಾಡಿದ್ದ ಆರೋಪಗಳಿಗೆ ಹುರುಳಿಲ್ಲ ಎಂದಿದ್ದರು.
ಇದನ್ನೂ ಓದಿ : Sudeep Puneeth | ಸುದೀಪ್-ಪುನೀತ್ ಬಾಂಧವ್ಯಕ್ಕೆ ಸಾಕ್ಷಿಯಾಯ್ತು ಹುಟ್ಟುಹಬ್ಬ ಸಂಭ್ರಮ
ಇದೇ ವಿಚಾರವಾಗಿ ಸುದೀಪ್ ಒಂದು ಮೆಸೇಜ್ ಕಳಿಸಿದ್ದಾರೆ. ನಾನು ಬೆಳೆದಿದ್ದೇ ಸಿನಿಮಾ ನಿರ್ಮಾಪಕರಿಂದ. 27 ವರ್ಷಗಳ ನನ್ನ ಸಿನಿಮಾ ಕೆರಿಯರ್ನಲ್ಲಿ ಒಳಿತನ್ನೇ ಮಾಡಿದ್ದೇನೆ ನನ್ನ ವಿರುದ್ಧ ಮಾಡಿದ ಆರೋಪಗಳಿಗೆ ನಾನು ಕಾನೂನು ಮೂಲಕವೇ ಉತ್ತರ ಕೊಡುತ್ತೇನೆ. ನನಗೆ ಸಿನಿಮಾ ಕ್ಷೇತ್ರದ ಎಲ್ಲಾ ಅಂಗ ಸಂಸ್ಥೆಗಳ ಮೇಲೆ ನಂಬಿಕೆಯಿದೆ ಎಂದಿದ್ದರು.
ಸದ್ಯ ಕಿಚ್ಚ ಸುದೀಪ್ ಅವರು ನಿರ್ಮಾಪಕ ಎಂ.ಎನ್. ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅತ್ತ ಕುಮಾರ್ ಅವರ ಮುಂದಿನ ನಿರ್ಧಾರ ಪ್ರಕಟಗೊಂಡಿಲ್ಲ. ಗಲಾಟೆ ಬೇಗ ಕೊನೆಯಾಗಲಿ ಎಂದು ಸಿನಿ ಪ್ರೇಕ್ಷಕರು ಬಯಸಿದ್ದಾರೆ.