ಹೈದರಾಬಾದ್: ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan) ಹೋಳಿ (Holi) ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ʼಗೇಮ್ ಚೇಂಜರ್ʼ (Game Changer) ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್, ಬುಚ್ಚಿ ಬಾಬು ಜತೆ ಕೈ ಜೋಡಿಸಿದ್ದಾರೆ. ಆರ್‌ಸಿ 16 ಸಿನಿಮಾಗೆ ಬುಚ್ಚಿ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಪ್ರಾಜೆಕ್ಟ್ ಟೇಕಾಫ್‌ಗೂ ಮೊದಲೇ ರಾಮ್ ಚರಣ್ ಅವರ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.
ಮೈತ್ರಿ ಮೂವಿ ಮೇಕರ್ಸ್, ರಾಮ್ ಚರಣ್ ಹಾಗೂ ʼಪುಷ್ಪʼ ನಿರ್ದೇಶಕ ಸುಕುಮಾರ್ ಮತ್ತೆ ಒಂದಾಗಿದ್ದಾರೆ. ʼರಂಗಸ್ಥಳಂʼ ಮೂಲಕ ಧಮಾಕ ಎಬ್ಬಿಸಿದ್ದ ಈ ತ್ರಿವಳಿ ಕಾಂಬೋದಲ್ಲಿ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದೆ. ಬಣ್ಣದ ಹಬ್ಬದ ಸಂದರ್ಭದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.
ಆರ್.ಆರ್.ಆರ್. ಸಿನಿಮಾದ ಭಾರೀ ಯಶಸ್ಸಿನ ಬಳಿಕ ಶಂಕರ್ ಸಾರಥ್ಯದ ʼಗೇಮ್ ಚೇಂಜರ್ʼ ಚಿತ್ರದಲ್ಲಿ ರಾಮ್ ನಟಿಸುತ್ತಿದ್ದಾರೆ. ಜತೆಗೆ ʼಉಪ್ಪೇನಾʼ ನಿರ್ದೇಶಕ ಬುಚ್ಚಿ ಬಾಬುಗೂ ಕಾಲ್ ಶೀಟ್ ಕೊಟ್ಟಿರುವ ಮೆಗಾ ಪ್ರಿನ್ಸ್ ಈಗ ಸುಕುಮಾರ್ ಹೊಸ ಕಥೆಯಲ್ಲಿ ಮಿಂಚಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಹಾಗೂ ಸುಕುಮಾರ್ ರೈಟಿಂಗ್ ಹಣ ಹೂಡುತ್ತಿರುವ ಈ ಸಿನಿಮಾಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಸೂಪರ್ ಹಿಟ್ ಆದ ʼರಂಗಸ್ಥಳಂʼ ಚಿತ್ರಕ್ಕೂ ಸಂಗೀತ ನೀಡಿದ್ದ ದೇವಿಶ್ರೀ ಪ್ರಸಾದ್ ಮತ್ತೆ ಸುಕುಮಾರ್ ಹಾಗೂ ರಾಮ್ ಸಿನಿಮಾ ಮೂಲಕ ಧಮಾಕ ಎಬ್ಬಿಸುವ ಸೂಚನೆ ನೀಡಿದ್ದಾರೆ. ಅಂದ ಹಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಮೂಡಿ ಬರಲಿದೆ. ರಾಮ್ ಚರಣ್ ಅವರ ಈ 17ನೇ ಚಿತ್ರ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ʼಗೇಮ್ ಚೇಂಜರ್ʼ
ಪಾಲಿಟಿಕಲ್ ಥ್ರಿಲ್ಲರ್ ʼಗೇಮ್ ಚೇಂಜರ್ʼ ಸಿನಿಮಾಕ್ಕೆ ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹುಟ್ಟು ಹಾಕಿದೆ. 2019ರಲ್ಲಿ ಬಿಡುಗಡೆಯಾದ ʼವಿನಯ ವಿಧೇಯ ರಾಮʼ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ: Actor Ramcharan: ರಾಮ್ ಚರಣ್ ಮಗುವಿಗಾಗಿ ವಿಶೇಷ ಟ್ಯೂನ್ ಮಾಡಿದ ನಾಟು ನಾಟು ಖ್ಯಾತಿಯ ಕಾಲ ಭೈರವ!
ಈ ಪ್ರಾಜೆಕ್ಟ್ ಅನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ