Site icon Vistara News

Ramana Avatara: ʼರಾಮನ ಅವತಾರʼಕ್ಕೆ ಬಂತು ಸಮಸ್ಯೆ; ಸೆನ್ಸಾರ್‌ ಪ್ರಮಾಣಪತ್ರ ರದ್ದು ಮಾಡಿ ಎಂದು ಮನವಿ

#image_title

ಬೆಂಗಳೂರು: ಆಪರೇಷನ್‌ ಅಲಮೇಲಮ್ಮ ಸಿನಿಮಾ ಖ್ಯಾತಿಯ ನಟ ರಿಷಿ ನಟಿಸಿರುವ ರಾಮನ ಅವತಾರ (Ramana Avatara) ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಹಿಂದುಗಳು ಪೂಜಿಸುವ ರಾಮನ ಚಾರಿತ್ರ್ಯಕ್ಕೆ ಕಳಂಕ ಬರುವಂತಹ ದೃಶ್ಯಗಳಿವೆ ಎಂದು ಹಿಂದು ಜನಜಾಗೃತಿ ಸಮಿತಿ ದೂರಿದೆ. ಅದೇ ಹಿನ್ನೆಲೆಯಲ್ಲಿ ಸಮಿತಿಯು ಸೆನ್ಸಾರ್‌ ಮಂಡಳಿಯವರೆಗೂ ತಲುಪಿದ್ದು, ಸಿನಿಮಾಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಬಾರದು ಎಂದು ಮನವಿ ಮಾಡಿದೆ.

‘ರಾಮನ ಅವತಾರ’ ಸಿನಿಮಾ ವಿನಯ ಪಂಪಾಪತಿ, ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾವಾಗಿದೆ. ಇದರಲ್ಲಿ ರಾವಣನ ವಾಹನ ಪುಷ್ಪಕ ವಿಮಾನವನ್ನು i20 ಕಾರು ಎಂದು ಲೇವಡಿ ಮಾಡಲಾಗಿದೆ. ಸೀತಾಮಾತೆ, ಭಗವಾನ್ ಶ್ರೀಕೃಷ್ಣ ಪರಮಾತ್ಮ ಹೀಗೆ ಅನೇಕ ರಾಮಾಯಣ, ಮಹಾಭಾರತದ ಪಾತ್ರಗಳನ್ನು ಸನ್ನಿವೇಶಗಳನ್ನು ಅಪಹಾಸ್ಯ ಮಾಡಲಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿ ದೂರಿದೆ. ಈ ರೀತಿ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರವನ್ನು ರದ್ದು ಮಾಡಬೇಕೆಂದು ಆಗ್ರಹಿಸಲಾಗಿದೆ.

ಹಿಂದು ಜನಜಾಗೃತಿ ಸಮಿತಿಯ ಮೋಹನ್ ಗೌಡ, ಸಾಮಾಜಿಕ ಹೋರಾಟಗಾರ ರಂಗನಾಥ್, ವಿಶ್ವ ಹಿಂದು ಪರಿಷತ್ ತಿರುಪತಿ ಬಾಬು, ಸಂತೋಷ್ ಕಡ್ತಳ, ರಮ್ಯಾ ಕಡ್ತಳ, ಪ್ರಶಾಂತ್ ಶಾನಭಾಗ್, ರಂಜಿತ್ ಬಿ.ಆರ್, ಪಾಲಾಕ್ಷ ಬಿ, ಹರ್ಷ ಮತ್ತಿತರ ಹಿಂದೂ ಕಾರ್ಯಕರ್ತರು ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದ್ದಾರೆ.

ಇದನ್ನೂ ಓದಿ: Ramana Avatara Movie : ‘ರಾಮನ ಅವತಾರ’ ಹೊತ್ತ ರಿಷಿ; ನಗುವಿನ ಕಚಗುಳಿ ಇಡುವ ಟೀಸರ್‌ ಬಿಡುಗಡೆ

ಈ ಬಗ್ಗೆ ಮೋಹನ್ ಗೌಡ ಮಾತನಾಡಿ, “ಇಂದು ಕೇವಲ ಭಾರತದಲ್ಲಷ್ಟೇ ಅಲ್ಲದೆ ನಾನಾ ದೇಶಗಳಲ್ಲಿ ಪ್ರಭು ಶ್ರೀರಾಮನನ್ನು ಅವರ ಗುಣಗಳಿಗೆ ಪೂಜಿಸಲಾಗುತ್ತದೆ. ಅಂತಹುದರಲ್ಲಿ ಈ ಚಿತ್ರದಲ್ಲಿ ರಾಮನ ಅವತಾರ ರಘುಕುಲ ಸೋಮನ ಅವತಾರ ಎಂದು ಉಲ್ಲೇಖಿಸಿ ಚಿತ್ರದ ನಾಯಕ ಮದ್ಯ ಸೇವಿಸುವುದು, ದುಶ್ಚಟಗಳಿಗೆ ದಾಸನಾಗಿರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲದೇ ರಾಮನ ವೇಷವನ್ನು ನಾಯಕನಿಗೆ ತೊಡಿಸಿ ಪೋಲಿಸರು ರಾಮನನ್ನು ಅಟ್ಟಾಡಿಸುವಂತೆ ಮತ್ತು ಹೊಡೆಯುವಂತೆ ತೋರಿಸಲಾಗಿದೆ. ಕೀಳುಮಟ್ಟದ ಸಿನಿಮಾ ಪ್ರಚಾರಕ್ಕಾಗಿ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಲಾಗಿದೆ. ಇದು ಭಾರತೀಯ ದಂಡ ಸಂಹಿತೆ 295, 298 ಮತ್ತು 295 ಎ ಪ್ರಕಾರ ಗಂಭೀರ ಅಪರಾಧವಾಗಿದೆ. ಅದಲ್ಲದೆ ಸಿನಿಮಾಟೋಗ್ರಾಫ್ ಆ್ಯಕ್ಟ್ 1952 ನ ಕಲಂ 5B ಪ್ರಕಾರ ಇದು ಸೆನ್ಸಾರ್ ಮಂಡಳಿ ನಿಯಮದ ಉಲ್ಲಂಘನೆಯಾಗಿದೆ. ಹಾಗಾಗಿ ಈ ಸಿನಿಮಾದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಈ ಸಿನಿಮಾದ ಸೆನ್ಸಾರ್ ಪ್ರಮಾಣಪತ್ರವನ್ನು ಕೂಡಲೇ ರದ್ದು ಮಾಡಬೇಕು” ಎಂದು ಹೇಳಿದ್ದಾರೆ.

Exit mobile version