ಮುಂಬೈ: ಬೆತ್ತಲೆಯಾಗಿ ನಿಂತು, ವಿವಿಧ ಬಗೆಯಲ್ಲಿ ಕ್ಯಾಮೆರಾಗೆ ಪೋಸ್ (Nude Photoshoot) ನೀಡಿ ವಿವಾದಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆತ್ತಲೆ ಫೋಟೊಶೂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೨ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ಕಳೆದ ತಿಂಗಳು ಮ್ಯಾಗಜಿನ್‌ವೊಂದಕ್ಕೆ ನಡೆಸಿದ ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದ ರಣವೀರ್ ಸಿಂಗ್ ಅವರ ಹಲವು ಬಗೆಯ ಬೆತ್ತಲೆ ಫೋಟೊಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮೊದಲು ಮ್ಯಾಗಜಿನ್ ತಂಡವು ನಟನ ಫೋಟೊಗಳನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡಿತ್ತು. ಇದಾದ ಬಳಿಕ ರಣವೀರ್ ಸಿಂಗ್ ಅವರೂ ಪೋಸ್ಟ್ ಮಾಡಿದ್ದರು.
ಬೆತ್ತಲೆ ಫೋಟೊಗಳ ಕುರಿತು ದೇಶಾದ್ಯಂತ ಟೀಕೆಗಳು ವ್ಯಕ್ತವಾಗಿದ್ದಲ್ಲದೆ, ಒಂದು ಎನ್‌ಜಿಒ ಹಾಗೂ ಮತ್ತೊಬ್ಬ ವ್ಯಕ್ತಿಯು ರಣವೀರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. “ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದರಿಂದ ಮಹಿಳೆಯರ ಭಾವನೆಗಳಿಗೆ, ಅವರ ಗೌರವಕ್ಕೆ ಧಕ್ಕೆಯಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ರಣವೀರ್ ಸಿಂಗ್ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ನೀಡಲು ಮುಂಬೈನಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದು, ನಟ ಮನೆಯಲ್ಲಿಲ್ಲ, ಆಗಸ್ಟ್ ೧೬ರಂದು ಆಗಮಿಸುತ್ತಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಮುಂಬೈ ಪೊಲೀಸರು ಆ.೧೬ರಂದು ಅವರಿಗೆ ನೋಟಿಸ್ ನೀಡಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ವೈವಿಧ್ಯಮಯ ಉಡುಪು ಧರಿಸಿ ಸುದ್ದಿಯಾಗುತ್ತಿದ್ದ ರಣವೀರ್ ಸಿಂಗ್ ಈಗ ಬೆತ್ತಲೆಯಾಗಿ ಪೋಸ್ ನೀಡಿದ್ದಕ್ಕೆ ಸಂಕಷ್ಟ ಎದುರಿಸುವಂತಾಗಿದೆ.
ಇದನ್ನೂ ಓದಿ | ರಣವೀರ್ ಸಿಂಗ್ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?