ಬೆಂಗಳೂರು : ಬಾಲಿವುಡ್‌ನ ಕಪೂರ್ ಕುಟುಂಬದ ಕುಡಿಗಳಾದ ಕರಿಷ್ಮಾ ಮತ್ತು ಕರೀನಾ ಅವರು ಸಹೋದರಿಯರಾಗಿ ತಮ್ಮ ಅನ್ಯೋನ್ಯತೆಯ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು. ಮಾತ್ರವಲ್ಲ, ವೃತ್ತಿಯಲ್ಲಿ ತಮ್ಮ ನಡುವೆ ಯಾವುದೇ ಸ್ಪರ್ಧೆಯಿಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಹಾಗಿದ್ದರೆ ಬಾಲ್ಯದಲ್ಲೂ ಅವರ ಸಂಬಂಧ ಇಷ್ಟೇ ಸ್ಥಿರವಾಗಿತ್ತೇ ಎಂಬ ಪ್ರಶ್ನೆಗೆ ಕರೀನಾ ಹೇಳುವುದು, ʻಹಾಗೇನಿರಲಿಲ್ಲʼ!
ತಮ್ಮ ಅಜ್ಜ ರಾಜ್ ಕಪೂರ್ ತನ್ನಕ್ಕ ಕರಿಷ್ಮಾಳನ್ನೇ ಹೆಚ್ಚು ಪ್ರೀತಿ ಮಾಡುತ್ತಿದ್ದರು. ಅದರಿಂದ ತಾನು ಬೇಡದವಳು, ಪ್ರೀತಿಯಿಂದ ವಂಚಿತಳು ಎಂಬ ಭಾವ ಕಾಡುತ್ತಿತ್ತು ಎಂದು ಎರಡು ದಶಕಗಳ ಹಿಂದಿನ ಒಂದು ಸಂದರ್ಶನದಲ್ಲಿ ಕರೀನಾ ಹೇಳಿಕೊಂಡಿದ್ದರು.
೧೯೮೮ರಲ್ಲಿ ರಾಜ್ ಕಪೂರ್ ತೀರಿಕೊಂಡಾಗ ಕರಿಷ್ಮಾ ಹದಿಹರೆಯದವಳು. ತಾನಿನ್ನೂ ಏಳು ವರ್ಷದವಳಿದ್ದೆ. ತಾನಿನ್ನೂ ಚಿಕ್ಕವಳಾಗಿದ್ದ ಕಾರಣಕ್ಕೇ ಬಹುಶಃ ಅಜ್ಜ ಕರಿಷ್ಮಾಳೊಂದಿಗೇ ಹೆಚ್ಚಿನ ಬಾಂಧವ್ಯ ಹೊಂದಿದ್ದರು. ನನ್ನೊಂದಿಗೆ ಹೆಚ್ಚಿಗೆ ಮಾತಾಡಲು ಏನೂ ಇರುತ್ತಿರಲಿಲ್ಲ ಎಂದು ೨೦೦೨ರಲ್ಲಿನ ಸಿಮಿ ಗೆರೆವಾಲ್ ಷೋದಲ್ಲಿ ಕರೀನಾ ಹೇಳಿದ್ದರು.
ಇದನ್ನೂ ಓದಿ | ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಕುಟುಂಬ
“ನನ್ನಕ್ಕನಿಗೆ ಅಜ್ಜನ ಹಾಗೆಯೇ ನೀಲಿ ಕಣ್ಣಿದೆ. ಬಹುಶಃ ಅದಕ್ಕೇ ಅವರಿಗೆ ಆಕೆಯ ಮೇಲೆ ಹೆಚ್ಚಿನ ಪ್ರೀತಿಯಿತ್ತೇನೊ. ಹಾಗಾಗಿ ಎಲ್ಲಾ ಚಾಕೊಲೇಟ್ ಮತ್ತು ಉಡುಗೊರೆಗಳೂ ಅವಳಿಗೇ ದೊರೆಯುತ್ತಿದ್ದವು ಎಂಬುದಷ್ಟೇ ನನಗೆ ನೆನಪಿತ್ತು. ಅಜ್ಜನಿಗೆ ಮಾವಿನ ಹಣ್ಣೆಂದರೆ ಬಲು ಪ್ರೀತಿಯಿತ್ತು. ಅವರ ಫ್ರಿಜ್‌ನಲ್ಲಿ ಮಾವು ತಂದಿರಿಸಿಕೊಳ್ಳುತ್ತಿದ್ದರು. ಅದನ್ನು ಮುಟ್ಟಲು ನಮಗ್ಯಾರಿಗೂ ಅವಕಾಶವಿರಲಿಲ್ಲ. ಆದರೆ ಕರಿಷ್ಮಾ ಮಾತ್ರ ಅಲ್ಲಿಗೆ ಹೋಗಿ ಚೆನ್ನಾಗಿ ಮಾವಿನಹಣ್ಣು ತಿಂದು ಬರುತ್ತಿದ್ದಳುʼʼ ಎಂದು ಕರೀನಾ ಅಳಲು ತೋಡಿಕೊಂಡಿದ್ದರು.
ಕರೀನಾ ಸದ್ಯಕ್ಕೀಗ ಲಾಲ್‌ಸಿಂಗ್ ಚಡ್ಡಾ ( Laal Singh Chaddha) ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಟಾಮ್ ಹ್ಯಾಂಕ್ಸ್ ಅವರ ಪ್ರಸಿದ್ಧ “ಫಾರೆಸ್ಟ್ ಗಂಪ್ʼ ಚಿತ್ರದ ಈ ಹಿಂದಿ ಅವತರಣಿಕೆಯಲ್ಲಿ ಆಮೀರ್ ಖಾನ್ ನಟಿಸಿದ್ದು, ಆಗಸ್ಟ್ ೧೧ರಂದು ಚಿತ್ರ ತೆರೆ ಕಾಣಲಿದೆ.
ಇದನ್ನೂ ಓದಿ | ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ, ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ವಶಕ್ಕೆ