ಹೈದರಾಬಾದ್: ಟಾಲಿವುಡ್‌ನ ಸಿನಿ ಮಾಂತ್ರಿಕ ಎಸ್.ಎಸ್.ರಾಜಮೌಳಿ (S.S. Rajamouli) ನಿರ್ದೇಶನದ, 2022ರಲ್ಲಿ ತೆರೆಕಂಡ ಆರ್.ಆರ್.ಆರ್. (RRR) ಚಿತ್ರ ಭಾರತೀಯ ಚಲನಚಿತ್ರೋದ್ಯಮದಲ್ಲಿ ದಾಖಲೆ ಬರೆದಿತ್ತು. ಜತೆಗೆ ಆಸ್ಕರ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಗಮನ ಸೆಳೆದಿತ್ತು. 1,387 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿತ್ತು. ಇದರಲ್ಲಿ ನಾಯಕರಾಗಿ ಜೂನಿಯರ್ ಎನ್‌ಟಿಆರ್ (N.T. Rama Rao Jr.) ಮತ್ತು ರಾಮ್ ಚರಣ್ (Ram Charan) ಮೋಡಿ ಮಾಡಿದ್ದರು. ವಿಶೇಷ ಎಂದರೆ ಚಿತ್ರದಲ್ಲಿ ಈ ಇಬ್ಬರು ನಾಯಕರಿಗೂ ಸಮಾನ ಅವಕಾಶ ಲಭಿಸಿತ್ತು. ಜತೆಗೆ ಇಬ್ಬರೂ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಹಿಂದೆ 2009ರಲ್ಲಿ ತೆರೆಕಂಡ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾದಲ್ಲಿ ಮೋಡಿ ಮಾಡಿದ್ದ ರಾಮ್ ಚರಣ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಮೆಗಾ ಪ್ರಿನ್ಸ್ ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಹುಟ್ಟುಹಬ್ಬದ ಸಂಭ್ರಮ. ಈ ಈ ಹಿನ್ನೆಲೆಯಲ್ಲಿ ಅವರು ಅಭಿನಯಿಸಿರುವ ಟಾಪ್ 5 ಚಿತ್ರಗಳ ಕಿರು ಪರಿಚಯ ಇಲ್ಲಿದೆ.
ಆರ್.ಆರ್.ಆರ್. (RRR)
ರೌದ್ರಮ್ ರಣಂ ರುಧಿರಂನ ಸಂಕ್ಷಿಪ್ತ ರೂಪವೇ ʼಆರ್.ಆರ್.ಆರ್.ʼ ರಾಜಮೌಳಿ ನಿರ್ದೇಸನದ ಈ ಚಿತ್ರ ಬರೋಬ್ಬರಿ 550 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಡಿ.ವಿ.ವಿ.ದಾನಯ್ಯ ನಿರ್ಮಾಣದ ಈ ಚಿತ್ರ ಅದುವರೆಗಿನ ಅತಿ ಹೆಚ್ಚು ಬಜೆಟ್‌ನ ಭಾರತೀಯ ಚಿತ್ರ ಎನಿಸಿಕೊಂಡಿತ್ತು. ಸ್ವಾತಂತ್ರ್ಯ ಪೂರ್ವ ಕಾಲಘಟ್ಟದ ಕಥೆ ಹೇಳಿದ್ದ ಈ ಚಿತ್ರದಲ್ಲಿ ಸ್ನೇಹಿತರ ಪಾತ್ರದಲ್ಲಿ ಜೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಕಾಣಿಸಿಕೊಂಡಿದ್ದರು. ಅಲ್ಲುರಿ ಸೀತಾರಾಮ ರಾಜುವಾಗಿ ರಾಮ್ ಚರಣ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಅದರಲ್ಲೂ ʼನಾಟು ನಾಟುʼ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಮುಂದೆ ಈ ಹಾಡಿಗೆ ಮಹೋನ್ನತ ಆಸ್ಕರ್ ಪ್ರಶಸ್ತಿಯೂ ಲಭಿಸಿತು. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನದ ಈ ಸಿನಿಮಾದಲ್ಲಿ ಅಜಯ್ ದೇವಗನ್, ಆಲಿಯಾ ಭಟ್, ಶ್ರೀಯಾ ಸರಣ್, ಸಮುದ್ರ ಖನಿ, ಅಲಿಸನ್ ಡೂಡಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.
ಮಗಧೀರ (Magadheera)
ರಾಮ್ ಚರಣ್-ರಾಜಮೌಳಿ ಕಾಂಬಿನೇಷನ್‌ನ ಮತ್ತೊಂದು ಸೂಪರ್ ಹಿಟ್ ಚಿತ್ರ ʼಮಗಧೀರʼ 2009ರಲ್ಲಿ ತೆರೆ ಕಂಡಿತ್ತು. 40 ಕೋಟಿ ರೂ. ಬಜೆಟ್‌ನ ಈ ಚಿತ್ರ ಆ ಕಾಲದಲ್ಲಿಯೇ 100 ಕೋಟಿ ರೂ. ಗಳಿಸಿತ್ತು. ಪುನರ್ಜನ್ಮದ ಕಥೆ ಹೇಳುವ ಈ ಚಿತ್ರದಲ್ಲಿ ರಾಮ್ ಚರಣ್ ಅವರು ಹರ್ಷ ಮತ್ತು ಕಾಲ ಭೈರವನಾಗಿ ಮಿಂಚಿದ್ದರು. ನಾಯಕಿಯಾಗಿ ಕಾಜಲ್ ಅಗರ್ವಾಲ್ ಕೂಡ ಗಮನ ಸೆಳೆದಿದ್ದರು. ದೇವ್ ಗಿಲ್, ಶ್ರೀಹರಿ, ಸುನಿಲ್, ಸೂರ್ಯ, ರಾವ್ ರಮೇಶ್ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ರಂಗಸ್ಥಳಂ (Rangasthalam)
ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಪಕ್ಕಾ ಕಮರ್ಷಿಯಲ್ ಚಿತ್ರ ಇದು. 2018ರಲ್ಲಿ ಬಿಡುಗಡೆಯಾದ ಈ ಸಿನಿಮಾ 60 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ 216 ಕೋಟಿ ರೂ. ಗಳಿಸುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿತ್ತು. 1980ರ ದಶಕದಲ್ಲಿ ರಂಗಸ್ಥಳಂ ಎನ್ನುವ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೇಳಿತ್ತು. ಪಕ್ಕಾ ಹಳ್ಳಿ ಯುವಕನ ಅವತಾರದಲ್ಲಿ ರಾಮ್ ಚರಣ್ ಗಮನ ಸೆಳೆದಿದ್ದರು. ನಾಯಕಿಯಾಗಿ ಸಮಂತಾ ನಟಿಸಿದ್ದರು.
ಯೆವಡು (Yevadu)
2014ರಲ್ಲಿ ಬಿಡುಗಡೆಯಾದ ಆ್ಯಕ್ಷನ್ ಥ್ರಿಲ್ಲರ್ ʼಯೆವಡುʼ ಆ ವರ್ಷದ ಅತೀ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪೈಕಿ ಒಂದು ಎನಿಸಿಕೊಂಡಿತ್ತು. ವಂಶಿ ಪೈಡಿಪಳ್ಳಿ ನಿರ್ದೇಶನದ ಈ ಚಿತ್ರದಲ್ಲಿ ರಾಮ್ ಚರಣ್ ಜತೆಗೆ ಅಲ್ಲು ಅರ್ಜುನ್, ಶ್ರುತಿ ಹಾಸನ್, ಆ್ಯಮಿ ಜಾಕ್ಸನ್, ಕಾಜಲ್ ಅಗರ್ವಾಲ್ ಮತ್ತಿತರರು ನಟಿಸಿದ್ದರು. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 60 ಕೋಟಿ ರೂ.ಗಿಂತ ಅಧಿಕ ಬಾಚಿಕೊಂಡಿತ್ತು.
ಧ್ರುವ (Dhruva)
2016ರಲ್ಲಿ ರಿಲೀಸ್ ಆದ ʼಧ್ರುವʼ ಚಿತ್ರ ಕೂಟ ರಾಮ್ ಚರಣ್ ಅವರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಸುರೇಂದ್ರ ರೆಡ್ಡಿ ನಿರ್ದೇಶನದ ಈ ಸಿನಿಮಾ ತಮಿಳಿನ ಸೂಪರ್ ಹಿಟ್ ಚಿತ್ರ ʼತನಿ ಒರುವನ್ʼನ ರಿಮೇಕ್. ಮೂಲ ಚಿತ್ರದಲ್ಲಿ ಜಯಂ ರವಿ, ನಯನತಾರಾ, ಅರವಿಂದ ಸ್ವಾಮಿ ನಟಿಸಿದ್ದರು. ಇಲ್ಲೂ ವಿಲನ್ ಪಾತ್ರದಲ್ಲಿ ಅರವಿಂದ ಸ್ವಾಮಿ ಕಾಣಿಸಿಕೊಂಡಿದ್ದರು. ರಾಮ್ ಚರಣ್‌ಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಅಭಿನಯಿಸಿದ್ದರು. 50 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ʼಧ್ರುವʼ ಗಳಿಸಿದ್ದು ಬರೋಬ್ಬರಿ 132 ಕೋಟಿ ರೂ. ರಾಮ್ ಚರಣ್ ಅವರ ಎಎಸ್‌ಪಿ ಕೆ.ಧ್ರುವ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಇದನ್ನೂ ಓದಿ: Ram Charan: ‘ಗೇಮ್ ಚೇಂಜರ್’ ರಾಮ್ ಚರಣ್ ಲುಕ್ ಲೀಕ್!