ಬೆಂಗಳೂರು: ಚಂದನವನದ ವಿಭಿನ್ನ ಕಥಾಹಂದರ ಹೊಂದಿರುವ ಗೀತಾ ಭಾರತಿ ಭಟ್ ಅಭಿನಯದ “ರವಿಕೆ ಪ್ರಸಂಗ” ಎಂಬ ಮನರಂಜನಾತ್ಮಕ ಚಿತ್ರದ ಮೊದಲ ಪೋಸ್ಟರ್ ಇದೀಗ ಬಿಡುಗಡೆಗೊಂಡಿದೆ. ಈ ಪೋಸ್ಟರ್‌ಅನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದಾರೆ. ʼಬ್ರಹ್ಮ ಗಂಟುʼ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ಅವರು ಸಾನ್ವಿ ಪಾತ್ರದ ಮೂಲಕ ತೆರೆ ಮೇಲೆ ಮಿಂಚಲಿದ್ದಾರೆ. ಈಗಾಗಲೇ ಚಿತ್ರದ ಕಿರು ಟೀಸರ್ ರಿಲೀಸ್ ಆಗಿದೆ. ಶೀರ್ಷಿಕೆ ಕೆಳಗೆ ʻನ್ಯಾಷನಲ್ ಇಶ್ಯೂʼ ಎಂಬ ಕ್ಯಾಪ್ಶನ್ ಸಹ ಇದೆ.
ಇತ್ತೀಚಿಗೆ ಈ ಚಿತ್ರದ ಟೀಸರ್‌ವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವ ಮೂಲಕ ಕಿರುತೆರೆ ನಟಿ ಗೀತಾ ಭಾರತಿ ಭಟ್ ಅವರ ಸಿನಿಮಾಗೆ ಸಾಥ್ ನೀಡಿದ್ದರು. ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ಗೀತಾ ಭಾರತಿ ಭಟ್ ʻರವಿಕೆ ಪ್ರಸಂಗ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿದೆ.
ಇದನ್ನೂ ಓದಿ: Bamul: Roopesh Shetty | ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಸಿನಿಮಾ ಮಂಕು ಭಾಯ್ ಫಾಕ್ಸಿ ರಾಣಿ ಬಿಡುಗಡೆಗೆ ಸಜ್ಜು
ರಚಿತಾ ರಾಮ್ ಪೋಸ್ಟ್
ʻʻಸುಂದರ ಕೌಟುಂಬಿಕ ಕಥಾಹಂದರ ಹೊಂದಿರುವ ಸಾನ್ವಿಯಾಗಿ ಗೀತಾ ಭಾರತಿ ಭಟ್ ಅಭಿನಯದ, ದೃಷ್ಟಿ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿರುವ ಕನ್ನಡದ ಹೊಸ ಮನರಂಜನಾತ್ಮಕ ಚಿತ್ರ “ರವಿಕೆ ಪ್ರಸಂಗ” ದ ಮೊದಲ ಪೋಸ್ಟರ್ ಹೆಮ್ಮೆಯಿಂದ ಬಿಡುಗಡೆ ಮಾಡುತ್ತಾ, ಇಡೀ ಚಿತ್ರತಂಡಕ್ಕೆ ಶುಭ ಕೋರುತ್ತೇನೆʼʼ ಎಂದು ರಚಿತಾ ರಾಮ್ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಈ ಸಿನಿಮಾಗೆ ಸಂತೋಷ್ ಕೊಡೆಂಕೆರಿ ಅವರ ನಿರ್ದೇಶನವಿದೆ. ಪಾವನ ಸಂತೋಷ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಂಪತ್ ಮೈತ್ರೇಯ, ರಾಕೇಶ್ ಮಯ್ಯ, ಸುಮನ್ ರಂಗನಾಥ್, ಪದ್ಮಜಾ ರಾವ್, ರಘು ಪಾಂಡೇಶ್ವರ್ ಹೀಗೆ ಸಾಕಷ್ಟು ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವಿನಯ್ ಶರ್ಮ ಸಂಗೀತ ನಿರ್ದೇಶನ, ಮುರಳಿದರ್ ಎನ್ ಛಾಯಾಗ್ರಹಣ ಹಾಗೂ ರಘು ಶಿವರಾಮ್ ಸಂಕಲನವಿರುವ ʻʻರವಿಕೆ ಪ್ರಸಂಗ” ಚಿತ್ರದ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ವತಿಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರವಿದು. ಶಂತನು ಮಹರ್ಷಿ, ಗಿರೀಶ್ ಗೌಡ, ನಿರಂಜನ್ ಗೌಡ ಹಾಗೂ ಶಿವರುದ್ರಯ್ಯ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.