ಮುಂಬಯಿ: ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಮಾತು. ಸೆಪ್ಟೆಂಬರ್ 30ರಂದು ಸಿನಿಮಾ ಬಿಡುಗಡೆ ಆದಾಗಿನಿಂದಲೂ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾದ್ದೇ ಹವಾ. ಜಾಗತಿಕವಾಗಿ 100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಕೂಡ ಆಗಿದೆ. ಈಗಾಗಲೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ, ಇದೇ ವಾರದಲ್ಲಿ ಮಲಯಾಳಂನಲ್ಲೂ ರಿಲೀಸ್ ಆಗಲಿದೆ. ಎಲ್ಲ ಭಾಷೆಗಳ ನಟ-ನಟಿಯರಿಂದಲೂ ಶ್ಲಾಘನೆಗಳ ಸುರಿಮಳೆಯೇ ಸುರಿಯುತ್ತಿದೆ. ಈಗಾಗಲೇ ಶಿಲ್ಪಾ ಶೆಟ್ಟಿ, ಪ್ರಭಾಸ್, ಧನುಷ್, ಅನುಷ್ಕಾ ಶೆಟ್ಟಿ ಸೇರಿ ಹಲವು ಗಣ್ಯರು ಸಿನಿಮಾವನ್ನು ಹೊಗಳಿದ್ದಾರೆ. ಈಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಕಾಂತಾರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಟ್ವೀಟ್ ಮಾಡಿರುವ ಆರ್ಜಿವಿ (ರಾಮ್ ಗೋಪಾಲ್ ವರ್ಮಾ), ‘ದೊಡ್ಡ ಬಜೆಟ್ನ ಸಿನಿಮಾಗಳು ಮಾತ್ರ ಜನರನ್ನು ಥಿಯೇಟರ್ನತ್ತ ಸೆಳೆಯುತ್ತವೆ ಎಂಬುದೊಂದು ನಂಬಿಕೆ ಇತ್ತು. ಅದನ್ನೀಗ ರಿಷಬ್ ಶೆಟ್ಟಿ ಸುಳ್ಳಾಗಿಸಿದ್ದಾರೆ. ಕಾಂತಾರ ಸಿನಿಮಾ ಒಂದೊಳ್ಳೆ ಪಾಠವಾಗಲಿದೆ ಎಂದು ಹೇಳಿದ್ದಾರೆ.
ಹಾಗೇ ಇನ್ನೊಂದು ಟ್ವೀಟ್ ಮಾಡಿರುವ ಅವರು ‘ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ರಿಷಬ್ ಶೆಟ್ಟಿಯವರು ಗುಳಿಗ ದೈವತ್ವ ಹೊಂದಿದ ಶಿವನಂತಾಗಿದ್ದಾರೆ. ಕಾಂತಾರ ಕಲೆಕ್ಷನ್ ನೋಡಿದ ಮೇಲೆ, 300 ಕೋಟಿ, 400 ಕೋಟಿ, 500 ಕೋಟಿ ಬಂಡವಾಳ ಹಾಕಿ ಸಿನಿಮಾ ನಿರ್ಮಾಣ ಮಾಡಿದವರೆಲ್ಲ ಹೃದಯಾಘಾತದಿಂದ ಸಾಯುತ್ತಿದ್ದಾರೆ’ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.
ಹೀಗೆ ಕಾಂತಾರ ಸಿನಿಮಾವನ್ನು ಒಬ್ಬರಲ್ಲ ಒಬ್ಬರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹೊಗಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ‘ಕಾಂತಾರ ಸಿನಿಮಾ ಎರಡು ಬಾರಿ ನೋಡಿದೆ. ಅದೊಂದು ಅದ್ಭುತ ಅನುಭವ-ಪರಿಕಲ್ಪನೆ. ಕಡ್ಡಾಯವಾಗಿ, ಥಿಯೇಟರ್ಗೇ ಹೋಗಿ ನೋಡಬೇಕಾದ ಸಿನಿಮಾ’ ಎಂದು ಹೇಳಿದ್ದರು.
ಇದನ್ನೂ ಓದಿ: ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ | ಕಾಂತಾರ ಅಭಿಮಾನಿಗಳ ಕಿಡಿ