ವಿವಾದಿತ ನಟಿ ರಾಖಿ ಸಾವಂತ್ (Rakhi Sawant) ಪತಿ ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಅವರು ಮುಂಬಯಿಯಲ್ಲಿ ಅರೆಸ್ಟ್ ಆಗಿದ್ದು (Adil Khan Durrani Arrested), ಓಶಿವಾರಾ ಪೊಲೀಸ್ ಸ್ಟೇಶನ್ಗೆ ಕರೆದೊಯ್ಯಲಾಗಿದೆ. ಈಗೆರಡು ತಿಂಗಳ ಹಿಂದಷ್ಟೇ ಆದಿಲ್ ಖಾನ್ರನ್ನು ಮದುವೆಯಾದ ವಿಷಯವನ್ನು ರಾಖಿ ಸಾವಂತ್ ಬಹಿರಂಗಪಡಿಸಿದ್ದರು. ಆದರೆ ಇವರಿಬ್ಬರ ಮಧ್ಯೆ ಆರೋಪ-ಪ್ರತ್ಯಾರೋಪ ನಡೆಯುತ್ತಲೇ ಇದ್ದು, ಅದೀಗ ತಾರಕಕ್ಕೇ ಏರಿತ್ತು.
‘ಪತಿ ಆದಿಲ್ ಖಾನ್ಗೆ ಇನ್ನೊಬ್ಬ ಯುವತಿ ಜತೆ ಅಕ್ರಮ ಸಂಬಂಧವಿದೆ’ ಎಂದು ಇತ್ತೀಚೆಗೆ ಅತ್ತು-ಕರೆದು ರಂಪ ಮಾಡಿದ್ದ ರಾಖಿ ಸಾವಂತ್ ‘ನಾನು ಕಳೆದ ವರ್ಷ ಮರಾಠಿ ಬಿಗ್ಬಾಸ್ ಶೋನಲ್ಲಿ ಪಾಲ್ಗೊಂಡಾಗ ಸಿಕ್ಕಿದ್ದ ಹಣವನ್ನೆಲ್ಲ ಆತ ದುರುಪಯೋಗಪಡಿಸಿಕೊಂಡಿದ್ದಾನೆ ಎಂದೂ ದೂರಿದ್ದಳು. ‘ಕ್ಯಾನ್ಸರ್ ಪೀಡಿತರಾಗಿದ್ದ ನನ್ನ ಅಮ್ಮನ ಸರ್ಜರಿಗೆ ಆತ ಸರಿಯಾದ ಸಮಯಕ್ಕೆ ಹಣ ಕೊಡಲಿಲ್ಲ. ಹೀಗಾಗಿ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದೂ ರಾಖಿ ಸಾವಂತ್ ಹೇಳಿದ್ದರು. ಓಶಿವಾರಾ ಠಾಣೆಯಲ್ಲಿ ಆದಿಲ್ ವಿರುದ್ಧ ದೂರು ಕೊಟ್ಟು, ಎಫ್ಐಆರ್ ದಾಖಲಾಗಿತ್ತು. ಇದೀಗ ಅರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: Rakhi Sawant : ಪತಿ ಆದಿಲ್ ಅಕ್ರಮ ಸಂಬಂಧದ ಬಗ್ಗೆ ಸುಳಿವು ನೀಡಿದ ರಾಖಿ ಸಾವಂತ್: ಗಳಗಳನೆ ಅತ್ತ ನಟಿ
ರಾಖಿ ಸಾವಂತ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಯಾವೆಲ್ಲ ಅಂಶಗಳನ್ನು ದಾಖಲಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಇಂದು ಆದಿಲ್ ಖಾನ್ ಅವರು ರಾಖಿಯವರನ್ನು ಭೇಟಿ ಮಾಡಲು ಆಕೆಯ ಮನೆಗೆ ಬರುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವೇಳೆ ರಾಖಿ ಸಾವಂತ್ ಕೂಡ ಠಾಣೆಗೆ ಬಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ‘ಇದು ಖಂಡಿತ ಯಾವುದೇ ನಾಟಕವೂ ಅಲ್ಲ, ಆದಿಲ್ ನನ್ನ ಜೀವನವನ್ನು ಹಾಳು ಮಾಡಿದೆ. ನನ್ನನ್ನು ಥಳಿಸಿದ್ದಾನೆ. ನನ್ನ ಹಣವನ್ನೆಲ್ಲ ಕದ್ದಿದ್ದಾನೆ’ ಎಂದು ಅತ್ತಿದ್ದಾರೆ. ಹಾಗೇ, ‘ಆದಿಲ್ ನನಗೆ ವಂಚಿಸಿದ ಎಂಬುದಕ್ಕೆ ಎಲ್ಲ ಸಾಕ್ಷಿಯನ್ನೂ ಪೊಲೀಸರಿಗೆ ನೀಡಿದ್ದೇನೆ. ಅವರಿಗೇ ಸತ್ಯ ಅರ್ಥವಾಗುತ್ತದೆ’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Rakhi Sawant: ಮದುವೆಯಾದ ಕೆಲವೇ ದಿನದಲ್ಲಿ ರಾಖಿ ಸಾವಂತ್, ಆದಿಲ್ ದಾಂಪತ್ಯ ಅಂತ್ಯ, ನಟಿಯಿಂದಲೇ ಘೋಷಣೆ