Site icon Vistara News

Rajinikanth Birthday: ಭರ್ಜರಿ ಸಂಭಾವನೆ ಪಡೆಯುವ ರಜನಿಕಾಂತ್‌ ಆಸ್ತಿ ಮೌಲ್ಯ ಎಷ್ಟು ಗೊತ್ತೆ!

rajanikanth birthday

rajanikanth birthday

ಚೆನ್ನೈ: ತಮ್ಮ ವಿಶಿಷ್ಟ ಸ್ಟೈಲ್‌ನಿಂದಲೇ ಇಡೀ ಭಾರತೀಯ ಚಿತ್ರೋದ್ಯಮದ ಗಮನ ಸೆಳೆದಿರುವ ಸೂಪರ್‌ ಸ್ಟಾರ್‌ ರಜನಿಕಾಂತ್‌ ಇಂದು (ಡಿಸೆಂಬರ್‌ 12) 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ (Rajinikanth Birthday). ದಕ್ಷಿಣ ಭಾರತದ ಅತ್ಯಂತ ಶ್ರೀಮಂತ ನಟ ಎಂದು ಕರೆಯಿಸಿಕೊಳ್ಳುವ ರಜನಿಕಾಂತ್‌ ಕನ್ನಡ, ತಮಿಳು, ಹಿಂದಿ ಮತ್ತಿತರ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಈಗಲೂ ಅಭಿನಯಿಸುತ್ತ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇವರ ಒಟ್ಟು ಆಸ್ತಿಯ ಮೌಲ್ಯ ಎಷ್ಟು? ಅವರು ಯಾವೆಲ್ಲ ಕಾರುಗಳನ್ನು ಹೊಂದಿದ್ದಾರೆ? ಮುಂತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಶಿವಾಜಿ ರಾವ್‌ನಿಂದ ರಜನಿಕಾಂತ್‌ವರೆಗೆ…

ರಜನಿಕಾಂತ್ ಅವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಇವರು ಮೂಲತಃ ಬೆಂಗಳೂರಿನ ಹನುಮಂತನಗರದವರು. ಡಿಸೆಂಬರ್ 12, 1950ರಂದು ಬೆಂಗಳೂರಿನಲ್ಲಿ ಮರಾಠಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಪೊಲೀಸ್ ಕಾನ್ಸ್‌ಟೇಬಲ್‌ ಪುತ್ರನಾದ ರಜನಿಕಾಂತ್ ಗವಿಪುರಂ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಮತ್ತು ಆಚಾರ್ಯ ಪಾಠಶಾಲಾ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದರು. 60ರ ದಶಕದಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ ರಜನಿಕಾಂತ್‌ ಬಳಿಕ ಬಸ್ ಕಂಡಕ್ಟರ್‌ ಆಗಿ ನೇಮಕಗೊಂಡರು. ಈ ಸಮಯದಲ್ಲಿ ಅವರು ಕನ್ನಡ ಪೌರಾಣಿಕ ನಾಟಕಗಳಲ್ಲಿ ಬಣ್ಣ ಹಚ್ಚತೊಡಗಿದ್ದರು.

ಆರಂಭಿಕ ಹಂತ

ನಟನಾಗುವ ಕನಸು ಕಂಡಿದ್ದ ರಜನಿಕಾಂತ್ ಅದರ ಆರಂಭಿಕ ಹಂತವಾಗಿ ಹೊಸದಾಗಿ ರೂಪುಗೊಂಡ ಮದ್ರಾಸ್ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ನಟನಾ ಕೋರ್ಸ್‌ಗೆ ಸೇರಿಕೊಂಡರು. ಇವರನ್ನು ಗುರುತಿಸಿದ ತಮಿಳು ಚಿತ್ರ ನಿರ್ದೇಶಕ ಕೆ. ಬಾಲಚಂದರ್ ತಮಿಳು ಕಲಿಯಲು ಸಲಹೆ ನೀಡಿದರು ಮತ್ತು ರಜನಿಕಾಂತ್ ಎಂಬ ಹೆಸರನ್ನು ಸಹ ಸೂಚಿಸಿದರು. 1975ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ತಮಿಳು ಚಿತ್ರ ‘ಅಪೂರ್ವ ರಾಗಂಗಳ್’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಬಳಿಕ ಹಿಂದಿರುಗಿ ನೋಡದ ರಜನಿಕಾಂತ್ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ಅಭಿನಯಿಸಿದರು. ಅದರಲ್ಲೂ ತಮ್ಮದೇ ಆದ ಮ್ಯಾನರಿಸಂ, ಸ್ಟೈಲ್‌ ಮೂಲಕ ಥಿಯೇಟರ್‌ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ‘ಕಥಾ ಸಂಗಮʼ, ʼಭುವನ ಒರು ಕೆಲ್ವಿ ಕುರಿʼ, ʼಮುಲ್ಲುಮ್ ಮಲರುಮ್ʼ, ʼಅವಲ್ ಅಪ್ಪಾದಿಥನ್ʼ, ʼಬಿಲ್ಲಾʼ, ʼಮೂಂಡ್ರು ಮುಗಮ್ʼ, ʼಅಂಧಾ ಕಾನೂನ್ʼ, ʼನಲ್ಲವನುಕ್ಕು ನಲ್ಲವನ್ʼ, ʼಗಿರಫ್ತಾರ್ʼ, ʼಪಡಿಕ್ಕಡವನ್ʼ, ʼಹಮ್ʼ, ʼಎಂದಿರನ್‌ʼ, ‘ಶಿವಾಜಿ’, ‘ಜೈಲರ್‌’ ಇತ್ಯಾದಿ ರಜನಿಕಾಂತ್‌ ನಟಿಸಿದ ಸೂಪರ್‌ ಹಿಟ್‌ ಚಿತ್ರಗಳು.

ಇವರ ಆಸ್ತಿ ಮೌಲ್ಯ ಎಷ್ಟು?

ಸುಮಾರು ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ರಜನಿಕಾಂತ್ ದಾಖಲೆಯ ಸಂಭಾವನೆ ಪಡೆದಿದ್ದಾರೆ. ವರದಿಯೊಂದರ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು 430 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ರಜನಿಕಾಂತ್ ಚಲನಚಿತ್ರಗಳಿಗೆ ಸಂಭಾವನೆ ಪಡೆಯುವ ಜತೆಗೆ ವಿವಿಧ ಕಡೆ ಹೂಡಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚೆನ್ನೈಯ ಪ್ರತಿಷ್ಠಿತ ಏರಿಯಾ ಪೋಯೆಸ್ ಗಾರ್ಡನ್‌ನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಜತೆಗೆ ಹಲವು ಐಷಾರಾಮಿ ಕಾರುಗಳ ಸಂಗ್ರಹವೂ ಇದೆ. ಎರಡು ರೋಲ್ಸ್ ರಾಯ್ಸ್ – ಘೋಸ್ಟ್, ಟೊಯೊಟಾ ಇನ್ನೋವಾ, ಹೋಂಡಾ ಸಿವಿಕ್, ಬಿಎಂಡಬ್ಲ್ಯು ಎಕ್ಸ್ 5, ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್, ಲ್ಯಾಂಬೊರ್ಗಿನಿ ಉರುಸ್ ಮತ್ತು ಬೆಂಟ್ಲೆ ಕಾರುಗಳು ರಜನಿಕಾಂತ್‌ ಬಳಿ ಇದೆ.

ಇದನ್ನೂ ಓದಿ: Actor Rajinikanth: ʻಲಾಲ್ ಸಲಾಮ್ʼ ಶೂಟಿಂಗ್‌ ಬಿಡುವಿನಲ್ಲಿ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ಕೊಟ್ಟ ರಜನಿಕಾಂತ್‌

ರಜನಿಕಾಂತ್ ಅವರಿಗೆ 2000ರಲ್ಲಿ ಪದ್ಮ ಭೂಷಣ, 2016ರಲ್ಲಿ ಪದ್ಮ ವಿಭೂಷಣ ಮತ್ತು 2019ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಯಿತು. ಇತ್ತೀಚೆಗೆ ತೆರೆಕಂಡ ʼಜೈಲರ್‌ʼ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಇವರಿಗೆ ಇಬ್ಬರು ಮಕ್ಕಳು. ಖ್ಯಾತ ನಟ ಧನುಷ್‌ ಅವರು ರಜನಿಕಾಂತ್‌ ಅವರ ಅಳಿಯ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version