Site icon Vistara News

Rashmika Mandanna: ಡೀಪ್‌ಫೇಕ್‌ ವಿಡಿಯೊ ಆರೋಪಿ ಬಂಧನ; ಪ್ರತಿಕ್ರಿಯಿಸಿದ ರಶ್ಮಿಕಾ!

Rashmika Mandanna Reacts Deepfake Video

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‌ಫೇಕ್‌ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ಪ್ರಕರಣದಲ್ಲಿ (Deepfake Video Case) ದೆಹಲಿ ಪೊಲೀಸರು ಪ್ರಮುಖ ಆರೋಪಿ ಆಂಧ್ರಪ್ರದೇಶದ ಗುಂಟೂರಿನ ಈಮನಿ ನವೀನ್ (24) ಎಂಬಾತನನ್ನು ಜ.20ರಂದು ಬಂಧಿಸಿದ್ದರು. ರಶ್ಮಿಕಾ ಅವರ ಫ್ಯಾನ್‌ಪೇಜ್‌ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಿಸಲು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಈ ಪ್ರಕರಣ ಬಗ್ಗೆ ರಶ್ಮಿಕಾ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ರಶ್ಮಿಕಾ ಪೋಸ್ಟ್‌ನಲ್ಲಿ ʻʻಆರೋಪಿಯನ್ನು ಬಂಧಿಸಿದ್ದಕ್ಕಾಗಿ ದೆಹಲಿ ಪೊಲೀಸರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಯುವಕ/ಯುವತಿಯರೇ ನಿಮಗೆ ಗೊತ್ತಿಲ್ಲದೇ ನಿಮ್ಮ ಫೋಟೊಗಳನ್ನು ಎಲ್ಲಿಯಾದರೂ ಬಳಸಿದರೆ ಅಥವಾ ಮಾರ್ಫ್ ಮಾಡಿದ್ದರೆ ಜಾಗೃತರಾಗಿ. ನಿಮ್ಮನ್ನು ಬೆಂಬಲಿಸುವ ಜನರಿಂದ ಕ್ರಮ ತೆಗೆದುಕೊಳ್ಳಲಾಗುವುದು ಎಂಬುದು ಇದು ನೆನಪಿಸುತ್ತದೆ ಎಂದು ನಾನು ಭಾವಿಸುತ್ತೇನೆʼʼಎಂದು ಬರೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೋ ಸೃಷ್ಟಿಸಿದ ಆರೋಪಿಯನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಶನಿವಾರ ಹೇಳಿದ್ದಾರೆ. ಆರೋಪಿ ನವೀನ್‌, ನಟಿ ರಶ್ಮಿಕಾ ಅವರ ದೊಡ್ಡ ಅಭಿಮಾನಿ. ಈತ ಮೂವರು ಸೆಲೆಬ್ರಿಟಿಗಳ ಫ್ಯಾನ್‌ಪೇಜ್‌ಗಳನ್ನು ನಡೆಸುತ್ತಿದ್ದಾನೆ. ಡೀಪ್‌ಫೇಕ್‌ ವಿಡಿಯೊ ಅಪ್ಲೋಡ್‌ ಮಾಡುವುದಕ್ಕೂ ಮುನ್ನ ಈತ ಮೂಲ ವಿಡಿಯೊಗಳನ್ನೇ ಅಪ್ಲೋಡ್‌ ಮಾಡಿದ್ದಾನೆ. ತಾನು ನಡೆಸುತ್ತಿದ್ದ ಸೆಲೆಬ್ರಿಟಿಗಳ ಫ್ಯಾನ್‌ಪೇಜ್‌ಗಳ ಪೈಕಿ ಇಬ್ಬರು ನಟಿಯರದ್ದಕ್ಕೆ ಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳಿದ್ದಾರೆ. ಆದರೆ, ರಶ್ಮಿಕಾ ಅವರ ಫಾಲೋವರ್‌ ಸಂಖ್ಯೆ 90 ಸಾವಿರ ಇತ್ತು. ಹೀಗಾಗಿ ರಶ್ಮಿಕಾ ಅವರ ಫ್ಯಾನ್‌ಪೇಜ್‌ನ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಲು ಅತ ಈ ಕೃತ್ಯ ಎಸಗಿದ್ದಾನೆ ಎಂದು ಪೋಲಿಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೊ ಹರಿಬಿಟ್ಟವನ ಬಂಧನ!

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೊ ದೇಶಾದ್ಯಂತ ಭಾರಿ ಸಂಚಲನ ಉಂಟು ಮಾಡಿತ್ತು. ಪ್ರಮುಖ ಸೆಲೆಬ್ರಿಟಿಗಳು ಕೃತ್ಯವನ್ನು ಖಂಡಿಸಿದ್ದರ ಜತೆಗೆ ಕ್ರಮಕ್ಕೆ ಆಗ್ರಹಿಸಿದ್ದರು. ಇದಾದ ನಂತರ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ 465 (ನಕಲು), 469 (ಗೌರವಕ್ಕೆ ಧಕ್ಕೆ), ಮಾಹಿತಿ ತಂತ್ರಜ್ಞಾನ ಕಾಯ್ದೆ (2000)ಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈಗ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬಳಿಕ ಕತ್ರಿನಾ ಕೈಫ್‌, ಕಾಜೋಲ್‌, ಆಲಿಯಾ ಭಟ್‌, ಸಚಿನ್‌ ತೆಂಡೂಲ್ಕರ್‌ ಸೇರಿ ಹಲವರ ಡೀಪ್‌ಫೇಕ್‌ ವಿಡಿಯೊಗಳು ಸುದ್ದಿಯಾಗಿದ್ದವು.

ಏನಿದು ಪ್ರಕರಣ?

ರಶ್ಮಿಕಾ ಮಂದಣ್ಣ ಅವರ ಮಾರ್ಫಿಂಗ್ ವಿಡಿಯೊ ಕಳೆದ ವರ್ಷದ ನವೆಂಬರ್‌ನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ರಶ್ಮಿಕಾ ಅವರ ಮುಖವನ್ನು ಹೊಂದಿರುವ, ಟೈಟ್‌ ಫಿಟ್ ಉಡುಪನ್ನು ಧರಿಸಿರುವ ಮಹಿಳೆ ಲಿಫ್ಟ್‌ ಹತ್ತುತ್ತಿರುವುದು ಕಂಡುಬಂದಿತ್ತು. ಬಳಿಕ ಈ ವಿಡಿಯೊ ಡೀಪ್‌ಫೇಕ್ ಎನ್ನುವುದು ತಿಳಿದುಬಂತು. ಸೂಪರ್ ಸ್ಟಾರ್ ಅಮಿತಾಭ್‌ ಬಚ್ಚನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಧ್ವನಿ ಎತ್ತಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ ನಂತರ ಇದು ಎಲ್ಲರ ಗಮನ ಸೆಳೆದಿತ್ತು. ಬಳಿಕ ಕಲಾವಿದರಾದ ನಾನಿ, ವಿಜಯ್ ದೇವರಕೊಂಡ, ನಾಗ ಚೈತನ್ಯ ಮತ್ತು ಮೃಣಾಲ್ ಠಾಕೂರ್ ಮತ್ತಿತರರು ಡೀಪ್‌ಫೇಕ್‌ ವಿಡಿಯೊ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಂದಣ್ಣ ಕೂಡ ತಮ್ಮ ವೈರಲ್ ಡೀಪ್‌ಫೇಕ್ ವಿಡಿಯೊದಿಂದ ಆಘಾತಗೊಂಡಿದ್ದರು. ಇದನ್ನು ‘ಭಯಾನಕ’ ಎಂದು ಕರೆದಿದ್ದರು.

Exit mobile version