ಬೆಂಗಳೂರು: ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಜಪ ಜೋರಾಗಿದೆ. ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ. ಈಗಾಗಲೇ ಮಂದಿರದಲ್ಲಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗಿದೆ. ಚಿತ್ರರಂಗದವರು, ಕ್ರಿಕೆಟ್ ದಿಗ್ಗಜರು, ರಾಜಕಾರಣಿಗಳು ಸೇರಿ ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಈ ವಿಶೇಷ ದಿನದಂದು ಧ್ರುವ ಸರ್ಜಾ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ.
ಆಂಜನೇಯ ಶ್ರೀರಾಮನ ಪರಮ ಭಕ್ತರಾಗಿರುವ ಧ್ರುವ ಸರ್ಜಾ ಅವರು ತಮ್ಮ ಮಕ್ಕಳಿಗೆ ರಾಮಾಯಣ ಮಹಾಭಾರತದಲ್ಲಿ ಬರುವ ಪಾತ್ರಗಳ ಹೆಸರನ್ನೇ ಅವರು ಇಡಲಿದ್ದಾರೆ ಎಂದು ತಿಳಿದು ಬಂದಿದೆ. ಚಿರು ಸರ್ಜಾ ಸಮಾಧಿ ಇರುವ ನೆಲಗುಳಿಯಲ್ಲಿ ಮಕ್ಕಳ ನಾಮಕರಣ ಶಾಸ್ತ್ರ ನಡೆಯಲಿದೆ. 2022ರ ಅಕ್ಟೋಬರ್ 2ರಂದು ಮಗಳ ಜನನ ಆಗಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಗಂಡು ಮಗು ಜನಿಸಿತ್ತು. ಈ ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬ ಭಾಗಿ ಆಗಲಿದೆ.
ಇದನ್ನೂ ಓದಿ: Ram Mandir: 84 ಸೆಕೆಂಡ್‌ಗಳಲ್ಲೇ ಮುಗಿಯಲಿದೆ ಪ್ರಾಣಪ್ರತಿಷ್ಠೆ; ಏನಿದು ಶುಭ ಮುಹೂರ್ತ?
ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದಿದ್ದ ಧ್ರುವ ಸರ್ಜಾ!
ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಬಳಿಕ, ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಮೇಲೆ ದೇಶದ ಪ್ರತಿಯೊಂದು ಮನೆಯಲ್ಲಿ ರಾಮಜ್ಯೋತಿ ಬೆಳಗಲಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದರು. ಈ ಬಗ್ಗೆ ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದರು.
ʻʻಮರ್ಯಾದಾ ಪುರೋಷೋತ್ತಮ ರಾಮ, ನಮ್ಮೆಲ್ಲರಿಗೂ ಆದರ್ಶಪುರುಷ; ಕೋಟ್ಯಂತರ ಭಕ್ತರು ಕಾತರದಿಂದ ಎದುರು ನೋಡುತ್ತಿರೋ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಇದೇ ಜನವರಿ 22ರಂದು ನಡೆಯಲಿದೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಮನಗಳಲ್ಲಿ ಜ್ಯೋತಿ ಬೆಳಗಿಸೋ ಮೂಲಕ ರಾಮನ ಕೃಪೆಗೆ ಪಾತ್ರರಾಗೋಣ. ಜೈ ಆಂಜನೇಯʼʼ ಎಂದು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.