Site icon Vistara News

Raj B Shetty: ಮೂಗುತಿ ಹಾಕಿದಾಗ ನೋವಾಗಿತ್ತು, ಸ್ಟೈಲ್‌ಗಾಗಿ ಹಾಕಿದ್ದಲ್ಲ ಎಂದ ರಾಜ್‌ ಬಿ ಶೆಟ್ಟಿ

Raj B Shetty Share the story Of Nose Ring

ಬೆಂಗಳೂರು: ರಾಜ್‌ ಬಿ ಶೆಟ್ಟಿ (Raj B Shetty) ಅವರ ʻಟೋಬಿʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾದಾಗಿನಿಂದ ಸಖತ್‌ ಸೌಂಡ್‌ ಮಾಡುತ್ತಿದೆ. ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿತ್ತು. ಅಷ್ಟೇ ಅಲ್ಲದೇ ರಾಜ್‌ ಬಿ ಶೆಟ್ಟಿಯ ಮೂಗುತಿ ಎಲ್ಲರ ಗಮನ ಸೆಳೆದಿತ್ತು. ಕಥೆಯಲ್ಲಿ ಮೂಗುತಿಗೆ ಎಷ್ಟು ಪ್ರಾಮುಖ್ಯ ಇದೆ ಎನ್ನುವುದರ ಬಗ್ಗೆ ರಾಜ್‌ ಬಿ ಶೆಟ್ಟಿ ವಿಸ್ತಾರ ನ್ಯೂಸ್‌ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಥೆಗಾರ ಟಿ. ಕೆ. ದಯಾನಂದ್ ತಾವೇ ಸ್ವತಃ ನೋಡಿದ ಕಾರವಾರದ ವಿಲಕ್ಷಣ ವ್ಯಕ್ತಿಯ ಬದುಕನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರಂತೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನಾನಾ ರೀತಿಯಲ್ಲಿ ಆತ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಅವರು. ಇದೀಗ ಈ ಮೂಗಿನ ನತ್ತು ಕೇವಲ ಸ್ಟೈಲ್‌ಗಾಗಿ ಹಾಕಿದ್ದಲ್ಲ. ಆ ಪಾತ್ರಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ ರಾಜ್‌ ಬಿ ಶೆಟ್ಟಿ.

ವಸ್ತುಗಳು ಕೂಡ ಕಥೆಯ ಭಾಗವಾಗಿರಬೇಕು

ರಾಜ್‌ ಬಿ ಶೆಟ್ಟಿ ಈ ಬಗ್ಗೆ ಮಾತನಾಡಿ ʻʻಪೋಸ್ಟರ್‌ನಲ್ಲಿರುವ ಮೂಗುತಿ ನನಗೆ ತುಂಬ ಇಷ್ಟವಾಯಿತು. ಆ ಮನುಷ್ಯನ ಮುಖದ ಗಾಯ, ಮೂಗುತಿ ಬಹಳ ಕಾಡಿತ್ತು. ಈ ಮೂಗುತಿ ಕಥೆಯ ಒಂದು ಭಾಗ. ಇಲ್ಲಿ ಇದು ಒಂದು ಪಾತ್ರವಾಗಿದೆ. ವಸ್ತುವಲ್ಲ. ಸ್ಟೈಲ್‌ ಎಲಿಮೆಂಟ್‌ ಆಗಿ ಇರುವ ವಸ್ತುಗಳನ್ನು ಹಾಕುವುದು ನನಗೆ ಸ್ವಲ್ಪವೂ ಇಷ್ಟವಿಲ್ಲ. ನನಗೆ ಪ್ರತಿ ಒಂದು ವಸ್ತುಗಳು ಕೂಡ ಕಥೆಯ ಭಾಗವಾಗಿರಬೇಕು. ವಸ್ತುಗಳು ಕೂಡ ತುಂಬ ಬಳಕೆಗೆ ಬಂದಾಗ ಪಾತ್ರವಾಗುತ್ತವೆʼʼ ಎಂದರು.

ಇದನ್ನೂ ಓದಿ: Raj B Shetty: ಕಾರವಾರದ ವ್ಯಕ್ತಿಯ ವಿಚಿತ್ರ ಬದುಕಿನ ಕಥೆ ಈ ʻಟೋಬಿʼ; ಕಥೆಯ ಗುಟ್ಟು ಈಗ ರಿವೀಲ್‌!

ಮೂಗುತಿ ಹಾಕಿದಾಗ ತುಂಬಾ ನೋವಾಗಿತ್ತು!

ʻʻಈ ʼಟೋಬಿʼಯಲ್ಲಿ ಬದಲಾವಣೆ ಹಂತದಲ್ಲಿ ಆ ಮನುಷ್ಯ ಮೂಗಿಗೆ ನತ್ತನ್ನು ಹಾಕುತ್ತಾನೆ. ಯಾಕೆ ಆತ ಬದಲಾಗುತ್ತಾನೆ? ಯಾಕೆ ಮೂಗಿನ ನತ್ತು ಆತನಿಗೆ ಹಾಕಬೇಕು ಅನಿಸುತ್ತದೆ ಎಂಬುದೇ ಕಥೆ. ಆದರೆ ಇಡೀ ಸಿನಿಮಾದಲ್ಲಿ ಈ ರೀತಿಯ ಮುಖ ಇಟ್ಟುಕೊಂಡು, ಅಂದರೆ ಮೂಗಿನ ನತ್ತು ಹಾಕಿಕೊಂಡೇ ಆತ ಓಡಾಡುತ್ತ ಇರುವುದಿಲ್ಲ. ಆತ ಸಾಮಾನ್ಯನಾಗಿರುತ್ತಾನೆ. ಕುರಿ ಎಂದು ತೋರಿಸಬೇಕು. ಆದರೆ ಕುರಿ ಅಂದರೆ ಬರಿ ಕುರಿ ಅಲ್ಲ. ಟಗರು ಕೂಡ ಹೌದು. ಹಾಗೇ ಈ ಮೂಗುತಿ ತೊಡಬೇಕಾದರೆ ಸಿಕಾಪಟ್ಟೆ ನನಗೆ ನೋವಾಗಿತ್ತು. ಸಿನಿಮಾ ಬರೆಯುವಾಗ ಐಡಿಯಾ ಯಾವಾಗ ಬಂತೋ , ಮೂಗು ಚುಚ್ಚಬೇಕು ಎಂದು ಅನ್ನಿಸಿ ಚುಚ್ಚಿಸಿ ಬಿಟ್ಟೆ. ಬಳಿಕ ಆ ಪಾತ್ರದ ಆಳ ತಿಳಿದುಕೊಳ್ಳಲು ಸಹಾಯವಾಯಿತುʼʼ ಎಂದರು.

ಕನ್ನಡ ಸಿನಿಮಾ ರಂಗದಲ್ಲಿ ಹೊಸ ರೀತಿಯ ಕಥೆಗಳನ್ನೇ ಹೊತ್ತು ತರುವ ನಟನಾಗಿ ಮಿಂಚುತ್ತಿದ್ದಾರೆ ರಾಜ್‌ ಬಿ ಶೆಟ್ಟಿ . ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಜ್‌ ಇದೀಗ ʻಟೋಬಿʼ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ.

ಈ ಸಿನಿಮಾ ಇದೇ ಆಗಸ್ಟ್‌ 25ರಂದು ತೆರೆ ಕಾಣಲಿದೆ. ಇನ್ನು ರಾಜ್‌ ಬಿ ಶೆಟ್ಟಿ ಅವರು ಈ ಸಿನಿಮಾದ ಜತೆ ಜತೆಯಲ್ಲಿ ʼಸ್ವಾತಿ ಮುತ್ತಿನ ಮಳೆಹನಿಯೇʼ, ʼರಾಮನ ಅವತಾರʼ ಸೇರಿದಂತೆ ಅನೇಕ ಸಿನಿಮಾಗಳ ಕೆಲಸದಲ್ಲಿ ಬಿಜಿ ಇದ್ದಾರೆ.

Exit mobile version