ಬೆಂಗಳೂರು: ರಾಜ್ ಬಿ ಶೆಟ್ಟಿ (Raj B shetty) ಅಭಿನಯದ ಟೋಬಿ ಸಿನಿಮಾ (Toby Movie) ರಾಜ್ಯಾದ್ಯಂತ ಆಗಸ್ಟ್ 25ರಂದು ಬಿಡುಗಡೆಗೊಂಡಿದೆ. ಕೆಲವರು ಸಿನಿಮಾವನ್ನು ಹೊಗಳಿದರೆ ಇನ್ನು ಕೆಲವರು ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ, ಒಮ್ಮೆ ನೋಡಬಹುದು ಎಂಬ ಟ್ವೀಟ್‌ಗಳನ್ನು ಮಾಡಿದ್ದಾರೆ. ಮಹಿಳೆಯೊಬ್ಬರು ಚಿತ್ರ ವೀಕ್ಷಿಸಿದ ಬಳಿಕ ಯುಟ್ಯೂಬ್ ಚಾನೆಲ್ ಒಂದಕ್ಕೆ ಚಿತ್ರ ಚೆನ್ನಾಗಿಲ್ಲ ಎಂದು ಕ್ಯಾಮೆರಾ ಮುಂದೆ ನಿಂತು ಹೇಳಿಬಿಟ್ಟಿದ್ದಾರೆ. ಇಷ್ಟಕ್ಕೆ ಕೋಪಗೊಂಡ ವ್ಯಕ್ತಿಯೋರ್ವ ಕನ್ನಡ ಸಿನಿಮಾ ʻಚೆನ್ನಾಗಿಲ್ಲ ಅಂತೀಯಲ್ಲʼʼಎಂದು ಅಸಹ್ಯವೆನಿಸುವ ಪದಗಳನ್ನು ಬಳಸಿ ಆಕೆಯನ್ನು ಜನರ ಮುಂದೆ (unspoken word) ನಿಂದಿಸಿದ್ದಾನೆ. ಇದೀಗ ಈ ವಿಡಿಯೊ ವೈರಲ್ ಆಗುತ್ತಿದೆ. ಕನ್ನಡ ಚಿತ್ರವೊಂದನ್ನು ನೋಡಲು ಬಂದ ಹುಡುಗಿಗೆ (humiliating a girl) ವ್ಯಕ್ತಿಯೊಬ್ಬ ಅತಿ ಕೆಟ್ಟ ಪದ ಬಳಕೆ ಮಾಡುತ್ತಿದ್ದರೂ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಸಹ ಆಕೆಯದ್ದೆ ತಪ್ಪು, ಚಿತ್ರ ಚೆನ್ನಾಗಿಲ್ಲ ಎಂದಿದ್ದೇ ತಪ್ಪು ಎಂದಿದ್ದಾರೆ. ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದೆ. ಈ ಅಸಭ್ಯ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಟೋಬಿ ಚಿತ್ರತಂಡ ಕೂಡ ಪೋಸ್ಟ್ ಹಂಚಿಕೊಂಡಿದೆ.
ಟೋಬಿ ಚಿತ್ರದ ಕಥೆಗಾರ ಈ ಬಗ್ಗೆ ಖಂಡಿಸಿದ್ದಾರೆ. “ಭಿನ್ನಾಭಿಪ್ರಾಯನ್ನು ಗೌರವಿಸುವುದು ಆರೋಗ್ಯವಂತ ಸಮಾಜದ ಲಕ್ಷಣ. ಚಿತ್ರ ಚೆನ್ನಾಗಿದೆ ಎಂದವರ ಅಭಿಪ್ರಾಯವನ್ನು ಗೌರವಿಸಿದಷ್ಟೇ, ಚೆನ್ನಾಗಿಲ್ಲ ಎಂದವರ ಅಭಿಪ್ರಾಯವನ್ನೂ ನಾವು ಗೌರವಿಸುತ್ತೇವೆ. ಅಪರಿಚಿತರ ಈ ಅಸಭ್ಯ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. – ಟೋಬಿ ಚಿತ್ರತಂಡದ ಪರವಾಗಿ”ಎಂದು ದಯಾನಂದ್ ಟಿಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rakshit Shetty: ಮುಂದಿನ ಎರಡು ಸಿನಿಮಾಗಳಿಗೆ ಸ್ಫೂರ್ತಿ ಇದು; ಬಿಗ್ ಅಪ್‌ಡೇಟ್ ಕೊಟ್ಟ ರಕ್ಷಿತ್ ಶೆಟ್ಟಿ!
ಈ ಘಟನೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಚಿತ್ರಮಂದಿರದ ಮ್ಯಾನೇಜರ್, ಆ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ. ಆನಂತರ ಮಾಧ್ಯಮದ ಎದುರು ಮಾತನಾಡಿದ ಅವರು, ”ಆಕೆ ಡ್ರಗ್ ಅಡಿಕ್ಟ್ ಅನಿಸುತ್ತೆ, ಯಾರೋ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಅನಿಸುತ್ತದೆ. ನಾನು ಚಿತ್ರ ನೋಡಿದೆ, ಆಕೆ ಹೇಳುವ ಹಾಗಿಲ್ಲ” ಎಂದು ಮಹಿಳೆಯ ವಿರುದ್ಧವೇ ಮಾತನಾಡಿದ್ದಾರೆ.
ಇಷ್ಟೆಲ್ಲಾ ನಡೆದರೂ ಚಿತ್ರಮಂದಿರದ ಅಂಗಳದಲ್ಲಿ ಹುಡುಗಿ ಪರ ಯಾರೊಬ್ಬರೂ ಮಾತನಾಡಲೇ ಇಲ್ಲ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜನರು ʻʻತಮ್ಮ ಸ್ವಂತ ಹಣದಿಂದ ಟಿಕೆಟ್ ಖರೀದಿಸಿ ಬರುವ ಸಿನಿ ರಸಿಕರಿಗೆ ಚಿತ್ರ ಹೇಗಿದೆ ಎಂದು ಹೇಳುವ ಎಲ್ಲಾ ರೀತಿಯ ಹಕ್ಕಿದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲʼʼಎಂದು ಕಮೆಂಟ್ ಮಾಡಿದ್ದಾರೆ.
ಗರುಡ ಗಮನ ವೃಷಭ ವಾಹನ ಸಿನಿಮಾ ನಿರ್ಮಾಣ ಮಾಡಿದ್ದ ಲೈಟರ್ ಬುದ್ಧ ಫಿಲ್ಮ್ಸ್ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿದೆ. ಅದರೊಂದಿಗೆ ಅಗಸ್ತ್ಯ ಫಿಲ್ಮ್ಸ್ ಕೂಡ ಸಾಥ್ ಕೊಟ್ಟಿದೆ. ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರ ಜತೆಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ.