Site icon Vistara News

Spandana Vijay Raghavendra: ಮದುವೆಯಾದರೆ ಅವರನ್ನೇ, ಅಪ್ಪನನ್ನು ಒಪ್ಪಿಸಿ ಎಂದಿದ್ದಳು; ನಿರ್ದೇಶಕಿಯ ಭಾವುಕ ಪತ್ರ!

Rekharani Cashyap

ಬೆಂಗಳೂರು: ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ ರಾಘವೇಂದ್ರ (Vijay Raghavendra wife) ಕಡಿಮೆ ರಕ್ತದೊತ್ತಡ ಉಂಟಾಗಿದ್ದರಿಂದ ಹೃದಯಾಘಾತ ಆಯಿತು ಎಂದು ತಿಳಿದು ಬಂದಿದೆ. ಅವರ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ನಿರ್ದೇಶಕಿ ರೇಖಾರಾಣಿ ಕಶ್ಯಪ್ (Rekharani Cashyap) ಕೂಡ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದಾರೆ. ಅವರು ಬರೆದ ಪತ್ರ ಇಲ್ಲಿದೆ.

ʻʻಸ್ಪಂದನಾ! ನನ್ನ ಅಚ್ಚು!

ʻʻಸ್ಪಂದನಾ! ನನ್ನ ಅಚ್ಚು!
ಅವಳು ಹುಟ್ಟಿದಾಗಿನಿಂದ ಇದುವರೆಗೂ ನಾನವಳನ್ನು ಆ ಹೆಸರಿನಿಂದ ಕರೆದೇ ಇಲ್ಲ. ಕರೆದದ್ದೆಲ್ಲ ಅಚ್ಚು ಎಂದೇ!.
ಸೌಮ್ಯ ಮುಖದ ಸುಂದರ ಹಠಮಾರಿ. ಆಸೆಪಟ್ಟಿದ್ದನ್ನು ನೆರವೇರಿಸಲು ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯ‌ ರಾಘವೇಂದ್ರನೋ! ದೇವಾ, ಅಳತೆ ಮಾಡಿಟ್ಟ ಹಾಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ. ನಂತರ ಮಿಕ್ಕೆಲ್ಲ. ಬಹಳ ಮುಗ್ಧೆಯಾಗಿದ್ದ ನನ್ನ ಅಚ್ಚುವನ್ನು ಒಮ್ಮೆ ಸದಾಶಿವನಗರ ಪಾರ್ಕ್ ಬಳಿ ಹರೆಯದ ಹುಡುಗನೊಬ್ಬನ ಜತೆ ಕಾರಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದುದ್ದನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಅವಳಪ್ಪ ಬಿ.ಕೆ. ಶಿವರಾಂ ಮೊದಲೇ ಹುಲಿ. ‘ನಿನ್ನ ಪ್ರಾಣಪಕ್ಷಿ ಎಲ್ಲಿಟ್ಟಿದ್ದೀಯ ಹೇಳು’ ಎಂದು ರೇಗಿಸಿದಾಗಲೆಲ್ಲ ಮಗಳನ್ನು ಮುದ್ದು ಮಾಡುತ್ತಾ ‘ ಅಚ್ಚು ಒಳಗಿದೆ ನನ್ನ ಪ್ರಾಣಪಕ್ಷಿ’ ಎನ್ನುತ್ತಿದ್ದ. ಅಪ್ಪನ ಅಪಾರ ಪ್ರೀತಿ ಅವಳ confidence levelನ್ನು ಸದಾ ಉತ್ತುಂಗದಲ್ಲಿಟ್ಟಿತ್ತು. ಇಂತಹ ಅಪ್ಪನ ಬಳಿ ಮಗಳ ಹಿತರಕ್ಷಣೆಯ ದೃಷ್ಟಿಯಿಂದ ಚಾಡಿ ಹೇಳಲೋ? ಬೇಡವೊ? ಎಂದು ಬಹಳ ದಿನ ಒದ್ದಾಡಿದ್ದೆ. ನಂತರ ಕರೆಮಾಡಿ ನಿನ್ನ ಜತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. ‘ ಆಂಟಿ, ನಾನು ಮದುವೆಯಾದರೆ ಅವರನ್ನೇ…ಅಪ್ಪನನ್ನು ಒಪ್ಪಿಸಿ’ ಎಂದಳು. ಎಷ್ಟು ಹಠಮಾಡಿದರೂ ಹುಡುಗ ಯಾರೆಂದು ಹೇಳುತ್ತಿಲ್ಲ. ಕಡೆಗೆ ‘ ಆಂಟಿ, ಸಿನೆಮಾದವನು ಅಂದರೆ ನೀವೆಲ್ಲಾ ಬೇಡ ಅನ್ನುತ್ತೀರಿ. ಅದಕ್ಕೆ ಅವರ ಹೆಸರು ಹೇಳೊಲ್ಲ’ ಎಂದಳು. ಹಾಗಾದರೆ ನಾನೂ ನಿನ್ನ ಪ್ರೀತಿಗೆ ಸಪೋರ್ಟ್ ಮಾಡೊಲ್ಲ ಎಂದೆ.

ಇದನ್ನೂ ಓದಿ: Spandana Vijay Raghavendra: ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಬಗ್ಗೆ ಗೊತ್ತಿರದ ಸಂಗತಿಗಳಿವು

ಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಸಿಗಲೇ ಇಲ್ಲ

ʻʻಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಎಲ್ಲೂ ಸಿಕ್ಕಿಹಾಕಿಕೊಳ್ಳದ ಜಾಣತನ ತೋರುವಷ್ಟು ದೊಡ್ಡವಳಾಗಿಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಸಣ್ಣ ಧ್ವನಿಯಲ್ಲಿ ಹೇಳಿದಳು ಚಿನ್ನಾರಿ ಮುತ್ತ!
ಈ ಮಧ್ಯೆ ನನ್ನ ಆಪ್ತ ಹಾಗೂ ನನ್ನ soulmate ಶಿವರಾಂಗೆ ಅಚ್ಚು ವಿಷಯ ಹೇಳಲೇಬೇಕೆಂದು ನಿರ್ಧರಿಸಿದ್ದರೂ, ಶೂಟಿಂಗ್ ನಲ್ಲಿ ಬಿಜಿಯಾದೆ.

ಬೆಳ್ಳಗ್ಗೆ ಬೆಳ್ಳಗ್ಗೆ ಶಿವರಾಂ ಕರೆ. ‘ನಿನ್ನ ಮಗಳು ಅಚ್ಚುಗೆ ಮದುವೆ ಮಾಡ್ತಿದ್ದೀನಿ ಅಂತ! ಮತ್ತೆ ನನ್ನ ಜೀವ ಬಾಯಿಗೆ ಬಂತು. ಹು..ಡು…ಗ..ಯಾರು? ಎಂದೆ ನಡುಗುವ ಧ್ವನಿಯಲ್ಲಿ. ಯಾವುದೇ ಕಾರಣಕ್ಕೂ ಅಚ್ಚು ಕನಸು ಛಿದ್ರವಾಗುವುದು ನನಗಿಷ್ಟವಾಗಿರಲಿಲ್ಲ. ಏಕೆಂದರೆ ನಮ್ಮ ಪಾಲಿಗೆ ಅವಳು ಸ್ವರ್ಗದಿಂದ ನೇರವಾಗಿ ನಮ್ಮ ಕೈಗೆ ಸಿಕ್ಕ ಹೂವು.
ನಿಧಾನವಾಗಿ, ಸಮಾಧಾನಕರವಾದ ಧ್ವನಿಯಲ್ಲಿ ಶಿವರಾಂ ಹೇಳಿದ್ದು ‘ ಅಚ್ಚುನೇ ಆರಿಸಿಕೊಂಡಿದ್ದಾಳೆ. ವಿಜಯ ರಾಘವೇಂದ್ರ. ಒಳ್ಳೆ ಹುಡುಗನನ್ನೇ ಆರಿಸಿಕೊಂಡಿದ್ದಾಳಲ್ವಾ?’
ಶಿವರಾಂ ಮಾತು ಕೇಳುತ್ತಿದ್ದಂತೆ ನೂರಾರು ಬಂಡೆಗಳು ತಲೆಯಿಂದ ಕೆಳಗೆ ಇಳಿದ ಸುಂದರ ಅನುಭವ.
ಇಲ್ಲಿ ವಿಜಯ ರಾಘವೇಂದ್ರ ಪುಣ್ಯ ಮಾಡಿದ್ದನೋ…ಅಚ್ಚು ಪುಣ್ಯ ಮಾಡಿದ್ದಳೋ ಗೊತ್ತಿಲ್ಲ. ಅವರ ದಾಂಪತ್ಯ ಜೀವನ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು.

ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇಟ್ಟೆ

ಅಚ್ಚು ಚಿಕ್ಕವಳಿದ್ದಾಗ ಅವಳ (Vijay Raghavendra wife) ಮಾವನ ಮನೆ ಬೆಳ್ತಂಗಡಿಯಲ್ಲಿ ಶೂಟಿಂಗ್ ಮಾಡುತ್ತಿದೆ. ಹಗಲು ರಾತ್ರಿ ನಡೆಯುತ್ತಿದ್ದ ಧಾರಾವಾಹಿ. ಪುಟ್ಟಿ ನನ್ನ ಹೆಗಲಿಗಂಟಿಕೊಂಡು ಹಗಲೂ ರಾತ್ರಿ ಬೇಸರವಿಲ್ಲದೆ ಆಸಕ್ತಿಯಿಂದ ಶೂಟಿಂಗ್ ನೋಡುತ್ತಿದ್ದಳು. ಒಮ್ಮೆ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಾ ಕುಳಿತಿದ್ದೆ. ಮುಖ ಊದಿಸಿಕೊಂಡು ಹತ್ತಿರ ಬಂದು ‘ಸೌಮ್ಯವಾದ ಕೋಪದಿಂದ’ ‘ ಆಂಟಿ ನಾನು ಅವತ್ತಿಂದ ನೋಡ್ತಿದ್ದೀನಿ. ಧಾರಾವಾಹಿಯಲ್ಲಿ ನನ್ನ ಹೆಸರು ಯಾಕೆ ಇನ್ನೂ ಬಂದಿಲ್ಲ?’ ಎಂದು ಕೇಳಿದಳು. ನನಗರ್ಥವಾಯ್ತು, ತನ್ನ ಪ್ರೀತಿಪಾತ್ರ ಆಂಟಿ ತನ್ನ ಹೆಸರಲ್ಲದೆ ಬೇರೆ ಹೆಸರುಗಳನ್ನು ಪಾತ್ರಗಳಿಗೆ ಇಡಲು ಸಾಧ್ಯವೆ? ಪಟ್ಟನೆ ನಾನು ಎಚ್ಚೆತ್ತು ಹೇಳಿದೆ ‘ ಅಚ್ಚು ಮುಂದಿನ ಸೀರಿಯಲ್ ನಲ್ಲಿ ಮುಖ್ಯ ಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇರುತ್ತೆ ನೋಡು. ಪ್ರಾಮಿಸ್? ಎಂದಳು
ಪ್ರಾಮಿಸ್ ಎಂದೆ. ಅದರಂತೆ ನನ್ನ ಮುಂದಿನ ಮಕ್ಕಳ ಧಾರಾವಾಹಿ ಜಿಂ ಜಿಂ ಜಿಂಬಾದಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇಟ್ಟೆ.

ಇದನ್ನೂ ಓದಿ: Spandana Vijay Raghavendra : ಸ್ಪಂದನಾ ಸಾವಿಗೆ ಸಿಎಂ, ಡಿಸಿಎಂ ಕಂಬನಿ, ಹೆಲ್ತ್‌ ಚೆಕಪ್‌ ಮಾಡ್ಕೊಳ್ಳಿ ಎಲ್ರು ಎಂಬ HDK

ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ

ಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಅಚ್ಚುಗಳು ನನ್ನ ಎಲ್ಲಾ ಸೀರಿಯಲ್‌ಗಳಲ್ಲೂ ಓಡಾಡಿಬಿಟ್ಟರು.
ಈ ಭೂಮಿಗೆ ಬರಲು ಒಳ್ಳೆಯ ಅಪ್ಪ, ಅಮ್ಮಂದಿರ ಆಯ್ಕೆ ಸರಿಯಾಗಿತ್ತು. ಅಣ್ಣನ ಆಯ್ಕೆ ಅದೃಷ್ಟದಿಂದ ಕೂಡಿತ್ತು. ಗಂಡನ ಆಯ್ಕೆಗೆ ಸ್ವರ್ಗದಿಂದ ದೇವತೆಗಳೆಲ್ಲ ಬಂದು ಹರಸಿದರು. ಮಗನ ಆಯ್ಕೆಯೂ ಸ್ವರ್ಗದಿಂದ ಬಂದ ಮುದ್ದಾದ ದೇವರಾಗಿತ್ತು. ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟುಬೇಗ ನಿನ್ನ ತವರುಮನೆ oneway ಆ ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ…ಅಲ್ಲೂ ಹೀಗೆ ಸುಖವಾಗಿರು ಕಂದಾʼʼ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

Exit mobile version