ಮುಂಬೈ: ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಬಾಲಿವುಡ್‌ನ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದು. ಪ್ರತಿ ಬಾರಿ ಈ ಜೋಡಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಏನಾದರೂ ಒಂದು ಸುದ್ದಿಯಲ್ಲಿ ಇರುತ್ತಾರೆ. ಏಪ್ರಿಲ್ 21ರಂದು ಖ್ಯಾತ ನಿರ್ದೇಶಕ, ನಿರ್ಮಾಪಕ ಯಶ್ ಚೋಪ್ರಾ ಅವರ ಪತ್ನಿ ಪಮೇಲಾ ಚೋಪ್ರಾ ನಿಧನದ ನಂತರ ಸಂತಾಪ ಸೂಚಿಸಲು ಆದಿತ್ಯ ಚೋಪ್ರಾ ಅವರ ನಿವಾಸಕ್ಕೆ ಭೇಟಿ ನೀಡಿದಾಗ ಈ ಜೋಡಿ ಗಮನ ಸೆಳೆದಿದೆ. ಮನೆ ಪ್ರವೇಶಿಸುವ ಮುನ್ನ ಆಲಿಯಾ ಚಪ್ಪಲಿ ಬಿಟ್ಟು ಹೋಗಿದ್ದರು. ರಣಬೀರ್ ಸ್ವತಃ ಆಲಿಯಾ ಅವರ ಚಪ್ಪಲಿಗಳನ್ನು ಕೈಯಲ್ಲಿ ಎತ್ತಿಕೊಂಡು ಪಕ್ಕಕ್ಕೆ ಇಟ್ಟು ಒಳಹೋದರು. ಇದೀಗ ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಬೆಸ್ಟ್ ಹಸ್ಬೆಂಡ್ʼ ಎನ್ನುವ ಟೈಟಲ್ ಕೂಡ ಪಡೆದಿದ್ದಾರೆ ರಣಬೀರ್.
ವೈರಲ್ ಆಗಿರುವ ವಿಡಿಯೊದಲ್ಲಿ, ಆಲಿಯಾ ಭಟ್ ಅವರು ಆದಿತ್ಯ ಚೋಪ್ರಾ ಅವರ ಮನೆಗೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ. ಮನೆ ಪ್ರವೇಶಿಸುವ ಮುನ್ನ ಚಪ್ಪಲಿ ತೆಗೆದು ಒಳ ಹೋಗುತ್ತಾರೆ. ಆಲಿಯಾರನ್ನು ಪತಿ ರಣಬೀರ್ ಹಿಂಬಾಲಿಸಿ, ತಮ್ಮ ಬೂಟುಗಳನ್ನು ತೆಗೆದಿದ್ದಲ್ಲದೆ ಆಲಿಯಾರ ಚಪ್ಪಲಿಗಳನ್ನು ಕೈಯಲ್ಲಿ ಎತ್ತಿಕೊಂಡು ಪಕ್ಕಕ್ಕೆ ಇಟ್ಟು ಒಳ ಹೋಗುತ್ತಾರೆ. ರಣಬೀರ್ ಅವರ ಕಾಳಜಿಯುಳ್ಳ ನಡವಳಿಕೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಈ ನಡೆ ಅಭಿಮಾನಿಗಳ ಹೃದಯಗಳನ್ನು ಗೆಲ್ಲುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಗಳಲ್ಲಿ ಒಬ್ಬರು ಅವರನ್ನು ‘ಅತ್ಯುತ್ತಮ ಪತಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು “ಭಾರತದಲ್ಲಿಯ ಅತ್ಯುತ್ತಮ ದಂಪತಿ” ಎಂದು ಪ್ರತಿಕ್ರಿಯಿಸಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಕಳೆದ ವರ್ಷ ಏಪ್ರಿಲ್ 14ರಂದು ವಿವಾಹವಾಗಿದ್ದರು. ಖಾಸಗಿ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದರು. ಈ ತಿಂಗಳ ಆರಂಭದಲ್ಲಿ, ಸಂದೀಪ್ ರೆಡ್ಡಿ ವಂಗಾ ಅವರ ʻಅನಿಮಲ್ʼ ಸಿನಿಮಾಗಾಗಿ ಲಂಡನ್‌ನಲ್ಲಿ ಶೂಟಿಂಗ್‌ನಲ್ಲಿರುವ ರಣಬೀರ್, ತಮ್ಮ ಮೊದಲ ವಾರ್ಷಿಕೋತ್ಸವವನ್ನು ಪತ್ನಿ ಆಲಿಯಾ ಅವರೊಂದಿಗೆ ಕಳೆಯಲು ಮುಂಬೈಗೆ ಹಾರಿದ್ದರು.
ಇದನ್ನೂ ಓದಿ: Alia Bhatt – Ranbir Kapoor : ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಅಲಿಯಾ-ರಣಬೀರ್
ವೈರಲ್ ವಿಡಿಯೊ
ದಂಪತಿ ಕಳೆದ ವರ್ಷ ಅಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ ಭಾಗ ಒಂದರಲ್ಲಿ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಚಿತ್ರದ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಣಬೀರ್ ಮತ್ತು ಆಲಿಯಾ ಅವರು ಕಾಫಿ ವಿತ್ ಕರಣ್ ಶೋಗೆ ಜತೆಯಾಗಿ ಬರುವ ನಿರೀಕ್ಷೆಯಿದೆ ಎಂದು ಇತ್ತೀಚೆಗೆ ವರದಿಯಾಗಿದೆ.