Site icon Vistara News

Rishab Shetty : ಜುಲೈ 7ರಂದು ಅಭಿಮಾನಿಗಳ ಜತೆ ಜನುಮದಿನ ಆಚರಿಸಲಿದ್ದಾರೆ ಡಿವೈನ್​ ಸ್ಟಾರ್​

Rishab shetty

ಬೆಂಗಳೂರು: ಕಾಂತಾರ ಸಿನಿಮಾದ ಮೂಲಕ ಜಾಗತಿಕ ಜನಪ್ರಿಯತೆ ಪಡೆಯುವ ಜತೆಗೆ ಅಭಿಮಾನಿಗಳ ಸಂಖ್ಯೆಯನ್ನು ಲಕ್ಷಗಟ್ಟಲೆ ಹೆಚ್ಚಿಸಿಕೊಂಡ ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ಜುಲೈ 7ರಂದು ಬೆಂಗಳೂರಿನಲ್ಲಿ ಅಭಿಮಾನಿಗಳ ಜತೆ ತಮ್ಮ ಜನುಮದಿನ ಆಚರಿಸಿಕೊಳ್ಳಲಿದ್ದಾರೆ. ನಗರದ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಅವರ ಜನುಮದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು ಲಕ್ಷಾಂತರ ಅಭಿಮಾನಿಗಳು ಅವರಿಗೆ ಅಂದು ಶುಭಾಶಯ ಕೋರಲಿದ್ದಾರೆ.

ತಮ್ಮ ಜನುಮ ದಿನದ ಸಂಭ್ರಮದ ಕುರಿತು ಅವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಅಭಿಮಾನಿಗಳೆಲ್ಲರಿಗೂ ಸ್ವಾಗತ ಕೋರಿದ್ದಾರೆ. ಕೆರಾಡಿ ಎಂಬ ಊರಲ್ಲಿ ಹುಟ್ಟಿ ಸಿನಿಮಾದ ಕನಸು ಕಂಡಿರುವ ನನ್ನ ಮೇಲೆ ಅಪಾರ ಪ್ರೀತಿ ತೋರಿಸಿದ್ದೀರಿ. ಕಾಂತಾರ ಬಿಡುಗಡೆಗೊಂಡ ಬಳಿಕ ನನ್ನನ್ನು ಭೇಟಿಯಾಗಲು ನನ್ನ ಮನೆ ಬಳಿಗೆ ಬಂದ್ದೀರಿ. ನಾನು ಹೋದಲ್ಲೆಲ್ಲ ನನ್ನನ್ನು ಮಾತನಾಡಿಸಲೆಂದು ಕಾದಿದ್ದೀರಿ. ನಿಮ್ಮನ್ನು ಭೇಟಿಯಾಗುವ ಸಮಯ ಬಂದಿದೆ. ಇದೇ ಜುಲೈ 7ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್​ನಲ್ಲಿ ನನ್ನ ಬರ್ತ್​ಡೇ ಕಾರ್ಯಕ್ರಮ ಆಯೋಜಿಸಿದ್ದೇನೆ. ಸಂಜೆ ಮೂರು ಗಂಟೆಗೆ ಬನ್ನಿ. ಪರಸ್ಪರ ಭೇಟಿಯಾಗೋಣ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : Rishab Shetty: ಒಬಾಮಾ ಭಾಷಣ ಮಾಡಿದ ಜಾಗದಲ್ಲಿ ʻವಿಶ್ವ ಶ್ರೇಷ್ಠ ಕನ್ನಡಿಗʼ ಅವಾರ್ಡ್​ ಪಡೆದ ರಿಷಬ್‌ ಶೆಟ್ಟಿ

ಕುಂದಾರಪುರದ ಕೆರಾಡಿ ಗ್ರಾಮದಲ್ಲಿ 1983ರಲ್ಲಿ ರಿಷಬ್​ ಶೆಟ್ಟಿ ಜನಿಸಿದ್ದಾರೆ. ಬಾಲ್ಯದಿಂದಲೇ ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಕನ್ನಡದ ಸಿನಿಮಾ ದಿಗ್ಗಜರ ಚಲನಚಿತ್ರಗಳನ್ನು ನೋಡಿದ್ದರು. ಸಿನಿಮಾಕ್ಕಾಗಿಯೇ ಬೆಂಗಳೂರಿಗೆ ಬಂದಿದ್ದ ಅವರು ತಮ್ಮ ಸಾಧನೆಗಾಗಿ ನಾನಾ ಕೆಲಸಗಳನ್ನು ಮಾಡಿದ್ದರು. ಆರಂಭದಲ್ಲಿ ಸಾಕಷ್ಟು ನಿರಾಸೆ ಎದುರಿಸಿದ್ದ ಅವರು ಸಣ್ಣ ಪುಟ್ಟ ಪಾತ್ರಗಳಿಗೆ ತೃಪ್ತಿಪಡಬೇಕಾಗಿತ್ತು. ರಿಕ್ಕಿ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದರೂ ಖ್ಯಾತಿ ಗಳಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಉಳಿದವರು ಕಂಡಂತೆ ಸಿನಿಮಾ ಮೂಲಕ ಅವರು ಹೆಚ್ಚು ಮಂದಿಗೆ ಚಿರಪರಿಚಿತರಾದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾ ಮೂಲಕ ಅವರು ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದರು. ಬೆಲ್​ಬಾಟಂ ಸಿನಿಮಾದ ಮೂಲಕ ನಟನೆಗೂ ಸೈ ಎನಿಸಿಕೊಂಡರು.

ಬದುಕು ಬದಲಿಸಿದ ಕಾಂತಾರ

ತಾವು ಹುಟ್ಟಿದ ಮಣ್ಣಿನ ಕತೆಯೊಂದನ್ನು ಹುಡುಕಿ ತೆಗೆದು ಕಾಂತಾರ ಸಿನಿಮಾ ಮಾಡಿದ ಬಳಿಕ ಅವರ ಪೂರ್ಣ ಸಾಮರ್ಥ್ಯ ಜಗತ್ತಿಗೆ ಪರಿಚಯವಾಯಿತು. ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆಗುವ ಮೂಲಕ ರಿಷಬ್​ ಶೆಟ್ಟಿ ಎಂಬ ಕೆರಾಡಿ ಪ್ರತಿಭೆ ಜಗದ್ವಿಖ್ಯಾತಿ ಪಡೆಯಿತು. ಬಳಿಕ ಡಿವೈನ್​ ಸ್ಟಾರ್​ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿರುವ ಅವರು ಕಾಂತಾರ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರೀಗ ಎಲ್ಲೇ ಹೋದರೂ ಅಭಿಮಾನಿಗಳು ಅವರನ್ನು ಸುತ್ತುವರಿಯುತ್ತಾರೆ. ಆದರೆ ಪ್ರತಿ ಬಾರಿಯೂ ಅವರನ್ನು ಭೇಟಿಯಾಗಲು ಅವರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಜನುಮದಿನದಂದು ಅವರೆಲ್ಲರ ಹಾರೈಕೆಗಳನ್ನು ಪಡೆಯಲು ಮುಂದಾಗಿದ್ದಾರೆ.

Exit mobile version