Site icon Vistara News

Rishab Shetty: ಬೇರೆ ಭಾಷೆಗಳಿಂದಲೂ ರಿಷಬ್‌ಗೆ ಭಾರಿ ಆಫರ್‌; ಕಾಂತಾರ 2 ಕಥೆ ಏನು?

Rishab Shetty

ಬೆಂಗಳೂರು: ರಾಜ್‌ ಬಿ.ಶೆಟ್ಟಿ ನಟನೆಯ “ಟೋಬಿ’ ಚಿತ್ರದ ಟ್ರೈಲರ್‌ ಶುಕ್ರವಾರ (ಆ.4) ರಕ್ಷಿತ್‌ ಶೆಟ್ಟಿ ಹಾಗೂ ರಿಷಬ್‌ ಶೆಟ್ಟಿ (Rishab Shetty) ಬಿಡುಗಡೆಗೊಳಿಸಿದರು. ರಿಷಬ್‌ ಈ ಸಂದರ್ಭದಲ್ಲಿ, ಕಾಂತಾರ ಪ್ರೀಕ್ವೆಲ್‌ ಸ್ಕ್ರಿಪ್ಟ್‌ ಪೂರ್ಣಗೊಂಡಿದ್ದು ಪ್ರಿಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದೆ ಎಂದರು. ʻʻಸದ್ಯ ಬರವಣಿಗೆಯ ಕೆಲಸ ಮುಗಿದಿದೆ. ಡೈಲಾಗ್ ಲಾಕ್ ಆಗಿದೆ. ಎರಡು ಹಂತದಲ್ಲಿ ಬರೆವಣಿಗೆ ಕೆಲಸ ಮುಗಿಸಿರುವೆ. ನಾನು ಮತ್ತು ನನ್ನ ತಂಡ ಸ್ಕ್ರಿಪ್ಟ್ ಮಾಡುವಾಗ ಹಲವಾರು ರೀತಿಯ ಆಯಾಮಗಳನ್ನು ಹುಡುಕಿಕೊಂಡು, ಸಂಶೋಧನೆ ಮಾಡಿ ಸ್ಕ್ರಿಪ್ಟ್ ಲಾಕ್ ಮಾಡಿದ್ದೇವೆʼʼ ಎಂದರು.

ಲೊಕೇಷನ್ ಹುಡುಕಾಟದ ಜತೆ ಜತೆಗೆ ಕಲಾವಿದರ ಆಯ್ಕೆಯ ಕೆಲಸ ಕೂಡ ನಡೆದಿದೆಯಂತೆ. ʻʻಈ ಸಿನಿಮಾದ ಪಾತ್ರಕ್ಕಾಗಿ ಮತ್ತಷ್ಟು ಉದ್ದದ ಗಡ್ಡ ಬಿಡಬೇಕು. ಮಳೆಯಲ್ಲೇ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಮುಹೂರ್ತ, ಶೂಟಿಂಗ್ ಮತ್ತಿತರ ಬಗ್ಗೆ ನಿರ್ಮಾಣ ಸಂಸ್ಥೆಯೇ (Hombale Films) ಮಾಹಿತಿ ನೀಡಲಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.

ʻʻಕಾಂತಾರ-2′ ಚಿತ್ರೀಕರಣಕ್ಕೆ ಯಾವುದೇ ನಿರ್ದಿಷ್ಟ ಸಮಯದ ಮಿತಿ ಹಾಕಿಕೊಂಡಿಲ್ಲ. ಮೊದಲ ಭಾಗವು ಎಷ್ಟು ಸಮಯದ ಮಿತಿಯನ್ನು ಬಯಸಿತ್ತೋ, ಅಷ್ಟೇ ಸಮಯದಲ್ಲಿ ಅದರ ಚಿತ್ರೀಕರಣ ಮುಗಿಸಿದ್ದೆವು. ಪ್ರಿಕ್ವೆಲ್ ಕಥೆಯ ಬೇಡಿಕೆ ಏನಿರುತ್ತದೆಯೋ ಅಷ್ಟೇ ಸಮಯವನ್ನು ಅದಕ್ಕೆ ನೀಡುತ್ತೇವೆ’ ಎನ್ನುತ್ತಾರೆ ರಿಷಬ್‌.

ಇದನ್ನೂ ಓದಿ: Rishab Shetty: ರಮ್ಯಾಗೆ ತಿರುಗೇಟು ಕೊಟ್ಟ ರಿಷಬ್‌, ರಾಜ್‌ ಬಿ ಶೆಟ್ಟಿ; ‘ಹಾಸ್ಟೆಲ್ ಹುಡುಗರ’ ಸುತ್ತ ಅನುಮಾನದ ಹುತ್ತ!

ಕಾಂತಾರ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಬೇರೆ ಸಿನಿಮಾ ರಂಗದಿಂದ ರಿಷಬ್ ಶೆಟ್ಟಿಗೆ (Rishabh Shetty) ಆಫರ್ ಬಂದಿದ್ದು ನಿಜ ಎಂದಿದ್ದಾರೆ ರಿಷಬ್‌. ʻʻಬೇರೆ ಭಾಷೆಗಳಿಂದ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಆದರೆ ನನಗೆ ‘ಕಾಂತಾರ’ವೇ ಆದ್ಯತೆ. ಕಾಂತಾರ’ದ ಯಶಸ್ಸಿಗೆ ಕನ್ನಡಿಗರು ಕಾರಣ. ಇವರು ನೀಡಿರುವ ಯಶಸ್ಸಿನ ಬೆನ್ನಲ್ಲೇ ಬೇರೆ ಭಾಷೆಯಲ್ಲಿ ಅವಕಾಶ ಬಂತೆಂದು ಓಡಿ ಹೋಗುವುದಿಲ್ಲ. ಹೊರಗಡೆಯಿಂದ ಬಂದ ತಂತ್ರಜ್ಞರು, ನಿರ್ದೇಶಕರು ಕನ್ನಡ ಸಿನಿಮಾ ಮಾಡಿ ಪ್ರಪಂಚದಾದ್ಯಂತ ತೆಗೆದುಕೊಂಡು ಹೋದರೆ ಅಭ್ಯಂತರವಿಲ್ಲ. ನನ್ನ ಆದ್ಯತೆ ಕನ್ನಡ ಸಿನಿಮಾ. “ಕಾಂತಾರ-2′ ಪೂರ್ಣಗೊಂಡ ಬಳಿಕ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ’ ಎಂದರು ರಿಷಬ್‌.

Exit mobile version