ಮುಂಬೈ: ರಣದೀಪ್ ಹೂಡಾ (Randeep Hooda) ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರು. ಅವರು ತಮ್ಮ ಮುಂಬರುವ ‘ಸ್ವಾತಂತ್ರ್ಯ ವೀರ ಸಾವರ್ಕರ್’ (Swatantrya Veer Savarkar) ಚಿತ್ರದಲ್ಲಿನ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ (Vinayak Damodar Savarkar) ಪಾತ್ರಕ್ಕಾಗಿ ಬರೋಬ್ಬರಿ 30 ಕೆಜಿ ತೂಕ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಯಲ್ಲಿ ರಣದೀಪ್ ಹೂಡಾ ಈ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ತಮ್ಮ ನೆಚ್ಚಿನ ನಟನ ಬದ್ಧತೆ, ಬದಲಾವಣೆಯನ್ನು ಬೆರಗುಗಣ್ಣಿನಿಂದ ನೋಡಿದ್ದಾರೆ. ಸದ್ಯ ಈ ಫೋಟೊ ವೈರಲ್ ಆಗಿದೆ.
ಕಟ್ಟುಮಸ್ತಾದ ಶರೀರ ಹೊಂದಿದ್ದ ರಣದೀಪ್ ಹೂಡಾ ಅವರು ಸಾವರ್ಕರ್ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತೆಳ್ಳಗಾಗಿದ್ದಾರೆ. ಎದೆಗೂಡಿನ ಮೂಳೆಗಳು ಕಾಣುವ ರೀತಿಯಲ್ಲಿ ಫೋಸ್ ನೀಡಿದ್ದಾರೆ. ಕನ್ನಡಿ ಮುಂದೆ ನಿಂತಿರುವ ಈ ಫೋಟೊವನ್ನು ಹಂಚಿಕೊಂಡಿರುವ ಅವರು ಇದಕ್ಕೆ ʼಕಾಲಾ ಪಾನಿʼ ಎಂಬ ಕ್ಯಾಪ್ಶನ್ ನೀಡಿದ್ದಾರೆ. ಇತ್ತೀಚೆಗಷ್ಟೇ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಈ ಚಿತ್ರದ ಬಗ್ಗೆ ಮಾಹಿತಿ ನೀಡಿ, ʼʼಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿದ್ದಾಗ ಸಾವರ್ಕರ್ ಇದ್ದಂತೆ ಕಾಣಲು ರಣದೀಪ್ ಹೂಡಾ ಅವರು 30 ಕೆಜಿ ತೂಕವನ್ನು ಕಳೆದುಕೊಂಡಿದ್ದರುʼʼ ಎಂದು ಹೇಳಿದ್ದರು. ಜತೆಗೆ ಪಾತ್ರದ ಬಗ್ಗೆ ರಣದೀಪ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದರು.
ಫೋಟೊ ನೋಡಿದ ಅಭಿಮಾನಿಗಳು ರಣದೀಪ್ ಅವರ ಬಾಡಿ ಟ್ರಾನ್ಸ್ಫಾರ್ಮೇಷನ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಈ ಫೋಟೊ ನೋಡಿ ರೋಮಾಂಚವಾಯಿತು. ಈ ಸಿನಿಮಾ ನೋಡಿವಾಗ ಖಚಿತವಾಗಿ ಪ್ರೇಕ್ಷಕ್ ಕಣ್ಣು ತುಂಬಿ ಬರಲಿದೆʼʼ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ನಟನೆಯ ಜತೆಗೆ ನಿರ್ದೇಶನ
ವಿಶೇಷ ಎಂದರೆ ‘ಸ್ವಾತಂತ್ರ್ಯ ವೀರ ಸಾವರ್ಕರ್’ ಚಿತ್ರದಲ್ಲಿ ರಣದೀಪ್ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮಾರ್ಚ್ 22ರಂದು ಈ ಸಿನಿಮಾ ತೆರೆ ಕಾಣಲಿದೆ. ಹಿಂದಿ ಮಾತ್ರವಲ್ಲದೇ ಮರಾಠಿಯಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಲಿದೆ. ಕಲಾವಿದರ ಅಂಕಿತಾ ಲೋಖಂಡೆ, ಅಮಿತ್ ಸಿಯಾಲ್, ರಾಕೇಶ್ ಚತುರ್ವೇದಿ, ಲೋಕೇಶ್ ಮಿತ್ತಲ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಮಹಾತ್ಮ ಗಾಂಧಿ, ಬಾಲ ಗಂಗಾಧರ್ ತಿಲಕ್, ಡಾ.ಬಿ.ಆರ್. ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಜವಹರ್ ಲಾಲ್ ನೆಹರೂ, ಭಗತ್ ಸಿಂಗ್ ಸೇರಿದಂತೆ ಹಲವು ನೈಜ ಪಾತ್ರಗಳು ‘ಸ್ವಾತಂತ್ರ್ಯ ವೀರ ಸಾವರ್ಕರ್’ ಸಿನಿಮಾದಲ್ಲಿವೆ. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆದಿತ್ತು.
ಹಿಂದೊಮ್ಮೆ 2016ರಲ್ಲಿ ಬಿಡುಗಡೆಯಾದ ʼಸರಬ್ಜಿತ್ʼ ಬಾಲಿವುಡ್ ಚಿತ್ರಕ್ಕಾಗಿ ರಣದೀಪ್ ಹೂಡಾ ಗುರುತೇ ಸಿಗದಂತೆ ಬದಲಾಗಿದ್ದರು. ಆಗಲೂ ಅವರ ಬಾಡಿ ಟ್ರಾನ್ಸ್ಫಾರ್ಮೇಷನ್ ಅಭಿಮಾನಿಗಳ ಗಮನ ಸೆಳೆದಿತ್ತು. ಈ ಚಿತ್ರದಲ್ಲಿನ ಪಾತ್ರಕ್ಕೆ ಅಪಾರ ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಇದನ್ನೂ ಓದಿ: Randeep Hooda: ಮಣಿಪುರದ ಮೈತಿ ಪದ್ಧತಿಯಂತೆ ವಿವಾಹವಾದ ಸ್ಟಾರ್ ನಟ; ಏನಿದರ ವಿಶೇಷ?
ಈ ಮಧ್ಯೆ ರಣದೀಪ್ ಹೂಡಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿ ಅವರಿಗೆ ಟಿಕೆಟ್ ನೀಡಲಿದೆ. ಹರಿಯಾಣದ ರೋಹ್ಟಕ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ರಣದೀಪ್ ಹೂಡಾ ಅವರು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.