ತುಷಾರ್ ಹಿರಾನಂದಾನಿ (Tushar Hiranandani) ನಿರ್ದೇಶನದ ದೃಷ್ಟಿಹೀನ ಕೈಗಾರಿಕೋದ್ಯಮಿ ಶ್ರೀಕಾಂತ್ ಬೊಲ್ಲ (Srikanth Bolla) ಅವರ ಜೀವನ ಚರಿತ್ರೆಯನ್ನು ಆಧರಿಸಿದ ʼಶ್ರೀಕಾಂತ್ʼ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ನಟ (Bollywood actor) ರಾಜ್ ಕುಮಾರ್ ರಾವ್ (Rajkummar Rao) ಅಭಿನಯಕ್ಕೆ ಭಾರಿ ಮೆಚ್ಚುಗೆ ಕೇಳಿ ಬರುತ್ತಿದೆ.
ಚಿತ್ರದ ಕುರಿತು ಅಗಾಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ತಾವು ನಡೆದು ಬಂದಿದ್ದ ಹಾದಿಯನ್ನು ನೆನಪಿಸಿಕೊಂಡರು. ರಾಜ್ ಕುಮಾರ್ ಅವರು ತಮ್ಮ ತವರು ಗುರುಗ್ರಾಮ್ ನಿಂದ ಮುಂಬಯಿಗೆ ಆಗಮಿಸಿದ ಬಳಿಕ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. ನಾನು ಬೆಳೆಯುತ್ತಿರುವಾಗ ಗುರುಗ್ರಾಮ್ ಅಷ್ಟು ದೊಡ್ಡ ನಗರವಾಗಿರಲಿಲ್ಲ. ಅದಕ್ಕೆ ಹೋಲಿಸಿದರೆ ಆಗ ನನಗೆ ಮುಂಬಯಿ ತುಂಬಾ ದುಬಾರಿಯಾಗಿತ್ತು. ವಿಶೇಷವಾಗಿ ನಾನು ತುಂಬಾ ವಿನಮ್ರ ಹಿನ್ನೆಲೆಯಿಂದ ಬಂದವನಾಗಿದ್ದೆ. ಸಾಂಸ್ಕೃತಿಕ ಭಿನ್ನತೆಯೂ ಎದ್ದುಕಾಣುತ್ತಿತ್ತು. ಆದರೆ ನಾನು ಇಲ್ಲಿಯೇ ಉಳಿಯಬೇಕಾಗಿತ್ತು ಮತ್ತು ನಾನು ಯಾವಾಗಲೂ ಮುಂಬಯಿ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದ್ದೆ ಎಂದು ಅವರು ವಿ.ಆರ್. ಯುವಾ ಜೊತೆಗಿನ ಚಾಟ್‌ನಲ್ಲಿ ಹೇಳಿಕೊಂಡರು.
ನಾನು 10ನೇ ತರಗತಿಯನ್ನು ಪೂರ್ಣಗೊಳಿಸಿದ ತಕ್ಷಣ, ಬೂಗೀ ವೂಗೀ ನೃತ್ಯ ಸ್ಪರ್ಧೆಯ ಟಿವಿ ಸರಣಿ ಆಡಿಷನ್ ನೀಡಲು ಮುಂಬಯಿಗೆ ಬಂದೆ. ಆಗ ನಾನು ಮುಂಬಯಿ ನಗರ ಮತ್ತು ಶಾರುಖ್ ಖಾನ್ ಅವರ ಮನೆಯನ್ನು ನೋಡಲು ಬಯಸಿದ್ದೆ. ಆಗ ನನಗೆ 16 ವರ್ಷ. ನನ್ನ 12 ವರ್ಷದ ಸೋದರ ಸಂಬಂಧಿಯೊಂದಿಗೆ ರೈಲಿನಲ್ಲಿ ನಗರಕ್ಕೆ ಬಂದಿದ್ದೆ. ನಮ್ಮಿಬ್ಬರ ಬಳಿಯೂ ಹಣವಿಲ್ಲದ ಕಾರಣ ಚಿಕ್ಕಮ್ಮನಿಂದ 5 ಸಾವಿರ ರೂ. ಪಡೆದು ಬಂದಿದ್ದೆವು. ನನ್ನ ಕುಟುಂಬವು ತುಂಬಾ ಬೆಂಬಲ ನೀಡಿತು. ಇಬ್ಬರು ಮಕ್ಕಳು ಮೂರು ದಿನ ರೈಲು ಪ್ರಯಾಣ ಮಾಡಿ ಮುಂಬಯಿಗೆ ಬಂದಿದ್ದೆವು. ಇಲ್ಲಿಗೆ ಬಂದ ಬಳಿಕ ನಗರವನ್ನು ನೋಡಿ ಮೈಮರೆತಿದ್ದೆ ಎಂದು ಅವರು ನೆನಪಿಸಿಕೊಂಡರು. ಬೂಗಿ ವೂಗಿ ಆಡಿಷನ್‌ಗೆ ಹಾಜರಾಗಿದ್ದರೂ ಆಯ್ಕೆಯಾಗಲಿಲ್ಲ ಎಂದು ಪ್ರಸ್ತಾಪಿಸಿದ ರಾಜ್‌ಕುಮಾರ್, ಮುಂಬಯಿಗೆ ತನ್ನ ಮೊದಲ ಭೇಟಿಯ ನೆನಪುಗಳನ್ನು ಮೆಲುಕು ಹಾಕಿದರು.
ಶಾರುಖ್ ಖಾನ್ ಭೇಟಿಯಾಗುವ ಹಂಬಲ
ಇಡೀ ದಿನ ಶಾರುಖ್ ಖಾನ್ ಅವರ ಮನೆಯ ಮುಂದೆ ಕಾಯುತ್ತಿದ್ದೆವು. ರಾತ್ರಿ, ನಾವು ರೈಲ್ವೇ ನಿಲ್ದಾಣದಲ್ಲಿಯೇ ಉಳಿದುಕೊಂಡೆವು ಮತ್ತು ಆಗ ನಮಗೆ ಹಣವಿಲ್ಲದ ಕಾರಣ ಕೇವಲ ವಡಾ ಪಾವ್ ಅನ್ನು ಸೇವಿಸಿದ್ದೇವೆ. ಎರಡು ದಿನ ಇಲ್ಲಿದ್ದೆವು. ಬೆಳಗ್ಗೆ 10 ಗಂಟೆಗೆ ಮನ್ನತ್ ತಲುಪಿ ಸಂಜೆ 4-5 ಗಂಟೆಯವರೆಗೆ ಕಾಯುತ್ತಿದ್ದೆವು. ನಾವು ಅವರನ್ನು ನೋಡಲೇಬೇಕು ಎಂಬ ಕನಸಿತ್ತು.
ಕೊನೆಗೂ ಶಾರುಖ್ ಖಾನ್ ಅವರನ್ನು ಮುಖಾಮುಖಿಯಾಗಿ ಭೇಟಿಯಾದುದನ್ನು ನೆನಪಿಸಿಕೊಂಡ ರಾಜ್‌ಕುಮಾರ್, ನಾನು ನಟನಾಗಲು ಅವರು ಸ್ಫೂರ್ತಿ. ಅವರ ಬದುಕಿನ ಪ್ರಯಾಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ ಮತ್ತು ಸ್ಫೂರ್ತಿ ಪಡೆದಿದ್ದೇನೆ. ವಿಶೇಷವಾಗಿ ಅವರು ದೆಹಲಿಯವರು. ಹೊರಗಿನವರು ಮತ್ತು ರಂಗಭೂಮಿ ಹಿನ್ನೆಲೆಯನ್ನು ಹೊಂದಿದ್ದರು. ಆದರೆ ಅವರನ್ನು ಭೇಟಿಯಾಗುವುದು ತುಂಬಾ ಅಸಾಧ್ಯ ಎಂದೆನಿಸುತ್ತಿತ್ತು.
ಆ ಸಮಯದಲ್ಲಿ ಸಿಟಿಲೈಟ್ಸ್ (2014) ಅನ್ನು ಪ್ರಚಾರ ಮಾಡುತ್ತಿದ್ದೆವು. ಅವರು ಮೆಹಬೂಬ್ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿಯಿತು. ನಾನು ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರೂ, ನನಗೆ ಆರಂಭದಲ್ಲಿ ಭಯವಾಯಿತು. ನಾನು ಅಲ್ಲಿದ್ದ ಶಕುನ್ (ಬಾತ್ರಾ) ಗೆ ಮೆಸೇಜ್ ಮಾಡಿದೆ. ಅನಂತರ ಅವರು ಹಿಂತಿರುಗಿದರು ಮತ್ತು ಅವರು ಎಸ್ ಆರ್ ಕೆ ನನಗೆ ಕರೆ ಮಾಡುತ್ತಿದ್ದಾರೆ ಎಂದು ಹೇಳಿದರು. ನಾನು ತಕ್ಷಣ ನನ್ನನ್ನು ಪರಿಚಯಿಸಲು ಮತ್ತು ನನ್ನ ಹೆಸರನ್ನು ರಾಜ್‌ಕುಮಾರ್ ರಾವ್ ಮತ್ತು ನಾನು ಎಫ್‌ಟಿಐಐನಲ್ಲಿ ಓದಿದ ನಟ ಎಂದು ಹೇಳಲು ತಯಾರಿ ನಡೆಸಲಾರಂಭಿಸಿದೆ. ಆದರೆ ಅವರಿಗೆ ನನ್ನ ಬಗ್ಗೆ ಎಲ್ಲವೂ ತಿಳಿದಿತ್ತು. “ಶಾಹಿದ್ʼಗಾಗಿ ನಾನು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದೇನೆ, ʼಕೈ ಪೋ ಚೆʼ ಚಿತ್ರ ಚೆನ್ನಾಗಿದೆ ಮತ್ತು ʼಸಿಟಿಲೈಟ್ಸ್ʼ ಶೀಘ್ರದಲ್ಲೇ ಬರಲಿದೆ ಎಂದು ಅವರು ತಿಳಿದಿದ್ದರು. ಅದರ ಅನಂತರ ಶಾರುಖ್ ಖಾನ್ ಅವರನ್ನು ಹಲವು ಬಾರಿ ಭೇಟಿ ಮಾಡಿದರೂ, ಅವರು ಮತ್ತೆ ಬಾಲಿವುಡ್‌ನ ಬಾದ್‌ಶಾ ಅವರನ್ನು ಎದುರಿಸಿದಾಗಲೆಲ್ಲಾ ಅವರು ಸ್ಟಾರ್-ಸ್ಟ್ರಕ್ ಆಗುತ್ತಾರೆ ಎಂದು ರಾಜ್‌ಕುಮಾರ್ ಹೇಳಿದರು.
ಇದನ್ನೂ ಓದಿ: House of the Dragon: ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಟ್ರೈಲರ್ ಔಟ್!
ಈಗಲೂ ನನಗೆ ಹಿರಿಯ ನಾಯಕರ ಕರೆ ಬಂದರೆ ಅದರಲ್ಲೂ ಅಕ್ಷಯ್ ಕುಮಾರ್ ಅಥವಾ ಶಾರುಖ್ ಖಾನ್ ಕರೆ ಮಾಡಿದರೆ ನಾನು ತುಂಬಾ ಉತ್ಸುಕನಾಗುತ್ತೇನೆ. ನನ್ನೊಳಗಿನ ಅಭಿಮಾನಿ ಮತ್ತು ಗುರ್ಗಾಂವ್‌ನ ಮಗು ಇನ್ನೂ ಜೀವಂತವಾಗಿದೆ ಎಂಬಂತೆ ಭಾಸವಾಗುತ್ತದೆ ಎಂದು ಹೇಳಿದರು.