ಮುಂಬೈ: ಬಾಲಿವುಡ್‌ನ ಮತ್ತೊಂದು ತಾರಾ ಜೋಡಿ ಹಸೆಮಣೆಗೇರಿದೆ. ಕೆಲವು ಸಮಯಗಳಿಂದ ಡೇಟಿಂಗ್ ನಡೆಸುತ್ತಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ನಟ, ನಿರ್ಮಾಪಕ ಜಾಕಿ ಭಗ್ನಾನಿ (Jackky Bhagnani) ಬುಧವಾರ (ಫೆಬ್ರವರಿ 21) ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಸತಿ-ಪತಿಗಳಾದರು. ಮೊದಲು ಸಿಖ್ ಸಂಪ್ರದಾಯ ಆನಂದ್ ಕರಜ್ (Anand Karaj)ನಂತೆ ಈ ಜೋಡಿ ವಿವಾಹವಾದರು. ಸಂಜೆ ಸಿಂಧಿ ಸಂಪ್ರದಾಯದಂತೆ ಮದುವೆ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಗೋವಾದ ಐಟಿಸಿ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು ಮತ್ತು ಆಪ್ತ ಗೆಳೆಯರಿಗಷ್ಟೇ ಆಹ್ವಾನವಿತ್ತು. ಬಾಲಿವುಡ್‌ನ ಶಿಲ್ಪಾ ಶೆಟ್ಟಿ, ಆಯುಷ್ಮಾನ್ ಖುರಾನ, ಅರ್ಜುನ್ ಕಪೂರ್, ಡೇವಿಡ್ ಧವನ್ ಮತ್ತಿತರರು ಹಾಜರಿದ್ದು ನೂತನ ವಧು-ವರರನ್ನು ಹಾರೈಸಿದರು.
ಎರಡು ಸಂಪ್ರದಾಯದಂತೆ ವಿವಾಹ
ಇದಕ್ಕೂ ಮೊದಲು ಜೋಡಿಯ ಆಪ್ತ ಮೂಲಗಳು ಮಾಹಿತಿ ನೀಡಿ, ಎರಡು ಸಂಪ್ರದಾಯದಂತೆ ವಿವಾಹ ನಡೆಯಲಿದೆ ಎಂಬ ಮಾಹಿತಿ ನೀಡಿದ್ದರು. ಆನಂದ್ ಕರಜ್ (ಸಿಖ್) ಮತ್ತು ಸಿಂಧಿ ಶೈಲಿಯಲ್ಲಿ ಸಮಾರಂಭ ಆಯೋಜಿಸಲಾಗಿದೆ. ಇದು ಅವರ ಎರಡೂ ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದರು. ಸದ್ಯ ಈ ಸಮಾರಂಭದ ಯಾವುದೋ ಫೋಟೊ ಹೊರ ಬಿದ್ದಿಲ್ಲ. ಮದುವೆ ಮೊದಲಿನ ಆಚರಣೆ ಫೆಬ್ರವರಿ 19ರಂದೇ ಆರಂಭವಾಗಿದ್ದವು. 2021ರ ಅಕ್ಟೋಬರ್‌ನಲ್ಲಿ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು.
ಸ್ಯಾಂಡಲ್‌ವುಡ್ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ರಾಕುಲ್ ಪ್ರೀತ್
ವಿಶೇಷ ಎಂದರೆ ರಾಕುಲ್ ಪ್ರೀತ್ ಸಿಂಗ್ ಸ್ಯಾಂಡಲ್‌ವುಡ್ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. 2009ರಲ್ಲಿ ತೆರೆಕಂಡ ʼಗಿಲ್ಲಿʼ ಚಿತ್ರದಲ್ಲಿ ಅವರು ಗುರುರಾಜ್ ಜಗ್ಗೇಶ್‌ಗೆ ನಾಯಕಿಯಾಗಿದ್ದರು. ತಮಿಳಿನ ʼ7ಜಿ ರೈನ್‌ಬೋ ಕಾಲನಿʼ ಚಿತ್ರದ ರಿಮೇಕ್ ಆಗಿದ್ದ ʼಗಿಲ್ಲಿʼಯಲ್ಲಿ ಅನಿತಾ ಪಾತ್ರದ ಮೂಲಕ ಮೋಡಿ ಮಾಡಿದ್ದರು. ಬಳಿಕ 3 ವರ್ಷ ಬ್ರೇಕ್ ಪಡೆದುಕೊಂಡಿದ್ದ ರಾಕುಲ್ ಪ್ರೀತ್ 2011ರಲ್ಲಿ ʼಕೆರಾಟನ್ʼ, ʼಯುವನ್ʼ ದ್ವಿಭಾಷಾ ಸಿನಿಮಾ ಮೂಲಕ ತೆಲುಗು ಮತ್ತು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. ಇನ್ನು 2014ರಲ್ಲಿ ಬಿಡುಗಡೆಯಾದ ʼಯಾರಿಯಾನ್ʼ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದರು. ಬಳಿಕ ತಮಿಳು, ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ʼಮೇರಿ ಪತ್ನಿ ಕʼ ರಿಮೇಕ್ ಚಿತ್ರದಲ್ಲಿ ಮತ್ತು ʼಇಂಡಿಯನ್ 2ʼ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಎಸ್.ಶಂಕರ್ ನಿರ್ದೇಶನದ ʼಇಂಡಿಯನ್ 2ʼ ಚಿತ್ರದಲ್ಲಿ ಕಮಲ್ ಹಾಸನ್ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದು, ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: Article 370: ಬಾಲಿವುಡ್ ಚಿತ್ರವನ್ನು ಹಾಡಿ ಹೊಗಳಿದ ಮೋದಿ; ಯಾವ ಸಿನಿಮಾ? ಏನಿದರ ವೈಶಿಷ್ಟ್ಯ?
ಇತ್ತ ನಿರ್ಮಾಪಕರೂ ಆಗಿರುವ ಜಾಕಿ ಭಗ್ನಾನಿ ತಮ್ಮ ನಿರ್ಮಾಣದ ಮುಂದಿನ ಚಿತ್ರ ʼಬಡೇ ಮಿಯಾನ್ ಚೋಟೆ ಮಿಯಾನ್ʼನ ನಿರೀಕ್ಷೆಯಲ್ಲಿದ್ದಾರೆ. ಆಲಿ ಅಬ್ಬಾಸ್ ಝಫರ್ ನಿರ್ದೇಶನದ ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನಾಕ್ಷಿ ಸಿನ್ಹಾ, ಪೃಥ್ವಿರಾಜ್ ಸುಕುಮಾರನ್ ಮತ್ತಿತರರು ಅಭಿನಯಿಸುತ್ತಿದ್ದಾರೆ. ಏಪ್ರಿಲ್ 10ರಂದು ಸಿನಿಮಾ ತೆರೆ ಕಾಣಲಿದೆ. ಸದ್ಯ ಜಾಕಿ ಭಗ್ನಾನಿ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ