ಚೆನ್ನೈ: ನಟಿ ರಶ್ಮಿಕಾ ಮಂದಣ್ಣ ತುಸು ವಿಶೇಷವಾಗಿ ಬಕ್ರೀದ್ ಹಬ್ಬದ ಶುಭಾಶಯ ಕೋರಿದ್ದಾರೆ. ಅವರು ಕೆಂಪು ಬಣ್ಣದ ಹಿಜಾಬ್ ಧರಿಸಿ ಈದ್ ಮುಬಾರಕ್ ಹೇಳಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೂಡ ರಶ್ಮಿಕಾ ಈ ಫೋಟೋ ಹಂಚಿಕೊಂಡು ʼಅಫ್ರೀನಾಳಿಂದ ಎಲ್ಲರಿಗೂ ಈದ್ ಮುಬಾರಕ್ʼ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅಂದಹಾಗೇ, ಇದರಲ್ಲಿ ಗೊಂದಲ ಬೇಡ, ಇಂದು (ಜು.10) ಈದ್ ಅಲ್ ಅಧಾ ಹಬ್ಬದಂದು ರಶ್ಮಿಕಾ ಮಂದಣ್ಣ ಅಭಿನಯದ ʼಸೀತಾ ರಾಮಮ್ʼ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಆ ಸಿನಿಮಾದಲ್ಲಿ ರಶ್ಮಿಕಾ ಮುಸ್ಲಿಂ ಹುಡುಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಅವರ ಹೆಸರು ಅಫ್ರೀನಾ. ಸೀತಾ ರಾಮಮ್ ಫಸ್ಟ್ ಲುಕ್ ನೋಡಿ ರಶ್ಮಿಕಾ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಸೀತಾ ರಾಮಮ್ ಸಿನಿಮಾ ಆಗಸ್ಟ್ 5ರಂದು ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ತೆಲುಗು ನಟ ಸುಮಂತ ಕುಮಾರ್ ಅವರು ಬ್ರಿಗೇಡಿಯರ್ ವಿಷ್ಣು ಶರ್ಮಾ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಹಿಂದಿ-ಮರಾಠಿ ನಟಿ ಮೃಣಾಲ್ ಠಾಕೂರ್ ಇದೇ ಮೊದಲ ಬಾರಿಗೆ ಸೀತಾ ರಾಮಮ್ ಮೂಲಕ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಲ್ಲಿ ದುಲ್ಕರ್ ಸಲ್ಮಾನ್ ರಾಮ್ ಆಗಿ ಮತ್ತು ಮೃಣಾಲ್ ಸೀತಾ ಆಗಿ ಕಾಣಿಸಿಕೊಂಡಿದ್ದಾರೆ.
ಒಂದೆಡೆ ಸಂಘರ್ಷ ಯುದ್ಧ, ಇನ್ನೊಂದೆಡೆ ರೊಮ್ಯಾಂಟಿಕ್ ದೃಶ್ಯಗಳಿರುವ ಸೀತಾ ರಾಮಮ್‌ನಲ್ಲಿ ರಶ್ಮಿಕಾ ಗೆಟಪ್ ಸಹಜವಾಗಿಯೇ ವಿಶೇಷ ಎನ್ನಿಸಿದೆ. ಸಿನಿಮಾವನ್ನು ಹನು ರಾಘವಪುಡಿ ನಿರ್ದೇಶಿಸಿದ್ದು, ಅಶ್ವಿನಿ ದತ್ ಅವರು ತಮ್ಮ ಸ್ವಪ್ನಾ ಸಿನಿಮಾ ಬ್ಯಾನರ್‌ನಡಿ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ರುಕ್ಮಿಣಿ ವಿಜಯ್ ಕುಮಾರ್ ಮತ್ತಿತರರು ಅಭಿನಯಿಸಿದ್ದಾರೆ.
ಇದನ್ನೂ ಓದಿ: Rashmika Mandanna | ಹೊಸ ಪೋಟೊ ಹಂಚಿಕೊಂಡ ರಶ್ಮಿಕಾ: ಸಖತ್ ಹಾಟ್ ಅಂದ್ರು ಫ್ಯಾನ್ಸ್