ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೊಗಳಿದ್ದಾರೆ. ಈ ಪ್ರೇಮದ ಅಲೆ ಈಗ ಭಾವಪ್ರವಾಹವಾಗಿ ಬಂದು ಮನದ ತೀರಕ್ಕೆ ಬಡಿದಿದೆ ಎಂದು ಬರೆದುಕೊಂಡಿದ್ದಾರೆ. ಆಗಸ್ಟ್ 31 ರಂದೇ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿತ್ತು. ಚಿತ್ರರಂಗದ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಇದೀಗ ರಿಷಬ್ ಪೋಸ್ಟ್ ಮಾಡಿ ʻʻಸಪ್ತ ಸಾಗರದಾಚೆ ಎಲ್ಲೋ’ ಹುಟ್ಟಿದ ಈ ಪ್ರೇಮದ ಅಲೆ ಈಗ ಭಾವಪ್ರವಾಹವಾಗಿ ಬಂದು ಮನದ ತೀರಕ್ಕೆ ಬಡಿದಿದೆ. ಹೇಮಂತ್, ಗುಂಡು ಶೆಟ್ಟಿ, ಬರವಣಿಗೆ ಅಕ್ಷರಶಃ ಕಡಲನ್ನು ಕವಿತೆಯಾಗಿಸಿದೆ. ಚರಣ್ ರಾಜ್ ಸಂಗೀತ ಅದರ ತೆರೆಗಳಷ್ಟೆ ಲಯಬದ್ಧ. ಅದೈತ್ ಅತ್ಯುತ್ತಮವಾಗಿ ದೃಶ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ರಕ್ಷಿತ್ ಹಾಗು ರುಕ್ಕಿಣಿ ಪಾತ್ರದಲ್ಲಿ ಆಳಕ್ಕಿಳಿದು ಜೀವಿಸಿದ್ದು. ಇದುವರೆಗಿನ ರಕ್ಷಿತ್ ವೃತ್ತಿ ಜೀವನದಲ್ಲೆ ದಿ ಬೆಸ್ಟ್ ಪರ್ಫಾರ್ಮೆನ್ಸ್ ಇದಾಗಿತ್ತು. ರುಕ್ಕಿಣಿ ವಸಂತ್ ಚಂದನವನದ ಆಸ್ತಿ ಆಗುವದರಲ್ಲಿ ಸಂಶಯವಿಲ್ಲ. ನಿರೀಕ್ಷೆಗಳಿಗೆ ನಿಲುಕದ ಅತೀ ಸುಂದರ ಪ್ರೇಮಕಥೆಯನ್ನು ಕನ್ನಡಕ್ಕೆ ಕೊಟ್ಟ ಚಿತ್ರತಂಡಕ್ಕೆ ಧನ್ಯವಾದಗಳು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಿ ಆಶೀರ್ವಾದ ಮಾಡಿ” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಜೊತೆಗೆ ”ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ. ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಒಂದಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರಮಂದಿರದಲ್ಲೇ ನೋಡಿ ಮನು ಹಾಗು ಪ್ರಿಯಾರ ಜಗತ್ತಲ್ಲಿ ಭಾಗಿಯಾಗಿ” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Rishab Shetty:`ಲಗಾನ್’ ಸಿನಿಮಾ ನಿರ್ದೇಶಕರ ಸಿನಿಮಾಗೆ ರಿಷಬ್ ಶೆಟ್ಟಿ ಹೀರೊ?
ಚಿತ್ರತಂಡ ಬಿಡುಗಡೆಗೂ ಹಿಂದಿನ ದಿನವೇ ಚಿತ್ರದ ಪ್ರೀಮಿಯರ್ ಶೋಗಳನ್ನು ಆಯೋಜಿಸಿತ್ತು. ಸೆಲೆಬ್ರಿಟಿ ಪ್ರೀಮಿಯರ್ ಶೋಗಳು ಮಾತ್ರವಲ್ಲದೇ ಸಾಮಾನ್ಯ ಸಿನಿ ರಸಿಕರಿಗೂ ಸಹ ಪ್ರೀಮಿಯರ್ ಶೋಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಇದೀಗ ಸಿನಿಮಾ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಇದೊಂದು ದೃಶ್ಯಕಾವ್ಯ ಎಂದು ಹಾಡಿ ಹೊಗಳಿದ್ದಾರೆ.
ಟ್ರೈಲರ್ನಲ್ಲಿ ನಾಯಕಿ ಪಾತ್ರ ವಹಿಸಿರುವ ರುಕ್ಮಿಣಿ ವಸಂತ್ ಅವರ ಧ್ವನಿಯೇ ಕೇಳಿ ಬರುತ್ತಿದೆ. ಅವರೇ ಕತೆಯನ್ನು ನಿರೂಪಣೆ ಮಾಡಿದಂತಿದೆ. ಸರಳವಾಗಿ ಕಾಣುವ ಅವರು ತಮ್ಮ ಪಾತ್ರದಲ್ಲಿ ತುಸು ಹೆಚ್ಚು ತಲ್ಲೀನರಾಗಿದ್ದಾರೆ. ರಕ್ಷಿತ್ ಶೆಟ್ಟಿ ಲವರ್ ಬಾಯ್ ಆಗಿ, ದುರಂತ ನಾಯಕನಾಗಿ ಮಿಂಚಿದ್ದಾರೆ. ವಿಭಿನ್ನವಾದ ಹೇರ್ಸ್ಟೈಲ್ ಮೂಲಕವೂ ಅವರು ಗಮನ ಸೆಳೆದಿದ್ದಾರೆ.
ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಟ್ರೈಲರ್ನಲ್ಲಿ ಮೇಳೈಸಿದೆ. ಹಿತ ಮತ್ತು ಮಿತವಾಗಿರುವ ಸಂಗೀತ ವೀಕ್ಷಕನ ಮನಕ್ಕೆ ನಾಟುವಂತಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಜತೆಗೆ ಅಚ್ಯುತ್ ಕುಮಾರ್, ಅವಿನಾಶ್, ಚೈತ್ರಾ ಆಚಾರ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ರಕ್ಷಿತ್ ಶೆಟ್ಟಿ.