ಹೊಸದಿಲ್ಲಿ: ವೈರಲ್ ಆಗಿರುವ (Viral video) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ (Deep Fake video) ಕುರಿತು ವಿಜಯ್ ದೇವರಕೊಂಡ (Vijay devarakonda), ನಾಗ ಚೈತನ್ಯ (Naga chaitanya) ಮುಂತಾದ ಸಹನಟ- ನಟಿಯರು ಪ್ರತಿಕ್ರಿಯಿಸಿದ್ದು, ʼಇಂಥದ್ದು ನಡೆಯಬಾರದುʼ ಎಂದಿದ್ದಾರೆ.
“ಇಂತಹದು ಭವಿಷ್ಯದಲ್ಲಿ ಯಾರಿಗೂ ಆಗಬಾರದು. ಇದರ ಆರೋಪಿಗಳಿಗೆ ತ್ವರಿತ ಕ್ರಮ ಮತ್ತು ಶಿಕ್ಷೆ ಆಗುವಂತೆ ಸಮರ್ಥವಾದ ಸೈಬರ್ ತನಿಖೆ ವಿಭಾಗವನ್ನು ಕ್ರಿಯೇಟ್ ಮಾಡಿದರೆ ಜನ ಹೆಚ್ಚು ಸುರಕ್ಷಿತರಾಗುತ್ತಾರೆ” ಎಂದು ವಿಜಯ್ ದೇವರಕೊಂಡ ಬರೆದಿದ್ದಾರೆ. ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್‌ಗಳು ಇವೆ.
ಸೋಮವಾರ ತಡರಾತ್ರಿ ಮೃಣಾಲ್ ಠಾಕೂರ್ Instagram ಸ್ಟೋರೀಸ್‌ನಲ್ಲಿ ಟಿಪ್ಪಣಿ ಬರೆದಿದ್ದಾರೆ. ಅದರಲ್ಲಿ, “ಇಂತಹದನ್ನು ಆಶ್ರಯಿಸುವವರಿಗೆ ನಾಚಿಕೆಯಾಗಬೇಕು. ಅವರಲ್ಲಿ ಆತ್ಮಸಾಕ್ಷಿಯೇ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಸಮಸ್ಯೆಯನ್ನು ನಾವು ಇಲ್ಲಿಯವರೆಗೆ ನೋಡಿದ್ದರೂ ಬಹಳಷ್ಟು ಸಾರಿ ನಾವು ಮೌನವಾಗಿರುವ ಆಯ್ಕೆ ಮಾಡಿಕೊಂಡಿದ್ದೇವೆ. ಪ್ರತಿನಿತ್ಯ ನಟಿಯರ ಮಾರ್ಫ್ ಮಾಡಿದ, ಎಡಿಟ್ ಮಾಡಿದ ವೀಡಿಯೊಗಳು ಅಂತರ್ಜಾಲದಲ್ಲಿ ಅನುಚಿತವಾದ ದೇಹದ ಭಾಗಗಳನ್ನು ಝೂಮ್ ಮಾಡುತ್ತಿವೆ. ನಾವು ಸಮುದಾಯವಾಗಿ, ಸಮಾಜವಾಗಿ ಎಲ್ಲಿಗೆ ಹೋಗುತ್ತಿದ್ದೇವೆ? ನಾವು ಲೈಮ್‌ಲೈಟ್‌ನಲ್ಲಿ ನಟಿಯರಾಗಿರಬಹುದು, ಆದರೆ ದಿನದ ಅಂತ್ಯದಲ್ಲಿ ನಾವು ಪ್ರತಿಯೊಬ್ಬರೂ ಮನುಷ್ಯರು. ಮೌನವಾಗಿರಲು ಇದು ಸಮಯವಲ್ಲ” ಎಂದಿದ್ದಾರೆ.
ಸೋಮವಾರ ರಶ್ಮಿಕಾ ಅವರ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ನಾಗ ಚೈತನ್ಯ ಹೀಗೆ ಬರೆದುಕೊಂಡಿದ್ದಾರೆ: “ತಂತ್ರಜ್ಞಾನವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು. ಇದು ನಿಜವಾಗಿಯೂ ನಿರಾಶಾದಾಯಕವಾಗಿದೆ. ಭವಿಷ್ಯದಲ್ಲಿ ಇದು ಏನಾಗಬಹುದು ಎಂಬ ಆಲೋಚನೆ ಇನ್ನೂ ಭಯಾನಕ. ಇದರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಠಿಣ ರೀತಿಯ ಕಾನೂನು ಜಾರಿಗೆ ತರಬೇಕು. ಇದಕ್ಕೆ ಬಲಿಯಾಗುವ ಜನರನ್ನು ರಕ್ಷಿಸಲು ಕಾಯಿದೆ ಜಾರಿಗೊಳಿಸಬೇಕು. ನಿಮಗೆ ನನ್ನ ಬೆಂಬಲವಿದೆʼʼ ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಕೂಡ ನಿನ್ನೆ ಈ ವೈರಲ್ ವಿಡಿಯೋ ನೋಡಿ ಶಾಕ್‌ನಿಂದ ಪ್ರತಿಕ್ರಿಯಿಸಿದ್ದು, ‘ಭಯಾನಕ’ ಎಂದಿದ್ದಾರೆ. “ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗುತ್ತಿದೆ. ಆನ್‌ಲೈನ್‌ನಲ್ಲಿ ಹರಡಿರುವ ನನ್ನ ಡೀಪ್‌ಫೇಕ್ ವೀಡಿಯೊದ ಬಗ್ಗೆ ಮಾತನಾಡಬೇಕಾಗಿದೆ. ಇದು ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ನಮ್ಮಲ್ಲಿ ಪ್ರತಿಯೊಬ್ಬರಿಗೂ ತುಂಬಾ ಹಾನಿಗೆ ಗುರಿ ಮಾಡಲಿದೆ. ಇಂದು, ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆ ಮತ್ತು ಬೆಂಬಲ ವ್ಯವಸ್ಥೆಯಾಗಿರುವ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ಆದರೆ ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ನನಗೆ ಇದು ಸಂಭವಿಸಿದ್ದರೆ, ನಾನು ಇದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ನಾನು ನಿಜವಾಗಿಯೂ ಊಹಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಅಪರಾಧದಿಂದ ಹಾನಿಗೀಡಾಗುವ ಮೊದಲು ನಾವು ಇದನ್ನು ಒಟ್ಟಾಗಿ ಪರಿಹರಿಸಬೇಕಾಗಿದೆ” ಎಂದು ಅವರು ತಮ್ಮ Instagramನಲ್ಲಿ ಬರೆದಿದ್ದಾರೆ.
ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ನಟಿಯ ನೆರವಿಗೆ ಮೊದಲು ಧಾವಿಸಿದ್ದರು. ʼʼಇದು ಕಾನೂನು ಕ್ರಮಕ್ಕೆ ಅರ್ಹವಾದುದುʼʼ ಎಂದಿದ್ದರು.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ವೈರಲ್ ಡೀಪ್‌ಫೇಕ್ ವಿಡಿಯೋ ಅಪಾಯಕಾರಿ ಎಂದ ಕೇಂದ್ರ ಸಚಿವ; ಮೂಲ ವಿಡಿಯೋ ಇಲ್ಲಿದೆ