ಬೆಂಗಳೂರು : ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ತಮ್ಮ ಮದುವೆ ಸುದ್ದಿ ಬೆನ್ನಲ್ಲೇ ನಟಿ ಶೆರ್ಲಿನ್ ಚೋಪ್ರಾ ಅವರು ದೂರು ನೀಡಿದ ಕಾರಣ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವರನ್ನು ಬಂಧಿಸಿದ್ದರು. ಇದೀಗ ರಾಖಿ ಅವರ ಮಾನವೀಯ ಆಧಾರದ ಮೇಲೆ ಅವರ ಬಂಧನವನ್ನು ತಡೆಹಿಡಿಯಲಾಗಿದ್ದು, ಮನೆಗೆ ಹೋಗಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಪತಿ ಆದಿಲ್ ದುರಾನಿಯೊಂದಿಗೆ ಪೊಲೀಸ್ ಠಾಣೆಯಿಂದ ಮನೆಗೆ ತೆರಳಿದ್ದಾರೆ.
ಶೆರ್ಲಿನ್ ಚೋಪ್ರಾ ಅವರ ವಕೀಲ ಸುಹೇಲ್ ಷರೀಫ್ ಈ ಕುರಿತು ಮಾತನಾಡಿ ʻʻರಾಖಿ ಸಾವಂತ್ ಅವರು ತಮ್ಮ ತಾಯಿಯ ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದಾರೆ. ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಇದನ್ನು ಆಧರಿಸಿ ಮತ್ತು ಮಾನವೀಯ ಆಧಾರದ ಮೇಲೆ ಶೆರ್ಲಿನ್ ಮತ್ತು ಅವರ ವಕೀಲರು ಸದ್ಯಕ್ಕೆ ಅವರ ಬಂಧನಕ್ಕೆ ಒತ್ತಾಯಿಸುತ್ತಿಲ್ಲ,” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Rakhi Sawant Arrested | ಮದುವೆ ವಿಚಾರಕ್ಕೆ ಸುದ್ದಿಯಾದ ಬೆನ್ನಲ್ಲೇ ರಾಖಿ ಸಾವಂತ್ ಬಂಧನ, ಏನಿದು ಪ್ರಕರಣ?
“ಅಂಬೋಲಿ ಪೊಲೀಸರು ನಟಿ ರಾಖಿ ಸಾವಂತ್ ಮನೆಗೆ ಹೋಗಲು ಅವಕಾಶ ನೀಡಿದ್ದಾರೆ. ರಾಖಿ ವಿಚಾರಣೆಗೆ ಸಹಕರಿಸಿದ್ದಾಳೆ ಮತ್ತು ತನಿಖೆಗಾಗಿ ತನ್ನ ಮೊಬೈಲ್ ಫೋನ್ ಅನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾಳೆ, ಆದ್ದರಿಂದ ಅವರನ್ನು ಬಂಧಿಸಲು ಯಾವುದೇ ನಿರ್ದಿಷ್ಟ ಕಾರಣವಿಲ್ಲʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಶೆರ್ಲಿನ್ ಮಾತನಾಡಿ, “ನಾಳೆಯೂ ಪೊಲೀಸ್ ಠಾಣೆಯಲ್ಲಿ ವರದಿ ಮಾಡಲು ರಾಖಿಯನ್ನು ಕರೆಯಲಾಗಿದೆ. ಈ ವಿಚಾರಣೆ ಇನ್ನೂ ಮುಗಿದಿಲ್ಲ. ವಿಚಾರಣೆ ಮುಗಿಯುವವರೆಗೂ ಆಕೆಗೆ ಕರೆ ಮಾಡುತ್ತಲೇ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ನನಗೆ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದ್ದಾರೆʼʼಎಂದಿದ್ದಾರೆ.
ಜನವರಿ 19ರಂದು ದಿಂಡೋಶಿ ನ್ಯಾಯಾಲಯದಲ್ಲಿ ರಾಖಿ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ರಾಖಿ ಸಾವಂತ್ ಅವರು ತಮ್ಮ ಡಾನ್ಸ್ ಅಕಾಡೆಮಿಗೆ ಚಾಲನೆ ನೀಡುವ (ಜನವರಿ 19) ದಿನದಂದೇ ಬಂಧಿಸಲ್ಪಟ್ಟಿದ್ದರು. ಟ್ವೀಟ್ ಮೂಲಕ ಶೆರ್ಲಿನ್ ಚೋಪ್ರಾ ಅವರೇ ರಾಖಿ ಸಾವಂತ್ ಬಂಧನದ ಕುರಿತು ಮಾಹಿತಿ ಹಂಚಿಕೊಂಡಿದ್ದರು. ರಾಖಿ ಸಾವಂತ್ ಅವರನ್ನು ಅಂಬೋಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. ಮಿ ಟೂ ಪ್ರಕರಣದಲ್ಲಿ ರಾಖಿ ಸಾವಂತ್ ಅವರು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಶೆರ್ಲಿನ್ ಚೋಪ್ರಾ ದೂರು ದಾಖಲಿಸಿದ್ದರು.
ಇದನ್ನೂ ಓದಿ | Rakhi Sawant | ಮೈಸೂರಿನ ಜನ ನನ್ನೊಂದಿಗೆ ನಿಲ್ಲಬೇಕು: ಆದಿಲ್ ವಿಚಾರಕ್ಕೆ ಗಳಗಳನೆ ಅತ್ತ ರಾಖಿ ಸಾವಂತ್!