ಸ್ಯಾಂಡಲ್ವುಡ್ನಿಂದ ಹೊರಟು, ಬಾಲಿವುಡ್ವರೆಗೆ ಸಾಲುಸಾಲು ಸಿನಿಮಾ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಎಂದೇ ಸಖತ್ ಫೇಮಸ್. ಆದರೆ ಸಿಕ್ಕಾಪಟೆ ಟ್ರೋಲ್ ಆಗುವ ನಟಿಯೂ ಹೌದು. ರಶ್ಮಿಕಾ ಮಂದಣ್ಣ ಅವರನ್ನು ಟೀಕಿಸುವ, ವಿರೋಧಿಸುವ, ಟ್ರೋಲ್ ಮಾಡುವವರ ವರ್ಗ ದೊಡ್ಡದಿದೆ. ರಶ್ಮಿಕಾ ಬಗ್ಗೆ ದ್ವೇಷ ಭರಿತ ಕಮೆಂಟ್ಗಳನ್ನು, ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕುವವರು ಹಲವರು ಇದ್ದಾರೆ. ಕೀಳು ಪದದ ನಿಂದನೆಗಳಿಂದಲೂ ರಶ್ಮಿಕಾ ಹೊರತಲ್ಲ. ಅವರನ್ನು ಮುಜುಗರಕ್ಕೀಡು ಮಾಡುವ ಪ್ರಶ್ನೆಗಳೂ ಸೋಷಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಹರಿದಾಡುತ್ತಿರುತ್ತದೆ.
ಈಗ ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಸುದೀರ್ಘ ಪೋಸ್ಟ್ ಹಾಕಿಕೊಂಡಿದ್ದಾರೆ. ವರ್ಷಗಳಿಂದಲೂ ನಾನು ದ್ವೇಷ, ವ್ಯಂಗ್ಯಭರಿತ ಮಾತುಗಳನ್ನೇ ಕೇಳುತ್ತಿದ್ದೇನೆ ಎಂದು ಬೇಸರದಿಂದ ಬರೆದುಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಕಿದ ಸೋಷಿಯಲ್ ಮೀಡಿಯಾ ಪೋಸ್ಟ್ ಹೀಗಿದೆ. ‘ಇತ್ತೀಚೆಗೆ ಒಂದಷ್ಟು ವಿಚಾರಗಳು ನನಗೆ ತುಂಬ ಸಮಸ್ಯೆ ತರುತ್ತಿವೆ. ಕೆಲವು ದಿನಗಳಿಂದ ಅಥವಾ ಹಲವು ತಿಂಗಳುಗಳಿಂದ, ಇಲ್ಲ ಒಂದು ವರ್ಷದಿಂದ ಎಂದರೂ ತಪ್ಪಾಗಲಾರದು. ಆ ಬಗ್ಗೆ ಈಗ ಮಾತನಾಡುತ್ತೇನೆ. ಇಲ್ಲಿ ನಾನು ನನಗಾಗಿ ಮಾತನಾಡುತ್ತಿದ್ದೇನೆ ಹೊರತು ಇನ್ಯಾವುದೇ ಕಾರಣಕ್ಕಲ್ಲ. ಇದನ್ನು ನಾನು ಒಂದು ವರ್ಷದಿಂದಲೇ ಮಾಡಬೇಕಿತ್ತು, ಆದರೆ ಈಗ ಮೌನ ಮುರಿಯುತ್ತಿದ್ದೇನೆ’
‘ನಾನು ನನ್ನ ನಟನಾ ವೃತ್ತಿ ಜೀವನ ಶುರು ಮಾಡಿದಾಗಿನಿಂದಲೂ ಬಹಳಷ್ಟು ದ್ವೇಷ ಭರಿತ ಮಾತುಗಳನ್ನು ಕೇಳುತ್ತಿದ್ದೇನೆ. ನನ್ನನ್ನು ದ್ವೇಷಿಸುವವರು ಅನೇಕರು ಇದ್ದಾರೆ. ಟ್ರೋಲ್ ಮತ್ತು ನಕಾರಾತ್ಮಕ ಅಂಶಗಳಿಗೆ ಅಕ್ಷರಶಃ ನಾನೊಂದು ಪಂಚ್ ಬ್ಯಾಗ್ನಂತೆ ಆಗಿಬಿಟ್ಟಿದ್ದೇನೆ. ನಾನು ಯಾವ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದೇನೋ, ಅದಕ್ಕೆ ಬೆಲೆಯಿದೆ ಎಂಬುದು ನನಗೆ ಗೊತ್ತಿದೆ. ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ವ್ಯಕ್ತಿ ನಾನಲ್ಲ ಎಂದೂ ನನಗೆ ತಿಳಿದಿದೆ. ಎಲ್ಲರೂ ನನ್ನನ್ನು ಪ್ರೀತಿಸಬೇಕು ಎಂದು ಯಾವತ್ತೂ ಬಯಸುವುದಿಲ್ಲ. ಆದರೆ ನೀವು ನನ್ನನ್ನು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ನಕಾರಾತ್ಮಕ ಅಂಶಗಳನ್ನು ಹೊರಹಾಕುವುದು? ದ್ವೇಷ ಕಾರುವುದು? ಟ್ರೋಲ್ ಮಾಡುವುದು ಸರಿಯಲ್ಲ.
ನಾನು ಮಾಡುವ ಕೆಲಸದಿಂದ ನೀವೆಲ್ಲರೂ ಸಂತೋಷ ಪಡಬೇಕು ಎಂದು ನಾನು ಬಯಸುತ್ತೇನೆ ಮತ್ತು ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತೇನೆ. ನನ್ನಿಂದ ನಿಮಗೆ ಸಂತೋಷವಾದರೆ ಅದೇ ನನಗೆ ಖುಷಿ. ನಾನು ಮಾಡುವ ಕೆಲಸದಿಂದ ನಿಮಗೂ, ನನಗೂ ಇಬ್ಬರಿಗೂ ಹೆಮ್ಮೆಯಾಗಬೇಕು ಎಂಬುದೇ ನನ್ನ ಆಶಯ. ಅದಕ್ಕಾಗಿ ಎಷ್ಟಾಗತ್ತೋ, ಅಷ್ಟು ಪರಿಪೂರ್ಣ ಪ್ರಯತ್ನ ಮಾಡುತ್ತಿದ್ದೇನೆ.
ಆದರೆ, ಇಂಟರ್ನೆಟ್ನಲ್ಲಿ ನಾನು ಟೀಕಿಸಲ್ಪಡುತ್ತಿರುವ, ನಿಂದನೆ ಪಡೆಯುತ್ತಿರುವ ರೀತಿ ನಿಜಕ್ಕೂ ನನಗೆ ನೋವು ತರುತ್ತಿದೆ. ನಾನು ಹೇಳದ ವಿಷಯಗಳು, ಮಾತುಗಳಿಗೆ ನನ್ನ ವಿರುದ್ಧ ದ್ವೇಷ ಕಾರುವುದನ್ನು ನೋಡಿದಾಗ ಹೃದಯವೇ ಒಡೆದು ಹೋದಂತೆ ಆಗುತ್ತದೆ. ನಾನು ಸಂದರ್ಶನ, ಮಾಧ್ಯಮಗಳ ಎದುರು ಆಡುವ ಮಾತುಗಳೆಲ್ಲ ನನಗೇ ಮುಳ್ಳಾಗುತ್ತಿವೆ. ನನ್ನ ಮಾತುಗಳನ್ನು ತಿರುಚಿ, ಅಪಪ್ರಚಾರ ಮಾಡಲಾಗುತ್ತದೆ. ನನಗಷ್ಟೇ ಅಲ್ಲ, ನನ್ನ ಸ್ನೇಹಿತರು, ಸಂಬಂಧಿಗಳಿಗೂ ಇದರಿಂದ ತೊಂದರೆಯಾಗುತ್ತಿದೆ. ನಾನು ನನ್ನನ್ನು ಇನ್ನಷ್ಟು ಸುಧಾರಣೆ ಮಾಡಿಕೊಳ್ಳುವಂಥ ಟೀಕೆ-ವಿಮರ್ಶೆಗಳನ್ನು ಖಂಡಿತ ಸ್ವಾಗತಿಸಿ, ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಆಗುತ್ತಿರುವುದು ಅದಲ್ಲ, ಇಷ್ಟೆಲ್ಲ ದ್ವೇಷ-ನಕಾರಾತ್ಮಕತೆಯನ್ನು ನಾನು ಹೇಗೆ ತಡೆದುಕೊಳ್ಳಲಿ? ತುಂಬ ದಿನಗಳಿಂದಲೂ ನಾನು ಇಂಥ ಕಮೆಂಟ್ಗಳು, ವ್ಯಂಗ್ಯ, ದ್ವೇಷಗಳನ್ನು ಸಹಿಸಿಕೊಳ್ಳುತ್ತಲೇ ಬಂದೆ.
ಇನ್ನೊಂದೆಡೆ ನನ್ನನ್ನು ಅಪಾರವಾಗಿ ಪ್ರೀತಿಸುವವರೂ ಇದ್ದಾರೆ. ಅವರ ಪ್ರೀತಿ, ನಂಬಿಕೆ, ಸಹಕಾರದಿಂದಲೇ ನಾನು ಇಂದು ಈ ಮಟ್ಟಕ್ಕೆ ನಾನು ಬೆಳೆದೆ. ನಾನು ನನ್ನ ಸುತ್ತಲೂ ಇರುವವರನ್ನು ಪ್ರೀತಿಸುತ್ತೇನೆ. ನಾನು ಯಾರೊಂದಿಗೆ ಕೆಲಸ ಮಾಡಿದ್ದೇನೋ, ಅವರನ್ನೂ ಪ್ರೀತಿಸುತ್ತೇನೆ. ನಾನು ನನ್ನ ಕೆಲಸ ಮುಂದುವರಿಸುತ್ತೇನೆ. ನಿಮ್ಮೆಲ್ಲರ ಸಂತೋಷವೇ ನನ್ನ ಸಂತೋಷ. ನಾವೆಲ್ಲರೂ ನಮ್ಮ ಕೈಲಾದಷ್ಟು ಪರಿಶ್ರಮ ವಹಿಸುತ್ತಲೇ ಇದ್ದೇವೆ. ದಯವಿಟ್ಟು ಎಲ್ಲರಲ್ಲೂ ದಯೆ ಇರಲಿ, ಧನ್ಯವಾದ..’
ಇಷ್ಟು ಸುದೀರ್ಘ ಪೋಸ್ಟ್ ಹಾಕಿಕೊಂಡಿರುವ ರಶ್ಮಿಕಾಗೆ ಹಲವರು ಧೈರ್ಯ ತುಂಬಿ ಕಮೆಂಟ್ ಮಾಡಿದ್ದಾರೆ. ಬೇಸರ ಪಟ್ಟುಕೊಳ್ಳಬೇಡಿ, ನೀವು ಪ್ರೀತಿಗೆ ಅರ್ಹರು, ಸಕಾರಾತ್ಮಕವಾಗಿ ಚಿಂತಿಸಿ ಎಂದು ಹಲವು ಸೆಲೆಬ್ರಿಟಿಗಳೇ ರಶ್ಮಿಕಾ ಪೋಸ್ಟ್ಗೆ ಕಮೆಂಟ್ ಹಾಕಿದ್ದಾರೆ.