ಬೆಂಗಳೂರು : ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಅವರ ಸಹೋದರ ನಟ ನಿರೂಪ್ ಭಂಡಾರಿ ನಟನೆಯ ರಂಗಿತರಂಗ (Rangi Taranga Movie) ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿತ್ತು. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿದ್ದ ಈ ಚಿತ್ರ ಗೆದ್ದ ಪರಿ ಕಂಡು ಇಡೀ ಸ್ಯಾಂಡಲ್‌ವುಡ್ ಸಂತಸ ವ್ಯಕ್ತ ಪಡಿಸಿತ್ತು.
ನಿರ್ದೇಶಕ ಅನೂಪ್ ಭಂಡಾರಿ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಅವರ ಸಹೋದರ ನಿರೂಪ್ ಭಂಡಾರಿ ಹೀರೋ ಆಗಿ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿಗೆ ಕೂಡ ಇದು ಮೊದಲ ಸಿನಿಮಾವಾಗಿತ್ತು. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಯಶಸ್ವಿಯಾಗಿದ್ದರು. ರಂಗಿತರಂಗ ಬಿಡುಗಡೆಯಾಗಿ ಏಳು ವರ್ಷಗಳಾಗಿವೆ, ಈ ಹೊತ್ತಿನಲ್ಲಿ ಚಿತ್ರತಂಡ ಚಿತ್ರದ ಯಶಸ್ಸಿನ ನೆನಪುಗಳನ್ನು ಮತ್ತೆ ಮೆಲಕು ಹಾಕಿದೆ.
ಇದನ್ನೂ ಓದಿ | Window Seat Trailer: ಭೂಮಿನೂ ರೌಂಡು, ಕಾಲಾನೂ ರೌಂಡು, ಎಲ್ಲೇ ಸುತ್ತಿದ್ರೂ ಇನ್ನೆಲ್ಲಿಗೆ ಬರ್ಬೇಕು?!
ಈ ನಡುವೆ ರಂಗಿತರಂಗ ಹಿಂದಿಗೆ ರಿಮೇಕ್ ಆಗಲಿದೆ ಎಂಬ ವದಂದತಿ ಸ್ಯಾಂಡಲ್‌ವುಡ್‌ನಲ್ಲಿ ಹರಡಿದ್ದು, ಬಿ- ಟೌನ್ ಸ್ಟಾರ್ ನಟರೊಬ್ಬರು ರಂಗಿತರಂಗ ರಿಮೇಕ್‌ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಕಿಲಾಡಿ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿಗಳೂ ಇವೆ. ಆದರೆ ಚಿತ್ರ ತಂಡ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
2015 ಜುಲೈ 3 ರಂದು ರಂಗಿತರಂಗ ರಾಜ್ಯದಾದ್ಯಂತ ತೆರೆ ಕಂಡಿತ್ತು. ಆ ಬಳಿಕ ವಿದೇಶಗಳಲ್ಲೂ ಈ ಚಿತ್ರದ ಅಬ್ಬರ ಜೋರಾಗಿತ್ತು. ಅಜನೀಶ್ ಸಂಗೀತದ ಕಂಪು ಇರುವ ಈ ಚಿತ್ರ ಈಗ ಏಳು ವರ್ಷಗಳ ನಂತರ ಬಾಲಿವುಡ್ ಅಂಗಳದಲ್ಲೂ ರಂಗು ಮೂಡಿಸಲಿದೆ ಎನ್ನುವ ವದಂತಿಯಂತೂ ಬಲವಾಗಿದೆ. ಸದ್ಯಕ್ಕೆ ಅನೂಪ್ ಭಂಡಾರಿ ತಮ್ಮ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದಾದ ಬಳಿಕ ಕಿಚ್ಚ ಸುದೀಪ್ ಮತ್ತು ಅನೂಪ್ ಜತೆಯಾಗಿ ʻಬಿಲ್ಲರಂಗ ಭಾಷಾʼ ಸಿನಿಮಾ ಮಾಡಲಿದ್ದಾರೆ. ಹೀಗಿರುವಾಗ ರಂಗಿತರಂಗದ ಹಿಂದಿ ಸಿನಿಮಾವನ್ನು ಯಾವಾಗ ಕೈಗೆತ್ತಿಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ | Vikrant Rona Film: ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ ನಟ ಸಲ್ಮಾನ್ ಖಾನ್