ಬೆಂಗಳೂರು: ರಾಜ್ ಬಿ ಶೆಟ್ಟಿ (Raj B Shetty) ಅಭಿನಯದ ʻಟೋಬಿʼ ಚಿತ್ರ ಆಗಸ್ಟ್ 25ಕ್ಕೆ ರಿಲೀಸ್ ಆಗುತ್ತಿದೆ. ಇದಾದ ಒಂದು ವಾರಕ್ಕೆ ಅಂದರೆ (ಸೆಪ್ಟೆಂಬರ್ 1) ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರ ತೆರೆಗೆ ಬರುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಈ ಎರಡೂ ಸಿನಿಮಾಗಳು ಕ್ಲ್ಯಾಶ್ ಆಗುತ್ತಿವೆ. ರಾಜ್ ಬಿ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಒಳ್ಳೆಯ ಸ್ನೇಹಿತರೂ ಕೂಡ ಹೀಗಿದ್ದರೂ ಒಂದೇ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಿದ್ದೇಕೆ ಎಂಬ ಪ್ರಶ್ನೆಗೆ ರಾಜ್ ಬಿ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ (Raj B Shetty) ಅಭಿನಯದ ʻಟೋಬಿʼ ಚಿತ್ರ ಫಸ್ಟ್ ಲುಕ್ ಸಖತ್ ಸೌಂಡ್ ಮಾಡುತ್ತಿದೆ. ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೀಗ ‘ಸಪ್ತಸಾಗರದಾಚೆ ಎಲ್ಲೋ’ ಹಾಗೂ ಟೋಬಿ ಒಟ್ಟಿಗೆ ರಿಲೀಸ್ ಆಗುವ ಬಗ್ಗೆ ರಾಜ್ ಬಿ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ. ʻʻ‘ಒಟ್ಟಿಗೆ ಸಪೋರ್ಟ್ ಮಾಡೋಣ. ಹೊಡೆದಾಡಿಕೊಂಡು ಯಾಕೆ ಸಿನಿಮಾ ಮಾಡಬೇಕು? ಒಟ್ಟಿಗೆ ಇದ್ದು ಯಾಕೆ ಸಿನಿಮಾ ಮಾಡಬಾರದು? ನಾನು ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಫ್ಯಾನ್. ಟೋಬಿ ಹಾಗೂ ಸಪ್ತ ಎರಡೂ ಬೇರೆ ಬೇರೆ ರೀತಿಯ ಸಿನಿಮಾ. ಇದು ಕಾಂಪಿಟೇಷನ್ ಅಲ್ಲ ಸಹಯೋಗ. ಕನ್ನಡ ಸಿನಿಮಾ ನೋಡಲು ಜನರು ಮತ್ತೆ ಥಿಯೇಟರ್ಗೆ ಬರಬೇಕು ಎನ್ನುವ ಪ್ರಯತ್ನ’ ಎಂದು ಹೇಳಿದರು.
‘ನಾನು ನನ್ನ ಸಿನಿಮಾ ಆಗಸ್ಟ್ 25ಕ್ಕೆ ಬರಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆ. ಅವರ ಲೆಕ್ಕಾಚಾರ ಬೇರೆ ರೀತಿ ಇತ್ತು. ನಾವು ಯಾವಾಗ ಸಿನಿಮಾ ರಿಲೀಸ್ ಮಾಡುತ್ತೇವೆ ಎನ್ನುವುದಕ್ಕೆ ಸಾವಿರಾರು ಕಾರಣ ಇರುತ್ತದೆ. ಎದುರು ಟೀಂನವರು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವರು ತೆಗೆದುಕೊಂಡ ನಿರ್ಧಾರ ನಮ್ಮ ಘಾಸಿ ಮಾಡಲು ಅಲ್ಲವೇ ಅಲ್ಲ’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
‘ನನ್ನ ಸಿನಿಮಾ ಪೋಸ್ಟರ್ನ ರಕ್ಷಿತ್ ಶೆಟ್ಟಿ ಶೇರ್ ಮಾಡಿಕೊಳ್ಳುತ್ತಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶಕ ಹೇಮಂತ್ ರಾವ್ ನಮ್ಮನ್ನು ಬೆಂಬಲಿಸುತ್ತಾರೆ. ಹೀಗೇಕೆ? ಇದು ಸಪೋರ್ಟಿಂಗ್ ಸಿಸ್ಟಮ್’ ಎಂದಿದ್ದಾರೆ ರಾಜ್ ಬಿ. ಶೆಟ್ಟಿ.
ಆಗಸ್ಟ್ 25ಕ್ಕೆ ಟೋಬಿ ಸಿನಿಮಾ
ಕಥೆಗಾರ ಟಿ. ಕೆ. ದಯಾನಂದ್ ತಾವೇ ಸ್ವತಃ ನೋಡಿದ ಕಾರವಾರದ ವಿಲಕ್ಷಣ ವ್ಯಕ್ತಿಯ ಬದುಕನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರಂತೆ. ಆ ವ್ಯಕ್ತಿಯನ್ನು ನೋಡಿದಾಗಿಂದ, ನಾನಾ ರೀತಿಯಲ್ಲಿ ಆತ ಕಾಡಿದ. ಆ ಕಾಡಿದ ವ್ಯಕ್ತಿಯ ಕಥೆಯೇ ಟೋಬಿ ಸಿನಿಮಾ ಎಂದಿದ್ದಾರೆ ಅವರು.
ಇದನ್ನೂ ಓದಿ: Rakshit shetty: ʻಸಪ್ತ ಸಾಗರದಾಚೆ ಎಲ್ಲೋʼ ಎರಡೂ ಭಾಗಗಳ ರಿಲೀಸ್ ಡೇಟ್ ಅನೌನ್ಸ್!
ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಹೊಸ ರೀತಿಯ ಕಥೆಗಳನ್ನೇ ಹೊತ್ತು ತರುವ ನಟನಾಗಿ ಮಿಂಚುತ್ತಿದ್ದಾರೆ ರಾಜ್ ಬಿ ಶೆಟ್ಟಿ . ಗರುಡ ಗಮನ ವೃಷಭ ವಾಹನದಂತಹ ವಿಶೇಷ ಕಥಾ ಹಂದರವುಳ್ಳ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ರಾಜ್ ಇದೀಗ ʻಟೋಬಿʼ ಮೂಲಕ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರುವುದಕ್ಕೆ ಸಿದ್ಧವಾಗಿದ್ದಾರೆ. ಅಂದ ಹಾಗೆ ಈ ಟೋಬಿ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಅವರೇ ಚಿತ್ರದ ನಿರ್ದೇಶನ ಮಾಡುವುದರ ಜತೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೆಪ್ಟೆಂಬರ್ 1ಕ್ಕೆ ಸಪ್ತಸಾಗರದಾಚೆ ಎಲ್ಲೋ
.“ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಸೈಡ್ 1 ಅಂದರೆ ಮೊದಲ ಭಾಗ ಸೆಪ್ಟೆಂಬರ್ 1 ರಂದು ರಿಲೀಸ್ ಆಗಲಿದೆ ಸೈಡ್ 2 (ಭಾಗ-2) ಅಕ್ಟೋಬರ್ 20 ರಂದು ರಿಲೀಸ್ ಆಗಲಿದೆ. ಮೊದಲ ಭಾಗದಲ್ಲಿ ಮನು- ಸುರಭಿ ಪ್ರೇಮಯಾನ, ಎರಡನೇ ಭಾಗದಲ್ಲಿ ನೋವಿನಲ್ಲಿ ಉಳಿದ ಮನುವಿನ ಕಥೆ ಸಿನಿಮಾದಲ್ಲಿ ಇರಲಿದೆ.
ಇದನ್ನೂ ಓದಿ: Weather report : ಕರಾವಳಿ ಸೇರಿ ಈ 8 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಇರಲಿ ಈ ಎಚ್ಚರ
ಹೇಮಂತ್ ರಾವ್ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಕ್ಷಿತ್ ಶೆಟ್ಟಿಯೊಂದಿಗೆ ರುಕ್ಮಿಣಿ ವಸಂತ್ ಮತ್ತು ಚೈತ್ರ ಆಚಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.