ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಮತದಾದ ಆದ ಬಳಿಕ ತಮ್ಮ ಸಿನಿಮಾ ಅಪ್‌ಡೇಟ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 777 ಚಾರ್ಲಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಕ್ಷಿತ್ ಶೆಟ್ಟಿ ಪ್ರಸ್ತುತ ಹಲವಾರು ಯೋಜನೆಗಳಲ್ಲಿ ನಿರತರಾಗಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಶೂಟಿಂಗ್ ಮುಕ್ತಾಯ ಆಗಿದೆ. ಇದೀಗ ರಕ್ಷಿತ್ ಶೆಟ್ಟಿ ‘ರಿಚರ್ಡ್ ಆಂಟನಿ’ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ರಕ್ಷಿತ್ ಶೆಟ್ಟಿ ಅವರು ಲೋಕೇಶ್ ಕನಕರಾಜ್ ಅವರ ದಳಪತಿ 67ರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ವದಂತಿಗಳು ಹೊರಗೆ ಬಿದ್ದ ಬೆನ್ನಲ್ಲೇ ಟ್ವೀಟ್ ಮೂಲಕ ಆ ಯೋಜನೆ ಭಾಗವಾಗಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ. ಉಡುಪಿಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜತೆ ರಕ್ಷಿತ್ ಶೆಟ್ಟಿ ಮಾತನಾಡಿ ʻʻಇಂದೇ (ಮೇ 10) ನಾನು ಅಮೆರಿಕಕ್ಕೆ ತೆರಳುತ್ತಿದ್ದೇನೆ. ವೋಟ್ ಮಾಡಬೇಕು ಎಂಬ ಕಾರಣಕ್ಕೆ ಇಷ್ಟು ದಿನ ಕಾದಿದ್ದೆ. ಇಲ್ಲದಿದ್ದರೆ ಈಗಾಗಲೇ ಅಮೆರಿಕಕ್ಕೆ ಹೋಗಿರುತ್ತಿದ್ದೆ. ‘ರಿಚರ್ಡ್ ಆಂಟನಿ’ ಚಿತ್ರದ ಫೈನಲ್ ಡ್ರಾಫ್ಟ್ ಬರೆಯಬೇಕಿದೆ. ಅಮೆರಿಕಕ್ಕೆ ಹೋದರೆ ಇಲ್ಲಿ ರಾತ್ರಿ ಆದಾಗ ಅಲ್ಲಿ ಬೆಳಗ್ಗೆ ಆಗಿರುತ್ತದೆ. ಯಾರೂ ಡಿಸ್ಟರ್ಬ್ ಮಾಡಲ್ಲʼʼ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಜುಲೈ ತಿಂಗಳ ಕೊನೆಯಲ್ಲಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಕೆಲವು ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ತಮ್ಮ ಯೋಜನೆಗಳ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದರು. ʻʻಸಪ್ತ ಸಾಗರದಾಚೆ ಎಲ್ಲೋ ನಂತರ ನನ್ನ ಲೈನ್ ಅಪ್‌ಗಳು ಸಾಕಷ್ಟು ಸ್ಪಷ್ಟವಾಗಿವೆ. ಅಂದರೆ ರಿಚರ್ಡ್ ಆಂಟನಿ, ಪುಣ್ಯ ಕೋಟಿ 1 (PK 1), ಪುಣ್ಯ ಕೋಟಿ 2 (PK 2), (RA), PK 1 ಮತ್ತು 2,ಮಿಡ್ನೈಟ್ ಟು ಮೋಕ್ಷ (M2M) ಇವುಗಳು ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಲನಚಿತ್ರಗಳಾಗಿವೆ. ಆದರೆ ಕಿರಿಕ್ ಪಾರ್ಟಿ 2 (KP2) ಗಾಗಿ ನಾನು ವಿಭಿನ್ನ ಯೋಜನೆಗಳನ್ನು ಹೊಂದಿದ್ದೇನೆʼʼಎಂದಿದ್ದರು.
ಇದನ್ನೂ ಓದಿ: Rakshit shetty: ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್ ಅಭಿನಯದ ʻಸಪ್ತ ಸಾಗರದಾಚೆ ಎಲ್ಲೋʼ ಶೂಟಿಂಗ್ ಪೂರ್ಣ
ಸಪ್ತ ಸಾಗರದಾಚೆ ಎಲ್ಲೋ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ-ನಟಿಯರು ಬೇರೆ ಬೇರೆ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ಬಗ್ಗೆ ರಕ್ಷಿತ್ ಮಾತನಾಡಿ ʻʻಪ್ರಚಾರಕ್ಕೆ ನನಗೆ ಬರುವಂತೆ ಕೇಳಿದರು. ಆದರೆ ನಾನು ಕ್ಯಾಂಪೇನ್‌ಗೆ ಯಾವತ್ತೂ ಹೋಗುವುದಿಲ್ಲʼʼಎಂದು ಹೇಳಿದರು.
ರಕ್ಷಿತ್ ಶೆಟ್ಟಿ ಈ ಸಿನಿಮಾಗಾಗಿ 20 ಕೆ. ಜಿ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹೇಮಂತ್ ರಾವ್ ಈ ಚಿತ್ರದ ನಿರ್ದೇಶಕರು. ಇವರ ʼಕವಲುದಾರಿʼ ಮತ್ತು ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಚಿತ್ರಗಳು ಸೂಪರ್ ಹಿಟ್ ಆಗಿದ್ದವು. ರಕ್ಷಿತ್ ಅಭಿಮಾನಿಗಳು ಈ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇರಿಸಿದ್ದಾರೆ. ಈ ಚಿತ್ರಕ್ಕೆ 137 ದಿನ ಶೂಟ್ ಮಾಡಲಾಗಿದೆ.