ಬೆಂಗಳೂರು: ಕಳೆದ ವರ್ಷ ತೆರೆಕಂಡ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸರಣಿ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದವು. ಯಶಸ್ವಿ ನಿರ್ದೇಶಕ ಹೇಮಂತ್ ಎಂ. ರಾವ್ ಮತ್ತು ರಕ್ಷಿತ್ ಶೆಟ್ಟಿ (Rakshit Shetty) ಕಾಂಬಿನೇಷ್‌ನ ಈ ದೃಶ್ಯ ಕಾವ್ಯ ಕನ್ನಡ ಜತೆಗೆ ಇತರ ಭಾಷೆಗಳಲ್ಲಿಯೂ ತೆರೆಕಂಡು ಗಮನ ಸೆಳೆದಿತ್ತು. ಒಟಿಟಿಯಲ್ಲಿಯೂ ಸ್ಟ್ರೀಮಿಂಗ್ ಆಗಿ ಮೆಚ್ಚುಗೆ ಪಡೆದಿದ್ದ ಈ ಚಿತ್ರ ಇದೀಗ ಕಿರುತೆರೆಗೂ ಲಗ್ಗೆ ಇಟ್ಟಿದೆ. ಯಾವ ಚಾನಲ್‌ನಲ್ಲಿ, ಯಾವಾಗ ಪ್ರಸಾರವಾಗಲಿದೆ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಯಾವಾಗ ಪ್ರಸಾರ?
ಜೀ ಕನ್ನಡ ವಾಹಿನಿಯಲ್ಲಿ ಮೊಟ್ಟ ಮೊದಲ ಬಾರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ಪ್ರಸಾರ ಆಗಲಿದೆ. ಭಾನುವಾರ (ಮಾರ್ಚ್ 24) ರಾತ್ರಿ 7.30ಕ್ಕೆ ಈ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ʼಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಕೂಡ ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು.
‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ. ಆಚಾರ್ ಜೋಡಿ ಮೋಡಿ ಮಾಡಿತ್ತು. ಇವರೊಂದಿಗೆ ಅಚ್ಯುತ್ ಕುಮಾರ್, ಜೆ.ಪಿ. ತೂಮಿನಾಡ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ, ಯಮುನಾ ಶ್ರೀನಿಧಿ ಪಾತ್ರಗಳು ಕೂಡ ಜನರನ್ನು ಆಕರ್ಷಿಸಿದ್ದವು. ಜತೆಗೆ ಚರಣ್ ರಾಜ್ ಸಂಯೋಜನೆಯ ಹಾಡುಗಳು ನೋಡುಗರ ಹೃದಯ ಗೆದ್ದಿದ್ದರೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಕೂಡ ಮೆಚ್ಚುಗೆ ಗಳಿಸಿತ್ತು.
ಹಿಟ್ ಕಾಂಬಿನೇಷನ್
2016ರಲ್ಲಿ ತೆರೆಕಂಡ ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾದ ಬಳಿಕ ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್ ಎಂ. ರಾವ್ ಮತ್ತು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಒಂದಾಗಿದ್ದರು. ಅನಂತ್‌ನಾಗ್, ವಶಿಷ್ಟ ಸಿಂಹ, ಶ್ರುತಿ ಹರಿಹರನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾ ಚಿತ್ರ ಪ್ರೇಮಿಗಳ ಗಮನ ಸೆಳೆದಿತ್ತು. ಜತೆಗೆ ಪರಭಾಷಿಕರೂ ಈ ಚಿತ್ರವನ್ನು ಹೊಗಳಿದ್ದರು. ಹೀಗಾಗಿ ʼಸಪ್ತ ಸಾಗರದಾಚೆ ಎಲ್ಲೋʼ ಸೆಟ್ಟೇರಿದಾಗಿನಿಂದ ನಿರೀಕ್ಷೆ ಗರಿಗೆದರಿತ್ತು. ಕಮರ್ಷಿಯಲ್ ಅಂಶಗಳಿಲ್ಲದೆ ಈ ಶುದ್ಧ ಕ್ಲಾಸಿಕ್ ಚಿತ್ರ ನಿರೀಕ್ಷೆಯಂತೆ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಮಾತ್ರವಲ್ಲ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ. ಆಚಾರ್ ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳ ಪೈಕಿ ಇದೂ ಒಂದು ಎನಿಸಿಕೊಂಡಿತ್ತು.
ಇದನ್ನೂ ಓದಿ: Naga Vamsi: ಸಪ್ತ ಸಾಗರದಾಚೆ ಎಲ್ಲೋ ತುಂಬಾ ಗೋಳು ಸಿನಿಮಾ, ಯಾಕೆ ನೋಡಬೇಕು? ನಿರ್ಮಾಪಕ ನಾಗ ವಂಶಿ!
ಸದ್ಯ ʼಸಪ್ತ ಸಾಗರದಾಚೆ ಎಲ್ಲೋʼ ಸರಣಿ ಚಿತ್ರಗಳ ಯಶಸ್ಸಿನಲ್ಲಿ ತೇಲುತ್ತಿರುವ ರಕ್ಷಿತ್ ಶೆಟ್ಟಿ (Rakshit Shetty) ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ. ʼಉಳಿದವರು ಕಂಡಂತೆʼ ಸಿನಿಮಾದ ಮುಂದುವರಿದ ಭಾಗ ʼರಿಚರ್ಡ್ ಆ್ಯಂಟನಿ: ಲಾರ್ಡ್ ಆಫ್ ದಿ ಸಿʼ ಚಿತ್ರವನ್ನು ನಿರ್ದೇಶಿಸುವ ಜತೆಗೆ ನಟಿಸಲಿದ್ದಾರೆ. ಜತೆಗೆ ಇನ್ನೊಂದಷ್ಟು ಸಿನಿಮಾದ ಭಾಗವಾಗುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ