Site icon Vistara News

Richa Chadha Marriage | ರಿಚಾ ಚಡ್ಡಾ ಮದುವೆಗೆ ಸಂಭ್ರಮದ ತಯಾರಿ; ಫೋಟೊಶೂಟ್‌ ವೈರಲ್‌!

Richa Chadha Marriage

ಬೆಂಗಳೂರು: ರಂಗು ರಂಗಿನ ಬಾಲಿವುಡ್ ಕೆಲ ಸಮಯದಿಂದ ಕಳೆಗುಂದಿದೆ. ಸಾಲು ಸಾಲು ಸಿನಿಮಾಗಳು ಹಳ್ಳ ಹಿಡಿಯುತ್ತಿರುವ ಹೊತ್ತಲ್ಲೇ, ಬಿ-ಟೌನ್ ಮಂದಿ ಸೈಲೆಂಟ್ ಆಗಿದ್ದಾರೆ. ಆದರೆ ಬಾಲಿವುಡ್​ನ ಖ್ಯಾತ ನಟಿಯ ವಿವಾಹ ಸಂಭ್ರಮ ಬಿ-ಟೌನ್​ಗೆ ಒಂದಷ್ಟು ಕಳೆತಂದಿದೆ. ರಿಚಾ ಚಡ್ಡಾ ಮದುವೆ (Richa Chadha Marriage) ಅದ್ಧೂರಿಯಾಗಿ ನಡೆಯುತ್ತಿದ್ದು, ಮದುವೆಯ ಫೋಟೊಶೂಟ್ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಿಚಾ ಚಡ್ಡಾ ಮದುವೆಗೆ ಭರ್ಜರಿ ತಯಾರಿ ನಡೆಸಲಾಗಿದೆ. 110 ವರ್ಷ ಇತಿಹಾಸವಿರುವ ಅತ್ಯಂತ ಹಳೆಯ ಕಟ್ಟದಲ್ಲಿ ವಿವಾಹ ಸಮಾರಂಭ ಮೇಳೈಸಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ಪಾರ್ಟಿ ಫೋಟೊಗಳು ವೈರಲ್ ಆಗುತ್ತಿವೆ. ಇದು ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ.

ಅ.4ಕ್ಕೆ ಗಟ್ಟಿಮೇಳ
ರಿಚಾ ಮತ್ತು ಅಲಿ ಫಜಲ್ ಜೋಡಿ ಆಕರ್ಷಕವಾದ ಫೋಟೊಗಳಿಗೆ ಪೋಸ್ ಕೊಟ್ಟಿದ್ದಾರೆ. ಈಗಾಗಲೇ ಕಾಕ್‌ಟೇಲ್ ಪಾರ್ಟಿ, ರಿಸೆಪ್ಷನ್ ಅದ್ಧೂರಿಯಾಗಿ ನಡೆದಿದೆ. ಅಕ್ಟೋಬರ್ 4ರಂದು ಇಬ್ಬರೂ ಹಸೆಮಣೆ ಏರುತ್ತಿದ್ದು ಸಕಲ ಸಿದ್ಧತೆ ಸಾಗಿದೆ. ಅದಕ್ಕೂ ಮುನ್ನ ಆಯೋಜಿಸಿದ್ದ ಪಾರ್ಟಿಯಲ್ಲಿ ಆಪ್ತರು, ಸ್ನೇಹಿತರು ಭಾಗಿಯಾಗಿದ್ದರು. ಪಾರ್ಟಿಯಲ್ಲಿ ನಟಿ ರಿಚಾ ಚಡ್ಡಾ ಗೋಲ್ಡ್ ಕಲರ್ ಸೀರೆಯಲ್ಲಿ ಮಿಂಚಿದ್ದಾರೆ.

ರಿಚಾ ಚಡ್ಡಾ, ಅಲಿ ಫಜಲ್ ವಿವಾಹ ಸಂಭ್ರಮ ಸೆಪ್ಟೆಂಬರ್ 30 ರಂದೇ ಆರಂಭವಾಗಿದೆ. ಅಕ್ಟೋಬರ್ 7ರವರೆಗೆ ಸಮಾರಂಭ ಅದ್ಧೂರಿಯಾಗಿ ಮುಂದುವರಿಯಲಿದೆ. ವಿವಾಹದ ಬಳಿಕ ರಿಚಾ ಹಾಗೂ ಅಲಿ ಫಜಲ್ ಜೋಡಿ ಚಿತ್ರರಂಗದ ಗಣ್ಯರಿಗಾಗಿ, ಆಪ್ತರಿಗೆ ಮುಂಬೈನಲ್ಲಿ ಆರತಕ್ಷತೆ ಹಮ್ಮಿಕೊಂಡಿದೆ. ಕಾರ್ಯಕ್ರಮ ಅ.7ರಂದು ನಡೆಯಲಿದ್ದು, ಇಲ್ಲಿಗೆ ರಿಚಾ ಮದುವೆ ಸಮಾರಂಭ ಮುಗಿಯಲಿದೆಯಂತೆ. ಸದ್ಯ ದೆಹಲಿಯ ಅತ್ಯಂತ ಹಳೆಯ ಕ್ಲಬ್​ನಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಅಂದಹಾಗೆ ನಟಿ ರಿಚಾ ಚಡ್ಡಾಗೆ ಕನ್ನಡ ಸಿನಿರಂಗದ ನಂಟು ಕೂಡ ಇದ್ದು, ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಶಕೀಲಾ’ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: Pavan Wadeyar | ಸ್ಯಾಂಡಲ್​ವುಡ್ ಸ್ಟಾರ್ ಪವನ್ ಒಡೆಯರ್ ಈಗ ಆಸ್ಕರ್ ಜ್ಯೂರಿ

Exit mobile version