ಬೆಂಗಳೂರು: ಬಾಲಿವುಡ್‌ನಲ್ಲಿ ಪತ್ತೇದಾರಿಕೆ ಸಿನಿಮಾಗಳು (Cinema News) ಹೆಚ್ಚಾಗಿ ಬರುತ್ತಿರುತ್ತವೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಶಾರುಖ್ ಖಾನ್ ಅವರ ಪಠಾಣ್ ಸಿನಿಮಾವಂತೂ ವಿಶ್ವಾದ್ಯಂತ ದೊಡ್ಡ ಹೆಸರು ಮಾಡಿ ಸಾವಿರ ಕೋಟಿ ರೂ. ಗಳಿಸಿಕೊಂಡ ಮೊದಲ ಹಿಂದಿ ಸಿನಿಮಾವಾಗಿಯೂ ಹೊರಹೊಮ್ಮಿತು. ಅದರಲ್ಲಿ ಪಠಾಣ್ ಒಬ್ಬ ಭಾರತೀಯ ಪತ್ತೆದಾರಿ ಏಜೆಂಟ್ ಆಗಿ ಕೆಲಸ ಮಾಡಿದ್ದರು. ಆದರೆ ಸಿನಿಮಾಗಳಲ್ಲಿ ತೋರಿಸುವ ರೀತಿಗೂ ನಿಜವಾದ ಪತ್ತೆದಾರಿ ಇಲಾಖೆಗಳು ಕೆಲಸ ಮಾಡುವುದಕ್ಕೂ ಭಾರೀ ವ್ಯತ್ಯಾಸವಿದೆ ಎಂದು ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ(RAW) ಮಾಜಿ ಮುಖ್ಯಸ್ಥರಾದ ವಿಕ್ರಮ್ ಸೂದ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಕ್ರಮ್ ಸೂದ್ ಅವರು ನಮ್ಮ ಸಿನಿಮಾ ನಿರ್ಮಾಪಕರಿಗಾಗಲೀ ಅಥವಾ ನಿರ್ದೇಶಕರಿಗಾಗಲಿ ನಿಜವಾಗಿಯೂ ಒಂದು ಪತ್ತೆದಾರಿ ಸಿನಿಮಾ ಮಾಡುವ ಮನಸ್ಸೇ ಇಲ್ಲ ಎಂದು ಹೇಳಿದ್ದಾರೆ. ಆ ಮನಸ್ಸು ಮಾಡಿಕೊಂಡರೆ ನೈಜ ರೀತಿಯ ಮತ್ತು ಅತ್ಯುತ್ತಮವಾದ ಸಿನಿಮಾವನ್ನು ಮಾಡಬಹುದು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video: ‘ಕ್ಯಾಂಡಿ’ ಮೇಲೆ ಧೋನಿಗೆ ‘ಕ್ರಷ್’, ಇವರು ಆಡುವ ಗೇಮ್ ಮೂರೇ ಗಂಟೆಯಲ್ಲಿ 36 ಲಕ್ಷ ಡೌನ್‌ಲೋಡ್!
“ನಮ್ಮಲ್ಲಿ ಜೇಮ್ಸ್ ಬಾಂಡ್‌ನಂತಹ ಸಿನಿಮಾ ಮಾಡಬೇಕು ಎಂದು ಹೋಗುತ್ತಾರೆ. ಅದು ನೈಜವೆನಿಸುವುದೇ ಇಲ್ಲ. ಪಾಕಿಸ್ತಾನದ ಐಎಸ್‌ಐ ಹುಡುಗಿಯೊಬ್ಬಳು ನಮ್ಮ RAW ಸಿಬ್ಬಂದಿಯೊಂದಿಗೆ ಕೆಲಸ ಮಾಡುವುದು, ಅದರಲ್ಲೂ ಇಬ್ಬರೂ ಖುಷಿಯಾಗಿ ಕೆಲಸ ಮಾಡುವುದನ್ನು ಸಿನಿಮಾದಲ್ಲಿ ತೋರಿಸುತ್ತಾರೆ. ಇದು ನಿಜ ಜೀವನದಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲದ್ದು” ಎಂದು ಪಠಾಣ್ ಸಿನಿಮಾ ಕುರಿತಾಗಿ ಹೇಳಿದ್ದಾರೆ.
“ಏಕ್ ತಾ ಟೈಗರ್ ಸಿನಿಮಾ ನೋಡಿದಾಗಲೂ ನನಗೆ ನಗು ಬಂದಿತ್ತು. ಬಜರಂಗಿ ಭಾಯಿಜಾನ್ ಸಿನಿಮಾ ಕೂಡ ತೀರಾ ಅಸಾಧ್ಯ ಕಥೆಯನ್ನೇ ತೋರಿಸಿದೆ. ನಿಜವಾದ ಸ್ಪೈ ಸಿನಿಮಾವೆಂದರೆ ಸ್ಟೀವನ್ ಸ್ಪಿಲ್ಬರ್ಗ್ ಅವರ ʼಬ್ರಿಡ್ಜ್ ಆಫ್ ಸ್ಪೈಸ್ʼ. ಆ ರೀತಿಯಲ್ಲಿ ನಿಜ ಎನಿಸುವಂತಹ ಕಥೆಗಳನ್ನು ಮಾಡಬೇಕು” ಎಂದು ಅವರು ಹೇಳಿದ್ದಾರೆ.