ಬೆಂಗಳೂರು: ಇಂದು (ಜುಲೈ 7)ರಂದು ರಿಷಬ್ ಶೆಟ್ಟಿ (Rishab Shetty) ಅವರ ಜನುಮದಿನ. 41ನೇ ವಸಂತಕ್ಕೆ ರಿಷಬ್ ಕಾಲಿಟ್ಟಿದ್ದಾರೆ. ಈ ದಿನದಂದು ಪತ್ನಿ ಪ್ರಗತಿ ಶೆಟ್ಟಿ ಅವರು ʻನನ್ನ ಜೀವನದ ಆಧಾರಸ್ತಂಭʼ ಎಂದು ಶುಭಕೋರಿದ್ದಾರೆ. ರಿಷಬ್‌ಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
ಪ್ರಗತಿ ಶೆಟ್ಟಿ ಪೋಸ್ಟ್ ಮಾಡಿ ʻʻನನ್ನ ಜೀವನದ ಆಧಾರಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು. ನೀವು ಎಂತಹ ಅದ್ಭುತ ವ್ಯಕ್ತಿ ಎಂದು ನಾನು ಜೋರಾಗಿ ಜಗತ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮನ್ನು ನಿಜವಾಗಿಯೂ ತಿಳಿದಿರುವವರು ಅದೃಷ್ಟವಂತರು.ನಿಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರೀತಿ ಪ್ರತಿದಿನ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ. ನಾವು ಒಟ್ಟಿಗೆ ಇರುವುದಕ್ಕಾಗಿ ನಾನು ಪ್ರತಿದಿನ ದೇವರಿಗೆ ಕೃತಜ್ಞನಾಗಿದ್ದೇನೆ. ನಿಮಗೆ ಸಂತೋಷ, ಯಶಸ್ಸು ಮತ್ತು ಪ್ರಪಂಚದ ಎಲ್ಲಾ ಸಂತೋಷದಿಂದ ತುಂಬಿದ ವರ್ಷವಾಗಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಶಯಗಳು” ಎಂದು ಬರೆದುಕೊಂಡಿದ್ದಾರೆ.
ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ನಟನೆಯ ಜತೆ ಡೈರೆಕ್ಷನ್ ಕೂಡ ಆಸಕ್ತಿಯಿದ್ದ ಕಾರಣ, 2016ರಲ್ಲಿ ಅವರು ‘ರಿಕ್ಕಿ’ ಸಿನಿಮಾ ನಿರ್ದೇಶನ ಮಾಡಿದರು. ಅದೇ ವರ್ಷ ರಿಲೀಸ್ ಆದ ರಿಷಬ್ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು.
ಕುಂದಾರಪುರದ ಕೆರಾಡಿ ಗ್ರಾಮದಲ್ಲಿ 1983ರಲ್ಲಿ ರಿಷಬ್ ಶೆಟ್ಟಿ ಜನಿಸಿದ್ದಾರೆ. ಬಾಲ್ಯದಿಂದಲೇ ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಕನ್ನಡದ ಸಿನಿಮಾ ದಿಗ್ಗಜರ ಚಲನಚಿತ್ರಗಳನ್ನು ನೋಡಿದ್ದರು. ಸಿನಿಮಾಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಸಾಧನೆಗಾಗಿ ನಾನಾ ಕೆಲಸಗಳನ್ನು ಮಾಡಿದ್ದರು. ಆರಂಭದಲ್ಲಿ ಸಾಕಷ್ಟು ನಿರಾಸೆ ಎದುರಿಸಿದ್ದ ಅವರು ಸಣ್ಣ ಪುಟ್ಟ ಪಾತ್ರಗಳಿಗೆ ತೃಪ್ತಿಪಡಬೇಕಾಗಿತ್ತು. ರಿಕ್ಕಿ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದರೂ ಖ್ಯಾತಿ ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ʻಉಳಿದವರು ಕಂಡಂತೆʼ ಸಿನಿಮಾ ಮೂಲಕ ಅವರು ಹೆಚ್ಚು ಮಂದಿಗೆ ಪರಿಚಿತರಾದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಮೂಲಕ ಅವರು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದರು. ʻಬೆಲ್ಬಾಟಂʼ ಸಿನಿಮಾದ ಮೂಲಕ ನಟನೆಗೂ ಸೈ ಎನಿಸಿಕೊಂಡರು.
ಇದನ್ನೂ ಓದಿ: Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್ ಕಾರು ರೈಡ್ ಮಾಡಿದ ರಿಷಬ್ ಶೆಟ್ಟಿ ಹೇಳಿದ್ದೇನು?
ಬದುಕು ಬದಲಿಸಿದ ಕಾಂತಾರ
ತಾವು ಹುಟ್ಟಿದ ಮಣ್ಣಿನ ಕತೆಯೊಂದನ್ನು ಹುಡುಕಿ ತೆಗೆದು ಕಾಂತಾರ ಸಿನಿಮಾ ಮಾಡಿದ ಬಳಿಕ ಅವರ ಪೂರ್ಣ ಸಾಮರ್ಥ್ಯ ಜಗತ್ತಿಗೆ ಪರಿಚಯವಾಯಿತು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವ ಮೂಲಕ ರಿಷಬ್ ಶೆಟ್ಟಿ ಎಂಬ ಕೆರಾಡಿ ಪ್ರತಿಭೆ ಜಗದ್ವಿಖ್ಯಾತಿ ಪಡೆಯಿತು. ಬಳಿಕ ಡಿವೈನ್ ಸ್ಟಾರ್ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಅವರು ಕಾಂತಾರ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರೀಗ ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ಸುತ್ತುವರಿಯುತ್ತಾರೆ.