ಬೆಂಗಳೂರು: ಟಾಲಿವುಡ್ ನಟ ರಾಮ್‌ಚರಣ್ (Ram Charan) ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿದ್ದಾರೆ.
ಈ ಎರಡು ಸಂಸ್ಥೆಗಳ ಮೂಲಕ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದೆ. ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾಗೆ ಯುವ ನಾಯಕ ಹಾಗೂ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶೀಘ್ರದಲ್ಲಿ ಈ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ. ವಿಭಿನ್ನ ಕಂಟೆಂಟ್ ಪ್ರೇಕ್ಷಕರಿಗೆ ಅರ್ಪಿಸಲು ಈ ಎರಡು ಸಂಸ್ಥೆಗಳು ಕೈ ಜೋಡಿಸಿವೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡವುದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾದ ರಾಮ್‌ಚರಣ್
ರಾಮ್‌ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.