ಬೆಂಗಳೂರು: ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಮ್ ಎನ್ ಕುಮಾರ್ (N Kumar)ನಡುವೆ ಕಾಲ್‌ಶೀಟ್ (Call Sheet Issue) ಸಂಬಂಧಿಸಿದಂತೆ ಉಂಟಾದ ವಿವಾದ ಕುರಿತು ಜುಲೈ 21ರಂದು ಹಿರಿಯ ನಟ ರವಿಚಂದ್ರನ್ (Ravichandran) ಅವರ ಮನೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರಿನ ಹೊಸಕೆರೆ ಹಳ್ಳಿಯಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಸಂಧಾನ ಸಭೆ ಜುಲೈ 21ರ ರಾತ್ರಿ ಹತ್ತು ಗಂಟೆಯವರೆಗೂ ನಡೆದಿದೆ. ಸುದೀಪ್, ಕುಮಾರ್, ಭಾ.ಮಾ ಹರೀಶ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಈ ವೇಳೆ ಸುದೀಪ್ ಹಾಗೂ ಎಮ್ ಎನ್ ಕುಮಾರ್ ಅವರೂ ಪರಸ್ಪರ ಮಾತುಕತೆ ಮಾಡಿಕೊಂಡಿದ್ದಾರೆ. ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ನಾಳೆ (ಜು.23)ರಂದು ರವಿಚಂದ್ರನ್ ಈ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆ.
ಈಗಾಗಲೇ ಇಬ್ಬರೂ ತಮ್ಮ ತಮ್ಮ ಅಭಿಪ್ರಾಯವನ್ನು ರವಿಚಂದ್ರನ್ ಮುಂದೆ ಹೆಳಿಕೊಂಡಿದ್ದಾರೆ. ಸಂಧಾನ ಸಭೆಯಲ್ಲಿ ಸುದೀಪ್, ಎಮ್ ಎನ್ ಕುಮಾರ್, ಭಾಮಾ ಹರೀಶ್, ಉಮೇಶ್ ಬಣಕಾರ್ ಭಾಗಿಯಾಗಿದ್ದರು. ಇತ್ತೀಚೆಗೆ ಮಾತನಾಡಿದ್ದ ರವಿಚಂದ್ರನ್ ಅವರು, ‘ನಾನು ಎಂಟ್ರಿ ಕೊಟ್ಟೆ ಅಂದಮೇಲೆ ಇಬ್ಬರೂ ನನ್ನ ನಿರ್ಧಾರ ಒಪ್ಪಬೇಕು. ಹಾಗಿದ್ದರೆ ಮಾತ್ರ ನಾನು ಎಂಟ್ರಿ ಕೊಡುತ್ತೇನೆ’ ಎಂದಿದ್ದರು. ಈಗ ಅವರು ಸಂಧಾನ ಸಭೆಯ ನೇತೃತ್ವ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ: Kichcha Sudeep: ವಿವಾದಕ್ಕೆ ತಲೆ ಕೆಡಿಸಿಕೊಳ್ಳದೆ ಚಿಲ್ ಆಗಿ ಪಾರ್ಟಿ ಮಾಡಿದ ಕಿಚ್ಚ ಸುದೀಪ್!
ಈ ಬಗ್ಗೆ ಶಿವಣ್ಣ ಮಾತನಾಡಿ ʻʻನಾನು ಸಂಧಾನ ಸಭೆಯಲ್ಲಿ ಇರಲಿಲ್ಲ. ಒಳ್ಳೆ ಬೆಳವಣಿಗೆ ಆಗಬೇಕು. ನಾನು ಲೀಡರ್ ಎಂದು ಹೇಳುವುದಕ್ಕೆ ಇಷ್ಟ ಪಡುವುದಿಲ್ಲ. ಇನ್ನೊಂದು ಎರಡು ಮೂರು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ. ನನಗೆ ಸುದೀಪ್ ತಮ್ಮ, ರವಿಚಂದ್ರನ್ ಅವರಿಗೆ ಮಗ. ಇದು ಕುಟುಂಬ. ಯಾವುದೇ ಸಮಸ್ಯೆ ಬಗೆಹರಿಯದೇ ಇರುವುದೇನಿಲ್ಲ ಈ ಜಗತ್ತಿನಲ್ಲಿ. ತಾಳ್ಮೆ ಬೇಕು, ಎಲ್ಲ ಸರಿ ಹೋಗುತ್ತದೆʼʼ ಎಂದು ಮಾಧ್ಯಮದ ಮುಂದೆ ಹೇಳಿಕೊಂಡರು.
ಈ ಪ್ರಕರಣದಲ್ಲಿ ಸುದೀಪ್ ಕೋರ್ಟ್ ಮೆಟ್ಟಿಲೇರಿದರು. ಕುಮಾರ್ ಅವರು ಇದನ್ನು ವಿರೋಧಿಸಿ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆಗೆ ಕುಳಿತರು. ಈಗ ಈ ಪ್ರಕರಣ ಕೊನೆಗೊಳ್ಳುವ ಸಾಧ್ಯತೆ ಪಕ್ಕಾ ಆಗಿದೆ.